ಫೇಸ್‌ಬುಕ್ ಮತ್ತು ವಾಟ್ಸಾಪ್ ಮೂಲಕ ಪುರುಷರನ್ನು ಸಂಪರ್ಕಿಸಿ, ಮದುವೆಯಾಗಿ, ನಂತರ ಹಣ ವಸೂಲಿ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಈಗಾಗಲೇ 8 ಜನರ ಜೊತೆ ವಿವಾಹವಾಗಿದ್ದು, ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ.
ನಾಗ್ಪುರ (ಆ.2): ಈಗಾಗಲೇ 8 ಜನರಿಗೆ ಸುಖಸಂಸಾರದ ಕನಸು ತೋರಿಸಿ, ವರಿಸಿ ಲಕ್ಷಾಂತರ ರುಪಾಯಿಗಳನ್ನು ದೋಚಿದ್ದ ವಧುವಿಗೆ ಇದೀಗ ಪೊಲೀಸರು ಕೈಕೋಳ ತೊಡಿಸಿದ್ದಾರೆ.
ವಂಚಕಿ ಸಮೀರಾ ಫಾತಿಮಾ (35) ಕಳೆದ 15 ವರ್ಷಗಳಿಂದ ಶ್ರೀಮಂತ, ವಿವಾಹಿತ, ವಿಚ್ಛೇದಿತ ಮುಸ್ಲಿಂ ಪುರುಷರನ್ನು ಫೇಸ್‌ಬುಕ್ ಮೂಲಕ ಸಂಪರ್ಕಿಸಿ, ವಾಟ್ಸ್‌ಅಪ್‌ನಲ್ಲಿ ಹತ್ತಿರವಾಗಿ, ತನ್ನ ಜೀವನದ ಬಗ್ಗೆ ದುರಂತ ಕಥೆ ಹೆಣೆದು ವಿವಾಹವಾಗುತ್ತಿದ್ದಳು. ಬಳಿಕ ಪತಿಯ ಮೇಲೆ ಕಿರುಕುಳದ ಸುಳ್ಳು ಆರೋಪ ಹೊರಿಸಿ, ದೂರನ್ನು ಹಿಂಪಡೆಯಲು ದುಡ್ಡಿಗೆ ಬೇಡಿಕೆ ಇಡುತ್ತಿದ್ದಳು. ಆದರೆ ಯಾರಿಗೂ ವಿಚ್ಛೇದನ ಕೊಡುತ್ತಿರಲಿಲ್ಲ. ಈಕೆಯ ಹಿಂದೆ ಒಂದು ಗ್ಯಾಂಗ್ ಇತ್ತು.
ಫಾತಿಮಾ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯಾಗಿದ್ದು, 12 ವರ್ಷದ ಮಗಳೂ ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ
ಬಂಧನ ಹೇಗೆ?
2022ರಲ್ಲಿ ವಿವಾಹವಾಗಿದ್ದ 8ನೇ ಪತಿ ಇಮ್ರಾನ್ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು 2024ರಲ್ಲಿ ಫಾತಿಮಾಳ ಬಂಧನಕ್ಕೆ ಮುಂದಾಗಿದ್ದಾಗ ಆಕೆ 7 ತಿಂಗಳ ಗರ್ಭಿಣಿಯಾಗಿದ್ದ ಕಾರಣ ಬಚಾವಾಗಿದ್ದಳು. ಆದರೆ ಜು.30ರಂದು, ಫಾತಿಮಾ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಹಿಂಪಡೆಯುವ ನೆಪದಲ್ಲಿ ಆಕೆಯನ್ನು ಕೋರ್ಟ್‌ಗೆ ಕರೆಸಿದ್ದ ಇಮ್ರಾನ್, ಪೊಲೀಸರಿಗೆ ಹಿಡಿದುಕೊಟ್ಟಿದ್ದರು.
