Asianet Suvarna News Asianet Suvarna News

ವಂಚನೆ ಕೇಸ್‌: ಫ್ರೀಡಂ ಆ್ಯಪ್‌ ಸಿಇಒ ಸುಧೀರ್‌ ಬಂಧನ

ವಂಚನೆ ಪ್ರಕರಣದಲ್ಲಿ ಫ್ರೀಡಂ ಕಂಪನಿಯ ಸಿಇಒ ಸುಧೀರ್‌ನನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಇತರರ ಪಾತ್ರದ ಬಗ್ಗೆ ಸಹ ತನಿಖೆ ಮುಂದುವರೆದಿದೆ: ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್‌ 

Freedom App CEO Sudhir Arrested on Fraud Case in Bengaluru grg
Author
First Published Apr 13, 2023, 6:18 AM IST

ಬೆಂಗಳೂರು(ಏ.13):  ಅರೆಕಾಲಿಕ ಉದ್ಯೋಗ ಕೊಡಿಸುವುದಾಗಿ ಹೇಳಿ ತಮ್ಮ ಆ್ಯಪ್‌ ಪ್ರಚಾರಕ್ಕೆ ಬಳಸಿಕೊಂಡು ಹಣ ನೀಡದೆ ವಂಚಿಸಿದ ಪ್ರಕರಣ ಸಂಬಂಧ ಇಂಡಿಯನ್‌ ಮಿನಿ ಫ್ರೀಡಂ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿ.ಎಸ್‌.ಸುಧೀರ್‌ನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಬುಧವಾರ ‘ಕನ್ನಡಪ್ರಭ’ ಜತೆ ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್‌ ಅವರು, ವಂಚನೆ ಪ್ರಕರಣದಲ್ಲಿ ಫ್ರೀಡಂ ಕಂಪನಿಯ ಸಿಇಒ ಸುಧೀರ್‌ನನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಇತರರ ಪಾತ್ರದ ಬಗ್ಗೆ ಸಹ ತನಿಖೆ ಮುಂದುವರೆದಿದೆ ಎಂದು ಹೇಳಿದರು.

ಉದ್ಯೋಗ ಕೊಡಿಸುವುದಾಗಿ ವಂಚನೆ: ಫ್ರೀಡಂ ಆ್ಯಪ್‌ ಸಿಇಒ ವಿಚಾರಣೆ

ವಂಚನೆ ಪ್ರಕರಣ ಸಂಬಂಧ ನೋಟಿಸ್‌ ನೀಡಿ ವಿಚಾರಣೆಗೆ ಸುಧೀರ್‌ನನ್ನು ಕರೆಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಆತನನ್ನು ಬಂಧಿಸಲಾಯಿತು. ನ್ಯಾಯಾಲಯದ ಮುಂದೆ ಬುಧವಾರ ಹಾಜರುಪಡಿಸಲಾಯಿತು. ಆರೋಪಿಯನ್ನು 14 ದಿನಗಳು ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ತಮ್ಮ ಆ್ಯಪ್‌ ಪ್ರಚಾರಕ್ಕೆ ಬಳಸಿಕೊಂಡು ವಂಚಿಸಿದ ಸಂಬಂಧ ಬನಶಂಕರಿ ಠಾಣೆಯಲ್ಲಿ 23ಕ್ಕೂ ಹೆಚ್ಚಿನ ಜನರು ದೂರು ನೀಡಿದ್ದರು. ಈ ಸಂಬಂಧ ಆತನ ಮೇಲೆ ಆರು ಎಫ್‌ಐಆರ್‌ಗಳು ದಾಖಲಾಗಿವೆ. ಈ ಪೈಕಿ ಒಂದು ಪ್ರಕರಣದಲ್ಲಿ ಮಾತ್ರ ನ್ಯಾಯಾಲಯದಲ್ಲಿ ಸುಧೀರ್‌ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ. ಪ್ರಕರಣ ಸಂಬಂಧ ಮಂಗಳವಾರ ವಿಚಾರಣೆ ಹಾಜರಾಗಿದ್ದ ಸುಧೀರ್‌ನನ್ನು ತನಿಖೆ ನಡೆಸಿ ಅಂತಿಮವಾಗಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ್ಯಪ್‌ ಡೌನ್‌ಲೋಡ್‌ ಮಾಡಿಸಿದರೆ ಸಂಬಳ

ಉದ್ಯೋಗಾಂಕ್ಷಿಗಳಿಗೆ ಅರೆಕಾಲಿಕ ಕೆಲಸದ ಆಮಿಷವೊಡ್ಡಿದ್ದ ಫ್ರೀಡಂ ಕಂಪನಿ ಸಿಇಒ ಸುಧೀರ್‌, ತಮ್ಮ ಆ್ಯಪನ್ನು ಹೆಚ್ಚು ಡೌನ್‌ಲೋಡ್‌ ಮಾಡಿಸಿದರೆ ಹಾಗೂ ಚಂದಾರಾರನ್ನಾಗಿ ಮಾಡಿಸಿದರೆ, ಪ್ರತಿ ತಿಂಗಳು .15 ಸಾವಿರ ನೀಡುವುದಾಗಿ ಹೇಳಿದ್ದ. ಈ ಮಾತು ನಂಬಿದ ಕೆಲ ಯುವಕ-ಯುವತಿಯರು, ಸುಲಭವಾಗಿ ಹಣ ಸಂಪಾದಿಸುವ ಆಸೆಯಿಂದ ತಮ್ಮ ಬಂಧುಗಳು ಹಾಗೂ ಸ್ನೇಹಿತರನ್ನು ಫ್ರೀಡಂ ಆ್ಯಪ್‌ಗೆ ಚಂದಾದಾರನ್ನಾಗಿ ಮಾಡಿಸಿದ್ದರು. ಆದರೆ ಹಣ ಕೊಡದೆ ವಂಚಿಸಿದ್ದಾನೆ ಎಂದು ಸುಧೀರ್‌ ವಿರುದ್ಧ ಬನಶಂಕರಿ ಠಾಣೆಯಲ್ಲಿ ಸಂತ್ರಸ್ತರು ದೂರು ನೀಡಿದ್ದರು.

Follow Us:
Download App:
  • android
  • ios