ಬೆಂಗಳೂರಿನ ಕಾಡುಗೋಡಿಯಲ್ಲಿ ಮಾವನನ್ನು ಅಳಿಯ, ಪತ್ನಿ ಮತ್ತು ಮಗಳು ಸೇರಿ ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಕೋಲಾರಕ್ಕೆ ಕೊಂಡೊಯ್ದು ಪೆಟ್ರೋಲ್ ಸುರಿದು ಸುಟ್ಟಿರುವುದಾಗಿ ಆರೋಪಿಸಲಾಗಿದೆ.

ಬೆಂಗಳೂರು (ಆ.2): ಬೆಂಗಳೂರಿನ ಕಾಡುಗೋಡಿಯಲ್ಲಿ ಗೋಡೌನ್ ಕೆಲಸಗಾರನಾಗಿದ್ದ ಬಾಬು (48) ಎಂಬಾತನನ್ನು ಅಳಿಯ ರಾಮಕೃಷ್ಣ, ಪತ್ನಿ ಮುನಿರತ್ನ ಮತ್ತು ಮಗಳು ಸೇರಿಕೊಂಡು ಕೊಲೆ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಕೊಲೆಯಾದ ಬಾಬು ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಕೋಲಾರಕ್ಕೆ ಕೊಂಡೊಯ್ದು ಪೆಟ್ರೋಲ್ ಸುರಿದು ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ರಾಮಕೃಷ್ಣ ಮತ್ತು ಮುನಿರತ್ನರನ್ನು ಬಂಧಿಸಲಾಗಿದೆ.

ಪ್ರಕರಣದ ವಿವರ:

ದೇವನಹಳ್ಳಿ ಮೂಲದ ಬಾಬು ಕಾಡುಗೋಡಿಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು. ಮೂರು ತಿಂಗಳ ಹಿಂದೆ ಅವರ ಮಗಳು ರಾಮಕೃಷ್ಣನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ, ಬಾಬುವಿಗೆ ಈ ಮದುವೆ ಇಷ್ಟವಿರಲಿಲ್ಲ. ಮಗಳು ತಂದೆಯ ಮಾತಿಗೆ ವಿರುದ್ಧವಾಗಿ ಮದುವೆಯಾದಳು. ಜುಲೈ 26ರಂದು ರಾಮಕೃಷ್ಣ ಮತ್ತು ಮಗಳು ಬಾಬು ಅಂದರೆ ಮಾವನ ಮನೆಗೆ ಭೇಟಿಗೆ ಬಂದಿದ್ದರು. ಈ ವೇಳೆ ರಾಮಕೃಷ್ಣ ಮಗಳಿಗೆ ಬಾಯಿಗೆ ಬಂದಂತೆ ಬೈದಿದ್ದನಂತೆ ಈ ಘಟನೆಯಿಂದ ಬಾಬು ಸಿಟ್ಟಾಗಿ ಪತ್ನಿ ಮುನಿರತ್ನ ಕಪಾಳಕ್ಕೆ ಹೊಡೆದಿದ್ದರು. ಇದಕ್ಕೆ ಕೋಪಗೊಂಡ ರಾಮಕೃಷ್ಣ, 'ನನ್ನ ಅತ್ತೆಗೆ ಹೊಡೆಯುತ್ತೀಯಾ?' ಎಂದು ಬಾಬು ಕಪಾಳಕ್ಕೆ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ಬಾಬು ಕುಸಿದುಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆ ಘಟನೆ ಮರೆಮಾಚಲು ಪ್ಲಾನ್:

ಕೊಲೆಯಾದ ಬಾಬುವಿನ ಶವವನ್ನು ಮರೆಮಾಚಲು ಮೂವರು ಒಟ್ಟಾಗಿ ಯೋಜನೆ ರೂಪಿಸಿದ್ದಾರೆ. ಸಂಬಂಧಿಯೊಬ್ಬನ ಆಂಬುಲೆನ್ಸ್ ತರಿಸಿ, ಬೆಳಗ್ಗೆ 3 ಗಂಟೆ ಸುಮಾರಿಗೆ ಮೃತದೇಹವನ್ನು ಕೋಲಾರಕ್ಕೆ ಕೊಂಡೊಯ್ದು, ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ಬಳಿಕ ಏನೂ ಆಗಿಲ್ಲವೆಂಬಂತೆ ಮನೆಗೆ ಮರಳಿದ್ದಾರೆ. ಆರೋಪಿಗಳು ಕೃತ್ಯದ ಬಳಿಕ ಏನಾದರೊಂದು ಸಾಕ್ಷ್ಯ ಬಿಟ್ಟಿರುತ್ತಾರಂತೆ ಅದೇ ರೀತಿ ಕೃತ್ಯ ನಡೆದಾಗ ಈ ಘಟನೆಯನ್ನು ಕಿರಿಮಗಳೊಬ್ಬಳು ನೋಡಿದ್ದು, ನಾಲ್ಕು ದಿನಗಳ ಬಳಿಕ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ. ಬಾಬು ಸಹೋದರನ ದೂರಿನ ಆಧಾರದಲ್ಲಿ ಕಾಡುಗೋಡಿ ಪೊಲೀಸರು ಎಫ್‌ಐಆರ್ ದಾಖಲಿಸಿ, ವಿಚಾರಣೆ ನಡೆಸಿದಾಗ ರಾಮಕೃಷ್ಣ ಮತ್ತು ಮುನಿರತ್ನ ಕೊಲೆಯನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಕಾಡುಗೋಡಿ ಪೊಲೀಸರು ರಾಮಕೃಷ್ಣ ಮತ್ತು ಮುನಿರತ್ನರನ್ನು ಬಂಧಿಸಿ, ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.