ಬಂಧಿತ ಆರೋಪಿಗಳಿಂದ 3 ಕೋಟಿ ಮೌಲ್ಯದ 147 ಕೆಜಿ ಗಂಧದ ಎಣ್ಣೆ ಹಾಗೂ 730 ಕೆಜಿ ಶ್ರೀಗಂಧದ ಮರದ ತುಂಡುಗಳ ಜಪ್ತಿ
ಬೆಂಗಳೂರು(ಸೆ.03): ರಾಜಧಾನಿ ವ್ಯಾಪ್ತಿಯಲ್ಲಿ ಶ್ರೀಗಂಧ ಮರಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಮರಗಳ್ಳರ ತಂಡವೊಂದು ಹೈಗ್ರೌಂಡ್ಸ್ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ. ತಮಿಳುನಾಡು ಮೂಲದ ಗೋವಿಂದಸ್ವಾಮಿ, ಮಧು, ವೆಂಕಟೇಶ್, ರಾಮಚಂದ್ರ, ಚಿಕ್ಕಬಳ್ಳಾಪುರದ ವಾಸೀಂ ಬೇಗ್, ವರದರಾಜ್ ಹಾಗೂ ಈ ಕಳ್ಳರ ತಂಡದಿಂದ ಕದ್ದ ಶ್ರೀಗಂಧ ಸ್ವೀಕರಿಸಿ ಗಂಧದ ಎಣ್ಣೆ ತಯಾರಿಸುತ್ತಿದ್ದ ಘಟಕದ ಮಾಲೀಕ ನಂಜೇಗೌಡ ಬಂಧಿತರಾಗಿದ್ದು, ಆರೋಪಿಗಳಿಂದ .3 ಕೋಟಿ ಮೌಲ್ಯದ 147 ಕೆಜಿ ಗಂಧದ ಎಣ್ಣೆ ಹಾಗೂ 730 ಕೆಜಿ ಶ್ರೀಗಂಧದ ಮರದ ತುಂಡುಗಳನ್ನು ಜಪ್ತಿ ಮಾಡಲಾಗಿದೆ.
ಕಳೆದ ಆಗಸ್ಟ್ 1ರಂದು ನಗರದ ಗಾಲ್‌್ಫ ಕ್ಲಬ್ ಆವರಣದಲ್ಲಿ ಶ್ರೀಗಂಧ ಮರ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಹೈಗ್ರೌಂಡ್ಸ್ ಠಾಣೆ ಇನ್ಸ್‌ಪೆಕ್ಟರ್ ಸಿ.ಬಿ.ಶಿವಸ್ವಾಮಿ ಹಾಗೂ ಸಬ್ ಇನ್ಸ್‌ಪೆಕ್ಟರ್ ಸಚಿನ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಇನ್ನೂ 8 ಮಂದಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.
Kalaburagi Crime: ಸುರಪುರದಲ್ಲಿ 1.6 ಕೋಟಿ ಮೌಲ್ಯದ ಗಾಂಜಾ ವಶ, ಓರ್ವನ ಬಂಧನ
ಹೇಗೆ ಕಳ್ಳತನ
ಈ ಆರೋಪಿಗಳು ವೃತ್ತಿಪರ ಶ್ರೀಗಂಧ ಮರ ಕಳ್ಳರಾಗಿದ್ದು, ನಾಲ್ಕು ವರ್ಷಗಳಿಂದ ಬೆಂಗಳೂರು ನಗರ ಹಾಗೂ ಹೊರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಶ್ರೀಗಂಧ ಮರ ಕಳ್ಳತನ ಕೃತ್ಯದಲ್ಲಿ ತೊಡಗಿದ್ದಾರೆ. ವಿಚಿತ್ರವೆಂದರೆ ಇದೇ ಮೊದಲ ಬಾರಿಗೆ ಈ ತಂಡ ಸಿಕ್ಕಿ ಬಿದ್ದಿದೆ. ಈ ತಂಡದ ಸದಸ್ಯರು ಮರಕಳ್ಳತನಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಕೆಲಸ ಮಾಡುತ್ತಿದ್ದರು.
ಈ ಪೈಕಿ ಆರೋಪಿ ರಾಮಚಂದ್ರ, ಬೆಂಗಳೂರು, ಬನ್ನೇರುಘಟ್ಟ, ಆನೇಕಲ್ ಹಾಗೂ ರಾಮನಗರ ಸೇರಿದಂತೆ ವಿವಿಧೆಡೆ ಸುತ್ತಾಡಿ ಶ್ರೀಗಂಧ ಮರಗಳನ್ನು ಪತ್ತೆ ಹಚ್ಚಿ ಗುರುತಿಸುತ್ತಿದ್ದ. ಈ ಮರದ ಬಗ್ಗೆ ಎಷ್ಟುವರ್ಷ ಹಳೆಯದು ಎಂಬ ಮಾಹಿತಿ ಸಂಗ್ರಹಿಸಿ ತಮಿಳುನಾಡಿನ ಗೋವಿಂದಸ್ವಾಮಿ, ಮಧು ಮತ್ತು ವೆಂಕಟೇಶ್ ಅವರಿಗೆ ಆತ ತಿಳಿಸುತ್ತಿದ್ದ. ಈ ಮಾಹಿತಿ ಮೇರೆಗೆ ನಿಗದಿತ ಪ್ರದೇಶದಲ್ಲಿ ಮರ ಕಳ್ಳತನಕ್ಕೆ ಹದಿನೈದು ದಿನಗಳು ಮುನ್ನ ತಮಿಳುನಾಡಿನಿಂದ ಬಂದು ಆ ಮೂವರು ಬಿಡಾರ ಹೂಡುತ್ತಿದ್ದರು. ರಾಮಚಂದ್ರ ತೋರಿಸಿದ ಮರಗಳನ್ನು ಕಡಿದು ಹೇಗೆ ಸಾಗಿಸಬೇಕೆಂದು ಅವರು ಯೋಜಿಸುತ್ತಿದ್ದರು.
ಹೀಗೆ ತಮಿಳುನಾಡಿನಿಂದ ಬೆಂಗಳೂರಿಗೆ ಗೋವಿಂದಸ್ವಾಮಿ ಹಾಗೂ ಆತನ ಸಹಚರರು ಬಂದರೆ, ಒಂದೇ ಬಾರಿ 10ಕ್ಕೂ ಅಧಿಕ ಮರಗಳನ್ನು ಕಡಿಯುತ್ತಿದ್ದರು. ನಂತರ ಈ ಮರಗಳನ್ನು ತುಂಡು ತುಂಡಾಗಿ ಮಾಡಿ ಕತ್ತರಿಸಿ ವಾಹನಗಳಿಗೆ ತುಂಬಿ ಚಿಕ್ಕಬಳ್ಳಾಪುರದ ವಾಸೀಂ ಬೇಗ್‌ಗೆ ಒಪ್ಪಿಸುತ್ತಿದ್ದರು. ಬೇಗ್ ಮೂಲಕ ಶ್ರೀಗಂಧವು ಸರಕುಸಾಗಾಣೆ ವಾಹನಗಳಲ್ಲಿ ಆಂಧ್ರಪ್ರದೇಶ ರಾಜ್ಯದ ಪುಟ್ಟಪರ್ತಿ ಜಿಲ್ಲೆಯ ಮಡಕಶಿರಾ ಬಳಿಯ ರೊಳ್ಳಾ ಮಂಡಲ… ಗಂಧದ ಎಣ್ಣೆ ತಯಾರಿಸುವ ಕಾರ್ಖಾನೆಗೆ ಕೊಡುತ್ತಿದ್ದರು. ಶ್ರೀಗಂಧದ ಎಣ್ಣೆ ತಯಾರಿಸಿ ಬೇರೆಡೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
Crime News: ಗರ್ಭಿಣಿ ಹಸುವಿನ ಮೇಲೆ ಕಾಮುಕನಿಂದ ಅತ್ಯಾಚಾರ; ಗೋವು ಸಾವು
ಆ.1 ರಂದು ಗಾಲ್‌್ಫ ಕ್ಲಬ್ ಆವರಣದಲ್ಲಿ ಶ್ರೀಗಂಧ ಮರ ಕಳ್ಳತನ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಈ ಹಿಂದೆ ನಗರದಲ್ಲಿ ಶ್ರೀಗಂಧ ಮರ ಕಳ್ಳತನ ಪ್ರಕರಣದ ಆರೋಪಿಗಳ ಕುರಿತು ಮಾಹಿತಿ ಕೆದಕಿದರು. ಆಗ ಗೋವಿಂದಸ್ವಾಮಿ ತಂಡದ ಬಗ್ಗೆ ಸುಳಿವು ಸಿಕ್ಕಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಗೋವಿಂದನನ್ನು ವಶಕ್ಕೆ ಪಡೆದು ತೀವ್ರವಾಗಿ ಪ್ರಶ್ನಿಸಿದಾಗ ಇನ್ನುಳಿದ ಆರೋಪಿಗಳು ಬಲೆಗೆ ಬಿದ್ದರು. ಬಳಿಕ ಪುಟವರ್ತಿಯ ಗಂಧದ ಎಣ್ಣೆ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಮಾಲೀಕ ನಂಜೇಗೌಡನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಈ ಆರೋಪಿಗಳಿಂದ ಕೆಂಗೇರಿ, ಹೈಗ್ರೌಂಡ್ಸ್, ಸದಾಶಿವನಗರ ಹಾಗೂ ಜಯನಗರ ಸೇರಿದಂತೆ 10 ಕಡೆ ಶ್ರೀಗಂಧ ಮರಗಳ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಹೊರ ಜಿಲ್ಲೆಗಳಲ್ಲಿ ನಡೆದಿರುವ ಕಳ್ಳತನ ಬಗ್ಗೆ ಸಹ ತನಿಖೆ ಮುಂದುವರೆದಿದೆ ಅಂತ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್‌ಗೌಡ ತಿಳಿಸಿದ್ದಾರೆ.
