Wife Bites Husband Ear: ಉತ್ತರ ಪ್ರದೇಶದ ಕಾನ್ಪುರದಲ್ಲಿ ಗಂಡ-ಹೆಂಡತಿಯ ಜಗಳ ವಿಕೋಪಕ್ಕೆ ತಿರುಗಿದ್ದು, ಪತ್ನಿ ತನ್ನ ಪತಿಯ ಕಿವಿಯನ್ನು ಕಚ್ಚಿ ಗಾಯಗೊಳಿಸಿದ್ದಾಳೆ. 8 ವರ್ಷಗಳ ಹಿಂದೆ ಈ ದಂಪತಿ ಪ್ರೀತಿಸಿ ಮದ್ವೆಯಾಗಿದ್ದರು.
ಪತಿಯ ಕಿವಿ ಕಚ್ಚಿ ಗಾಯಗೊಳಿಸಿದ ಪತ್ನಿ
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲಿ ಗಂಡ ಹೆಂಡತಿ ಜಗಳ ಪರಸ್ಪರ ಹಲ್ಲೆಯವರೆಗೂ ತಲುಪಿದ್ದು, ಹೆಂಡತಿಯೊಬ್ಬಳು ಗಂಡನನ್ನು ಥಳಿಸಿ ಆತನ ಕಿವಿಯನ್ನು ಕಚ್ಚಿ ಗಾಯಗೊಳಿಸಿದ್ದಾಳೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ಸೋಮವಾರ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪತಿ ಪತ್ನಿ ಇಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
8 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದ ಜೋಡಿ:
ಅಮಿತ್ ಸೋನ್ಕರ್ ಎಂಬುವವನ್ನು ಅವರ ಪತ್ನಿ ಸಾರಿಕಾ ಕಚ್ಚಿ ಗಾಯಗೊಳಿಸಿದ್ದಾರೆ ಘಟನೆಯ ಬಳಿಕ ರಕ್ತ ಸೋರುತ್ತಿದ್ದ ಅಮಿತ್ ಸೋನ್ಕರ್‌ಗೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಕಿವಿಗೆ ದೊಡ್ಡ ಬ್ಯಾಂಡೇಜ್ ಹಾಕಲಾಗಿದೆ. 8 ವರ್ಷಗಳ ಹಿಂದೆ ಅಮಿತ್ ಸೋನ್ಕರ್ ಹಾಗೂ ಸಾರಿಕಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ದಾಂಪತ್ಯದಲ್ಲಿನ ವಿರಸದ ನಂತರ ಇಬ್ಬರು ಪರಸ್ಪರ ದೂರಾಗಲು ಮುಂದಾಗಿದ್ದು, ಇಬ್ಬರು ವಿಚ್ಛೇದನಕ್ಕಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಆಗಾಗ ಜಗಳಗಳಾಗುತ್ತಿದ್ದವು. ಅದೇ ರೀತಿ ಸೋಮವಾರ ರಾತ್ರಿಯೂ ಇಬ್ಬರ ಮಧ್ಯೆ ಜಗಳವಾಗಿದ್ದು, ಈ ವೇಳೆ ಪತ್ನಿ ಪತಿಯ ಕಿವಿಯನ್ನು ಕಚ್ಚಿ ತುಂಡರಿಸಿದ್ದಾಳೆ.
ಹಣ, ಮನೆ ಸಿಕ್ಕ ನಂತರ ಪತ್ನಿ ಬದಲಾದಳು ಎಂದು ಪತಿಯ ಅಳಲು:
ಆಕೆ ಹಲ್ಲುಗಳಿಂದ ನನ್ನ ಕಿವಿಯನ್ನು ಕಚ್ಚಿ ಗಾಯಗೊಳಿಸಿದ್ದಾಳೆ. ಆಕೆಗೆ ನನ್ನೊಂದಿಗೆ ಬದುಕಲು ಇಷ್ಟವಿಲ್ಲ, ಆಕೆಗೆ ಮನೆ ಹಾಗೂ ಹಣ ಸಿಕ್ಕ ಮೇಲೆ ಆಕೆ ತನ್ನನ್ನು ಬಿಟ್ಟು ಬಿಡುವಂತೆ ನನಗೆ ಒತ್ತಾಯ ಮಾಡುತ್ತಿದ್ದಾಳೆ. ಆದರೆ ನಾವು ಬಡವರು, ತರಕಾರಿ ಮಾರಿ ಬದುಕುತ್ತಿದ್ದೇವೆ. ನಮಗೆಲ್ಲಿ ಅಷ್ಟೊಂದು ಹಣ ಸಿಗುತ್ತದೆ ಎಂದು ಆಕೆಯ ಪತಿ ಅಮಿತ್ ಸೋನ್ಕರ್ ಹೇಳಿದ್ದಾರೆ.
ಘಟನೆ ನಡೆಯುವ ವೇಳೆ ನಾನು ಸೋಫಾದಲ್ಲಿ ಮಲಗಿದ್ದೆ. ಆಗ ಗಲಾಟೆ ಶುರು ಮಾಡಿದ ಪತ್ನಿ ಸಾರಿಕಾ ನನಗೆ ಥಳಿಸಿ ಹಲ್ಲೆ ಮಾಡಿದ್ದಾಳೆ. ಸೋಲವಾರ ಮನೆಯಲ್ಲಿ ಸ್ವಚ್ಚತಾ ಕೆಲಸಗಳು ನಡೆಯುತ್ತಿದ್ದವು. ಈ ವೇಳ ನಾನು ಸೋಫಾದಲ್ಲಿ ಮಲಗಿದ್ದೆ. ಈ ವೇಳೆ ಕೋಪಗೊಂಡಿದ್ದ ಆಕೆ , ನಾನು ಸೋಫಾದಲ್ಲಿ ಮಲಗಿದ್ದಾಗ ನನ್ನೊಂದಿಗೆ ಜಗಳವಾಡಲು ಪ್ರಾರಂಭಿಸಿದಳು. ನಾನು ನನ್ನನ್ನು ರಕ್ಷಿಸಿಕೊಳ್ಳಲು ಅವಳನ್ನು ತಳ್ಳಿದೆ, ನಂತರ ಹೊಡೆದೆ. ಅದರ ನಂತರ, ಅವಳು ಹಾಸಿಗೆಯ ಮೇಲೆ ನಿಂತಿದ್ದಳು, ನಾನು ಕೆಳಗೆ ನಿಂತಿದ್ದೆ ಈ ವೇಳೆ ಅವಳು ಹಲ್ಲುಗಳಿಂದ ನನ್ನ ಕಿವಿಯನ್ನು ಕಚ್ಚಿದಳು ಎಂದು ಪತಿ ಅಮೀತ್ ದೂರಿದ್ದಾರೆ.
ಪರಸ್ಪರ ದೂರು ನೀಡಿದ ಪತಿ ಪತ್ನಿ
ಅಲ್ಲದೇ ತನ್ನ ಪತ್ನಿ ತನ್ನ ಮೇಲೆ ತೀಕ್ಷ್ಣವಾದ ಆಯುಧದಿಂದ ದಾಳಿ ಮಾಡಿದ್ದಾಳೆ ಎಂದೂ ಅವರು ಆರೋಪಿಸಿದ್ದಾರೆ. 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಈ ದಂಪತಿಯ ಮಧ್ಯೆ ಪ್ರಸ್ತುತ ವಿರಸ ಮೂಡಿದ್ದು, ವಿಚ್ಛೇದನದತ್ತ ಹೆಜ್ಜೆಇಟ್ಟಿದ್ದಾರೆ. ಇವರ ಡಿವೋರ್ಸ್ ಕೇಸ್ ಕೋರ್ಟ್‌ನಲ್ಲಿ ಪೆಂಡಿಂಗ್‌ನಲ್ಲಿದೆ. ಘಟನೆಯಲ್ಲಿ ಗಂಡನ ಬಲಕಿವಿಗೆ ಗಾಯವಾಗಿದ್ದು, ಬ್ಯಾಂಡೇಜ್ ಹಾಕಲಾಗಿದೆ. ಅವರು ತಮ್ಮ ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಆಕೆಯ ಜೊತೆ ವಾಸ ಮಾಡುವುದಕ್ಕೆ ಆಗದು ಎಂದು ಹೇಳಿದ್ದಾರೆ.
ಹಾಗೆಯೇ ಪತ್ನಿ ಸಾರಿಕಾ ಕೂಡ ಪತಿ ಅಮಿತ್ ವಿರುದ್ಧ ಪೊಲೀಸರಿಗೆ ಪ್ರತಿದೂರು ನೀಡಿದ್ದು ಆತ ಹಿಂಸೆ ನೀಡುತ್ತಿದ್ದಾನೆ ಎಂದು ದೂರಿದ್ದಾಳೆ. ಈ ಗಂಡ ಹೆಂಡತಿ ನಡುವೆ ವಿಚ್ಛೇದನ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದೆ. ಇವರ ಈ ಗಲಾಟೆಯೇ ದೈಹಿಕ ಕಿತ್ತಾಟಕ್ಕೆ ಕಾರಣವಾಗಿದೆ. ಸಾರಿಕಾ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ ಮತ್ತು ಈ ವಿಷಯ ತನಿಖೆಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ 99.99 ಅಂಕ: ಡಾಕ್ಟರ್ ಆಗೋಕೆ ಇಷ್ಟ ಇಲ್ಲ ಎಂದು ಸಾವಿಗೆ ಶರಣಾದ ವಿದ್ಯಾರ್ಥಿ
ಇದನ್ನೂ ಓದಿ: ತಾತನ ಸಾವಿಗೆ ಸಂತಾಪದ ಪೋಸ್ಟ್ ಹಾಕಿದ್ದ ಮೊಮ್ಮಗ: ನಗುವಿನ ಇಮೋಜಿ ಹಾಕಿದ್ದಕ್ಕೆ ಕೊಲೆ
