ಬೆಸ್ಕಾಂನ 100 ಬ್ಯಾಟರಿ ಕಳವು ಮಾಡಿಸಿದ್ದ ಗುಜರಿ ವ್ಯಾಪಾರಿ! -ತನ್ನ ಗುಜರಿ ಅಂಗಡಿಯಲ್ಲಿ ಕೆಲಸಕ್ಕಿ ಇದ್ದವರಿಂದ ಕಳ್ಳತನ ಮಾಡಿಸುತ್ತಿದ್ದ .5 ಲಕ್ಷ ಮೌಲ್ಯದ ಬ್ಯಾಟರಿಗಳ ಜಪ್ತಿ

ಬೆಂಗಳೂರು (ಆ.23) : : ಬೆಸ್ಕಾಂಗೆ ಸೇರಿದ ಬ್ಯಾಟರಿಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರು ಚಾಲಾಕಿ ಕಳ್ಳರನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಗಿಲು ಕ್ರಾಸ್‌ ನಿವಾಸಿಗಳಾದ ಚಿನ್ನದೊರೈ(35), ವೇಣುಗೋಪಾಲ್‌(28), ವಸಂತ(26) ಹಾಗೂ ರಮೇಶ್‌(29) ಬಂಧಿತರು. ಆರೋಪಿಗಳಿಂದ .5 ಲಕ್ಷ ಮೌಲ್ಯದ 100 ಬ್ಯಾಟರಿಗಳು, ಕೃತ್ಯಕ್ಕೆ ಬಳಸಿದ್ದ ಎರಡು ಪ್ಯಾಸೆಂಜರ್‌ ಆಟೋರಿಕ್ಷಾ ಹಾಗೂ ಒಂದು ಸರಕು ಸಾಗಣೆ ಆಟೋ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಐಶಾರಾಮಿ ಜೀವನ ನಡೆಸಲು ಕಳ್ಳತನ, ಮೂವರು ಹೆಂಡಿರ ಮುದ್ದಿನ ಗಂಡ ಅರೆಸ್ಟ್‌..!

ಮಲ್ಲೇಶ್ವರಂ(Malleshwara) 18ನೇ ಕ್ರಾಸ್‌ನ ಸರ್ಕಾರಿ ಕಾಲೇಜಿನ(Govt Collage) ಬಳಿ ಅಳವಡಿಸಿದ್ದ ಬೆಸ್ಕಾಂ(BESCOM)ಗೆ ಸಂಬಂಧಿಸಿದ 11 ಕಿ.ವ್ಯಾ. ಅಧಿಕ ಒತ್ತಡ ನಿಯಂತ್ರಣ ಬಾಕ್ಸ್‌ (RMU) ಬ್ಯಾಟರಿಗಳನ್ನು ಆ.6ರಂದು ಮುಂಜಾನೆ ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಕದ್ದ ಬ್ಯಾಟರಿ ಗುಜರಿಯಲ್ಲಿ ಮಾರಾಟ: ಬಂಧಿತ ಆರೋಪಿಗಳು ತಮಿಳುನಾಡು ಮೂಲದವರು. ಕಳೆದ ಹಲವು ವರ್ಷಗಳಿಂದ ಕೋಗಿಲು ಕ್ರಾಸ್‌ ಬಳಿ ನೆಲೆಸಿದ್ದಾರೆ. ಪ್ರಮುಖ ಆರೋಪಿ ಚಿನ್ನದೊರೈ ಕೋಗಿಲು ಕ್ರಾಸ್‌ ಬಳಿ ಗುಜರಿ ಅಂಗಡಿ ಇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾನೆ.

ಕೆಲ ವರ್ಷಗಳ ಹಿಂದೆ ಆರೋಪಿ ಚಿನ್ನದೊರೈ ತಮಿಳುನಾಡಿನಿಂದ ವೇಣುಗೋಪಾಲ, ರಮೇಶ್‌ ಹಾಗೂ ವಸಂತ್‌ನನ್ನು ಕೆಲಸಕ್ಕಾಗಿ ಬೆಂಗಳೂರಿಗೆ ಕರೆತಂದಿದ್ದ. ಬೆಸ್ಕಾಂನವರು ನಗರದ ವಿವಿಧೆಡೆ ಅಳವಡಿಸಿರುವ ನಿಯಂತ್ರಣ ಬಾಕ್ಸ್‌ಗಳನ್ನು ಗುರುತಿಸುತ್ತಿದ್ದ. ರಾತ್ರಿ ವೇಳೆ ಆರೋಪಿಗಳು ಸ್ಥಳಕ್ಕೆ ತೆರಳಿ ಬ್ಯಾಟರಿ ಕದ್ದು ಪರಾರಿಯಾಗುತ್ತಿದ್ದರು. ಕದ್ದ ಬ್ಯಾಟರಿಗಳನ್ನು ಆರೋಪಿ ಚಿನ್ನದೊರೈ ತನ್ನದೇ ಗುಜರಿ ಅಂಗಡಿಯಲ್ಲಿ ಇರಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

100 ಮನೆಗಳಲ್ಲಿ ಕಳ್ಳತನ ಮಾಡಿ ದೆಹಲಿಯಲ್ಲಿ ಮನೆಯನ್ನೇ ಕಟ್ಟಿದ ಚಾಲಾಕಿ ಕಳ್ಳಿ ಬಂಧನ..!

ಸಿಸಿಟಿವಿ ಸುಳಿವು ಆಧರಿಸಿ ಬಂಧನ:

ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿ ಆಗಸ್ಟ್‌ ಆರರಂದು ಮುಂಜಾನೆ ಆರೋಪಿಗಳು ಬೆಸ್ಕಾಂ ಆರ್‌ಎಂಯು ಬಾಕ್ಸ್‌ಗಳ ಬ್ಯಾಟರಿಗಳನ್ನು ಕಳವು ಮಾಡಿದ್ದರು. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತು. ಈ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡರು. ಇವರ ಬಂಧನದಿಂದ ಈ ಹಿಂದೆ ಶೇಷಾದ್ರಿಪುರಂ, ವರ್ತೂರು, ವೈಯಾಲಿಕಾವಲ್‌ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಎರಡು, ಮಲ್ಲೇಶ್ವರಂ, ಶ್ರೀರಾಮಪುರ, ಗಿರಿನಗರ, ಸದಾಶಿವನಗರ, ಹಲಸೂರು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ತಲಾ ಒಂದು ಸೇರಿದಂತೆ ಒಟ್ಟು 11 ಬ್ಯಾಟರಿ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.