ಎರಡೂವರೆ ತಿಂಗಳ ಗರ್ಭಿಣಿ ಪತ್ನಿಯನ್ನು ಅನುಮಾನದಿಂದ ಕೊಲೆಗೈದ ಪತಿ. ಸಾಲ, ಅಕ್ರಮ ಸಂಬಂಧ ಹಾಗೂ ಅನುಮಾನ ಪತ್ನಿಯ ಬದುಕನ್ನೇ ಕಸಿದುಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ (ಜು.5): ಆತನ ಹೆಂಡ್ತಿ ಎರಡೂವರೆ ತಿಂಗಳು ಗರ್ಭಿಣಿ. ಅನುಮಾನದ ಪಿಶಾಚಿಯಾಗಿದ್ದ ಆತ ಹೆಂಡತಿ ಮೇಲೆ ಸಂಶಯಪಟ್ಟು ಆಕೆಯನ್ನು ಕೊಲೆ ಮಾಡಿದ್ದಾನೆ. ಹೆಂಡ್ತೀನಾ ಎಲ್ಲಿಗೂ ಕಳಿಸ್ತಾ ಇರಲಿಲ್ಲ, ಕರೆದುಕೊಂಡು ಹೋಗ್ತಾನೂ ಇರಲಿಲ್ಲ ಆದರೆ ತಾನು ಮಾತ್ರ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪ್ರೀಪ್ಲಾನ್ ಮಾಡಿ ಹೆಂಡ್ತೀನಾ ಮುಗಿಸಿಬಿಟ್ಟು, ಬೇರೆ ಯಾರೋ ಕೊಲೆ ಮಾಡಿಬಿಟ್ಟಿದ್ದಾರೆ ಎಂದು ಕಥೆಕಟ್ಟಿ ಗಂಡ ಈಗ ಅಂದರ್ ಆಗಿದ್ದಾನೆ..
ಹೀಗೆ ಕೊಲೆಯಾಗಿ ಬಿದ್ದಿರೋ ಮಹಿಳೆ ಹೆಸರು ಶುಭಾ ಅಂತ. ಬೆಂಗಳೂರು ಬಿಸಿಸಿ ಲೇಔಟ್‌ನ ಈಕೆಯನ್ನು 16 ವರ್ಷಗಳ ಹಿಂದೆ ಚಾಮರಾಜನಗರ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿರೋ ಮಹೇಶನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ ದಿನದಿಂದಲೂ ಹೆಂಡ್ತಿ ಮೇಲೆ ಒಂದಲ್ಲ ಒಂದು ಕಾರಣ ತೆಗೆದು ಗಂಡ ಜಗಳ ಮಾಡ್ತಾ ಇದ್ದ. ಸಂಶಯ ಪಡ್ತಾ ಇದ್ದ
ಒಮ್ಮೆ ಹೆಂಡತಿ ತವರು ಮನೆ ಸೇರಿದ್ದಳು. ರಾಜೀ ಪಂಚಾಯ್ತಿ ಮಾಡಿ ಮತ್ತೆ ಗಂಡನ ಮನೆಗೆ ಸೇರಿಸಲಾಗಿತ್ತು. ಗಂಡ ಮಹೇಶ ತನ್ನ ಹೆಂಡ್ತಿ ಶುಭಾಳನ್ನು ತೋಟ ಬಿಟ್ಟು ಆಚೆ ಕಳಿಸ್ತಾ ಇರಲಿಲ್ಲವಂತೆ, ತಾನೂ ಸಹ ಎಲ್ಲಿಗೂ ಕರೆದುಕೊಂಡು ಹೋಗ್ತಾ ಇರಲಿಲ್ಲವಂತೆ. ಆದರೆ ತಾನು ಮಾತ್ರ ಅಕ್ರಮ ಸಂಬಂಧಗಳನ್ನಿಟ್ಟುಕೊಂಡು ಸಾಲನೂ ಮಾಡಿಕೊಂಡಿದ್ದನಂತೆ. ತವರು ಮನೆಗೆ ಫೋನ್ ಮಾಡಲು ಹೆಂಡ್ತಿಗೆ ಪೋನ್ ಸಹ ಕೊಡುತ್ತಿರಲಿಲ್ಲವಂತೆ. ಈ ಕಾರಣಗಳಿಗೆ ಗಂಡ ಹೆಂಡತಿ ನಡುವೆ ಆಗಾಗ್ಗೆ ಸಣ್ಣ ಪುಟ್ಟ ಗಲಾಟೆ ನಡೀತಾ ಇತ್ತು. ಇದೀಗ ಶುಭಾ ಎರಡುವರೆ ತಿಂಗಳ ಗರ್ಭಿಣಿ ಆಗಿದ್ಳು. ಕಟ್ಟಿಕೊಂಡ ಹೆಂಡ್ತಿ ಮೇಲೆ ಅನುಮಾನಗೊಂಡ ಮಹೇಶ ಆಕೆಯನ್ನು ಕಬ್ಬಿಣದ ಹಾರೆಯಿಂದ ಹೊಡೆದು ಹತ್ಯೆಗೈದಿದ್ದಾನೆ.
ಮೈತುಂಬಾ ಸಾಲ ಮಾಡಿಕೊಂಡಿದ್ದ ಮಹೇಶ ಪತ್ನಿಗೆ ಕಿರುಕುಳ:
ಮಹೇಶ ಸಾಲ ಮಾಡಿಕೊಂಡಿದ್ದ. ತವರು ಮನೆಯಿಂದ ಹಣ ತರುವಂತೆ ಪತ್ನಿ ಶುಭಾಳನ್ನು ಪದೆಪದೇ ಪೀಡಿಸ್ತಾ ಇದ್ದ. ಶುಭಾಳ ತವರು ಮನೆಯವರು ಸ್ವಲ್ಪ ಹಣಕಾಸಿನ ನೆರವನ್ನು ನೀಡಿದ್ದರು. ಇಷ್ಟಕ್ಕೆ ತೃಪ್ತನಾಗದ ಮಹೇಶ ಪತ್ನಿಗೆ ಮತ್ತೆ ಮತ್ತೆ ಹಣ ತರುವಂತೆ ಕಿರುಕು ನೀಡ್ತಾ ಇದ್ದ. ಯಾವಾಗ ಹೆಂಡ್ತಿ ಎರಡೂವರೆ ತಿಂಗಳು ಗರ್ಭಿಣಿ ಅಂತ ತಿಳೀತೋ ತನಗೆ ಮೊದಲೇ ಯಾಕೆ ಈ ವಿಷಯ ತಿಳಿಸಲಿಲ್ಲ ಅಂತ ಕ್ಯಾತೆ ತೆಗೆದು ಗಲಾಟೆ ಮಾಡಿದ್ದಾನೆ. ತಾನು ಕೇವಲ ಎರಡು ಬಾರಿ ಮಾತ್ರ ಪತ್ನಿ ಜೊತೆ ಸೇರಿದ್ದರೂ ಗರ್ಬಿಣಿ ಆಗಿದ್ದಾಳೆ ಅದಕ್ಕೆ ಅವಳ ಮೇಲೆ ಅನುಮಾನ ಬಂತು ಅಂತ ವಿಚಾರಣೆ ವೇಳೆ ಬಾಯುಬಿಟ್ಟಿದ್ದಾನೆ.
ಶುಭಾಳ ಕೈಯಿಂದಲೇ ಪತ್ರ ಬರೆಸಿದ್ದ ಹಂತಕ, ಪತ್ರದಲ್ಲೇನಿತ್ತು?
ಮಹೇಶ ಜೂನ್ 29 ರಂದು ರಾತ್ರಿಯೇ ಹೆಂಡ್ತಿ ಶುಭಾಳ ಕೈಲಿ ಒಂದು ಪತ್ರ ಬರೆಸಿದ್ದನಂತೆ ಅದೇನಪ್ಪ ಅಂದ್ರೆ, ನನ್ನ ಗಂಡನಿಗೆ ಸಾಲ ಇತ್ತು. ಸಾಲ ವಸೂಲಾತಿಗೆ ಪಕ್ಕದ ಗ್ರಾಮದ ವ್ಯಕ್ತಿ ಆಗಾಗ್ಗೆ ಬಂದು ಗಲಾಟೆ ಮಾಡ್ತಾ ಇದ್ದ, ನನಗೆ ಪ್ರಾಣಬೆದರಿಕೆ ಇದೆ. ಇದು ನನ್ನ ಗಂಡ ಹಾಗೂ ಅತ್ತೆಗೆ ಗೊತ್ತಿಲ್ಲ ಅಂತ ಬರೆಸಿದ್ದನಂತೆ. ಮರು ದಿನ ಬೆಳಗಿನ ಜಾವ ಬಹಿರ್ದೆಶೆಗೆ ಹೊರಬಂದ ಪತ್ನಿ ಶುಭಾಳ ಮೇಲೆ ಏಕಾಏಕಿ ಕಬ್ಬಿಣದ ಹಾರೆಯಿಂದ ಹೊಡೆದು ಅಕೆಯ ಹೆಣ ಉರುಳಿಸಿದ್ದಾನೆ. ಹೆಂಡ್ತಿ ಕೊನೆಯ ಉಸಿರು ಎಳೆಯುತ್ತಿದ್ದಂತೆ ಮೈಸೂರಿನಲ್ಲಿರುವ ತನ್ನ ಸೋದರ ಸಂಬಂಧಿಗೆ ಫೋನ್ ಮಾಡಿ ಹೆಂಡತೀನಾ ಯಾರೋ ಕೊಲೆ ಮಾಡಿದ್ದಾರೆ ಇದನ್ನು ಪೊಲೀಸರ ತಿಳಿಸು ಅಂತ ಹೇಳಿದ್ದಾನೆ ಅಷ್ಟೇ ಅಲ್ಲ ಅತ್ತೆ ಮನೆಗೆ ತಾನೇ ಫೋನ್ ಮಾಡಿ ಶುಭಾಳನ್ನು ಯಾರೋ ಕೊಲೆ ಮಾಡಿದ್ದಾರೆ ಅಂತ ಕಥೆ ಕಟ್ಟಿದ್ದಾನೆ.
ಕೊಲೆಗಾರನ ಸುಳಿವು ಕೊಟ್ಟ ಶ್ವಾನ!
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ ನೇತ್ರತ್ವದಲ್ಲಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಮಹಜರು ನಡೆಸಿದ್ದರು. ಅದರೆ ತಾನೇ ಕೊಲೆ ಮಾಡಿದ್ದರೂ ಏನೂ ಗೊತ್ತಿಲ್ಲದವನಂತೆ ಗಂಡ ಮಹೇಶ ನಿಂತಿದ್ದ. ಪೊಲೀಸರು ಡಾಗ್ ಸ್ಕ್ಯಾಡ್ ನೊಂದಿಗೆ ಹೋಗಿದ್ದರು. ಚಾಲಾಕಿ ಪೊಲೀಸ್ ಶ್ವಾನ ಗಂಡ ಮಹೇಶನೇ ಕೊಲೆಗಾರ ಅಂತ ಸುಳಿವು ನೀಡಿದೆ. ಜೊತೆಗೆ ಮಹೇಶನ ಷರ್ಟ್ ಮೇಲೆ ರಕ್ತದ ಕಲೆಗಳು ಕಂಡು ಬಂದಿದ್ದು ಅನುಮಾನಗೊಂಡ ಪೊಲೀಸರು ಮಹೇಶ ನನ್ನು ಎತ್ತಾಕಿಕೊಂಡು ಹೋಗಿ ವಶಕ್ಕೆ ವಿಚಾರಣೆ ನಡೆಸಿದಾಗ ಸಂಶಯದ ಪಿಶಾಚಿ ತನ್ನ ಹೆಂಡತಿ ಕೊಲೆಗೆ ಅಸಲಿ ಕಾರಣ ಬಿಚ್ಚಿಟ್ಟಿದ್ದಾನೆ.
ಅದೇನೆ ಹೇಳಿ ಅನುಮಾನದ ಭೂತಕ್ಕೆ ಕಾಯವಾಚ ಮನಸ ಕೈ ಹಿಡಿದ ಪತ್ನಿಯನ್ನ ಆಕೆಯ ಗರ್ಭದಲ್ಲಿದ್ದ ಮಗುವನ್ನ ಕೊಂದಿದ್ದು ನಿಜಕ್ಕು ದುರಂತವೇ ಸರಿ.. ಅತ್ತ ತಾಯಿ ಸತ್ತು ಮಣ್ಣಲ್ಲಿ ಮಣ್ಣಾದ್ರೆ ಇತ್ತ ಮಾಡಿದ ತಪ್ಪಿಗೆ ತಂದೆ ಜೈಲು ಪಾಲಾಗಿದ್ದಾನೆ ಆದ್ರೆ ಏನು ತಪ್ಪು ಮಾಡದ ಮಗ ಮಾತ್ರ ತಂದೆ ಹಾಗೂ ತಾಯಿ ಇಬ್ಬರನ್ನ ಕಳೆದುಕೊಂಡು ಅನಾಥನಾಗಿದ್ದಾನೆ.