ಚಿಕ್ಕಮಗಳೂರಿನಲ್ಲಿ ಮುಂದುವರೆದ ವರುಣಾರ್ಭಟ: ಮಳೆಯಿಂದ ಅವಾಂತರ ಸೃಷ್ಠಿ
ನಗರದ ಎಐಟಿ ಕಾಲೇಜು ಸಮೀಪ ಕಡೂರು-ಮಂಗಳೂರು ಹೆದ್ದಾರಿ ಪಕ್ಕದಲ್ಲಿರುವ ಬಿಷಪ್ ಹೌಸ್ನ ಕಾಂಪೌಂಡ್ ಭಾರೀ ಮಳೆಯಿಂದ ಕುಸಿದು ಬಿದ್ದಿದೆ. ಅದರ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಐದು ದ್ವಿಚಕ್ರ ವಾಹನಗಳು ಹಾಗೂ ಎರಡು ಸೈಕಲ್ಗಳ ಮೇಲೆ ಕಾಂಪೌಂಡ್ ಬಿದ್ದಿರುವ ಪರಿಣಾಮ ವಾಹನಗಳು ಜಖಂಗೊಂಡಿವೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.19): ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದಿದೆ. ಮಲೆನಾಡು , ಬಯಲುಸೀಮೆಯಲ್ಲಿ ಮಳೆಯಿಂದ ಅವಾಂತರ ಸೃಷ್ಠಿ ಆಗಿದೆ. ಕಳೆದ ರಾತ್ರಿ ಸುರಿದ ಮಳೆಗೆ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಅವಾಂತರ ಸೃಷ್ಠಿಯಾಗಿದೆ. ಬಿರುಗಾಳಿಯೊಂದಿಗೆ ರಭಸವಾಗಿ ಸುರಿದ ಪರಿಣಾಮ ಹಲವೆಡೆ ಚರಂಡಿಗಳು ತುಂಬಿ ಹರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ವಾಹನಗಳು ಜಖಂ: ನಗರದ ಎಐಟಿ ಕಾಲೇಜು ಸಮೀಪ ಕಡೂರು-ಮಂಗಳೂರು ಹೆದ್ದಾರಿ ಪಕ್ಕದಲ್ಲಿರುವ ಬಿಷಪ್ ಹೌಸ್ನ ಕಾಂಪೌಂಡ್ ಭಾರೀ ಮಳೆಯಿಂದ ಕುಸಿದು ಬಿದ್ದಿದೆ. ಅದರ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಐದು ದ್ವಿಚಕ್ರ ವಾಹನಗಳು ಹಾಗೂ ಎರಡು ಸೈಕಲ್ಗಳ ಮೇಲೆ ಕಾಂಪೌಂಡ್ ಬಿದ್ದಿರುವ ಪರಿಣಾಮ ವಾಹನಗಳು ಜಖಂಗೊಂಡಿವೆ. ಹೌಸಿಂಗ್ ಬೋರ್ಡ್ ಸಮೀಪದ ಸಂಜೀವಿನಿ ವಿದ್ಯಾಸಂಸ್ಥೆಯ ಕಾಂಪೌಂಡ್ ಸಹ ಉರುಳಿಬಿದ್ದಿದೆ. ಶಾಲೆ ಆವರಣದಲ್ಲಿ ಅಳವಡಿಸಲಾಗಿದ್ದ ಮಕ್ಕಳ ಆಟಿಕೆಯ ಜಾರು ಬಂಡಿ ಇನ್ನಿತರೆ ಸಹ ಮಳೆಯಿಂದ ಹಾನಿಗೀಡಾಗಿವೆ.ಅಬ್ಬರದ ಮಳೆಯಿಂದಾಗಿ ಹೌಸಿಂಗ್ ಬೋರ್ಡ್ನ ಟೀಚರ್ಸ್ ಕಾಲೋನಿಗೂ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಾಗಿದ್ದು, ರಾತ್ರಿಯಿಡಿ ಆತಂಕದಲ್ಲೇ ನಿದ್ದೆಗೆಡುವಂತಾಗಿದೆ.
ಉತ್ತಮ ಮಳೆಗೆ ಜೀವಕಳೆ ಪಡೆದ ಕಾವೇರಿ: ಚುರುಕುಗೊಂಡ ಕೊಡಗು ಪ್ರವಾಸೋದ್ಯಮ
ತುಂಬಿ ಹರಿದ ಕೆರೆ: ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರ ಸಮೀಪದ ಕಲ್ಯಾಣ ನಗರದ ಹುಣಿಸೇಹಳ್ಳಿ ಕೆರೆ ತುಂಬಿ ಹರಿದಿದೆ. ನೀರು ಕಾಲುವೆಗೆ ಹರಿಯುತ್ತಿದ್ದಂತೆ ಗ್ರಾಮದ ಜನರು ಮೀನಿಗಾಗಿ ಮುಗಿಬಿದ್ದಿದ್ದಾರೆ.ಕೆರೆಗೆ ಬಲೆ ಹಾಕಿ ಮಕ್ಕಳು, ಮಹಿಳೆಯರು ಸೇರಿ ನೂರಾರು ಜನರು ಮೀನು ಬೇಟೆ ಮಾಡಿದ್ದಾರೆ.ಚಿಕ್ಕಮಗಳೂರು ನಗರದ ವಿವಿಧೆಡೆ ಒಳಚರಂಡಿಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಉಕ್ಕಿ ಹರಿದಿದೆ. ಚರಂಡಿಗಳು, ರಸ್ತೆಗಳೆಲ್ಲವೂ ಜಲಾವೃತಗೊಂಡಿವೆ. ಮಳೆ ನೀರು ನುಗ್ಗಿ ಹಲವೆಡೆ ಆವಾಂತರಗಳು ಸಂಭವಿಸಿರುವುದು ಬೆಳಗಾಗುತ್ತಲೇ ಕಂಡು ಬಂದಿದೆ. ಒಳಚರಂಡಿ ಸುವ್ಯಸ್ಥಿತವಾಗಿಲ್ಲದಿರುವುದರಿಂದ ತೊಂದರೆ ಹೆಚ್ಚಾಗಿದೆ. ಕೆಲವೆಡೆ ತ್ಯಾಜ್ಯದ ಕೊಳಕು ನೀರು ಚರಂಡಿ, ನಗರದಲ್ಲಿ ಹರಿದು ದುರ್ವಾಸನೆ ಬೀರಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಯಲಿನಲ್ಲೂ ಮಳೆ: ಮಳೆ ಕೊರತೆ ಅನುಭವಿಸುವ ತಾಲ್ಲೂಕಿನ ಅರೆ ಮಲೆನಾಡು ಹಾಗೂ ಜಿಲ್ಲೆಯ ಬಯಲು ಪ್ರದೇಶದಲ್ಲೂ ಮಳೆ ಸುರಿದಿದೆ. ಲಕ್ಯ ಹಾಗೂ ಸಖರಾಯಪಟ್ಟಣ ಹೋಬಳಿಯ ಕಳಸಾಪುರ, ಬೆಳವಾಡಿ ಭಾಗದಲ್ಲೂ ಮಳೆಯಾಗಿದ್ದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಗೋಡಾನ್ಗೆ ನುಗ್ಗಿದ ನೀರು: ಭಾರೀ ಮಳೆಯಿಂದ ಗುಡಿಸಲು ಹಾಗೂ ಸಿಮೆಂಟ್ ಮತ್ತು ಗೊಬ್ಬರದ ಗೋಡಾನ್ಗೆ ನೀರು ನುಗ್ಗಿದ ಘಟನೆ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.ಕಡೂರು-ಚಿಕ್ಕಮಗಳೂರು ಹೆದ್ದಾರಿ ಪಕ್ಕದ ಚರಂಡಿ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರವು ಅರ್ಧಕ್ಕೆ ನಿಲ್ಲಿಸಿರವ ಕಾರಣ ನೀರು ಸರಾಗವಾಗಿ ಹರಿಯದೆ ರಸ್ತೆ ಪಕ್ಕದಲ್ಲಿರುವ ಗುಡಿಸಲು ಮತ್ತು ತೇಜು ಫರ್ಟಿಲೈಸರ್ಸ್ ಎಂಬ ಗೋಡಾನ್ಗೆ ನೀರು ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ನೀರು ನುಗ್ಗಿರುವ ಪರಿಣಾಮ ಗೋಡಾನ್ನಲ್ಲಿ ದಾಸ್ತಾನಿರಿಸಲಾಗಿದ್ದ ಗೊಬ್ಬರ ಹಾಗೂ ಸಿಮೆಂಟ್ ಮೂಟೆಗಳು ಹಾನಿಗೀಡಾಗಿ ನಷ್ಟ ಸಂಭವಿಸಿದೆ ಎಂದು ಮಾಲೀಕರು ದೂರಿದ್ದಾರೆ.
ಮಲೆನಾಡಿನಲ್ಲಿ ಭಾರೀಮಳೆ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಭಾನುವಾರ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಭದ್ರಾ ನದಿ ನೀರಿನ ಹರಿವು ಹೆಚ್ಚಾಗಿದೆ. ಬರ, ಬಿರುಬಿಸಿಲಿನ ಪರಿಣಾಮ ಬೆಂಗಾಡಿನಂತಾಗಿದ್ದ ಪಶ್ಚಿಮಘಟ್ಟದ ತೋಟ, ಅರಣ್ಯ ಪ್ರದೇಶ ಮಳೆಯಿಂದ ಚೇತರಿಸಿಕೊಂಡು ಮತ್ತೆ ನಳನಳಿಸುವಂತಾಗಿದೆ.
ಮರ ಬಿದ್ದು ಮನೆ ಜಖಂ: ಭಾರೀ ಮಳೆಯಿಂದಾಗಿ ಮರ ಉರುಳಿಬಿದ್ದ ಪರಿಣಾಮ ಮನೆಯೊಂದು ಸಂಪೂರ್ಣ ಜಖಂ ಗೊಂಡಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಸಮೀಪ ಕಸ್ಕೆ ಗ್ರಾಮದಲ್ಲಿ ಸಂಭವಿಸಿದೆ.ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ನಾಶವಾಗಿವೆ.
ಬಿಜೆಪಿ ಗೆಲ್ಲುತ್ತೆ, ಮತಗಳ ಎಣಿಕೆ ವೇಳೆ ಜಾಗ್ರತೆ: ಸಂಸದ ಸಿದ್ದೇಶ್ವರ ಲೇವಡಿ
ಕಳಸದಲ್ಲಿ ಧಾರಾಕಾರ ಮಳೆ: ಕಳಸಾ ತಾಲ್ಲೂಕಿನ ವಿವಿಧೆಡೆ ಭಾನುವಾರ ಧಾರಾಕಾರ ಮಳೆ ಸುರಿದಿದೆ. ಭಾರೀ ಗಾಳಿ-ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.ಬೆಟ್ಟದ ಮೇಲಿರುವ ದಕ್ಷಿಣ ಕಾಶಿ ಕಳಸೇಶ್ವರ ದೇವಸ್ಥಾನದ ಮೆಟ್ಟಿಲಿನ ಮೇಲಿಂದ ನೀರು ಜಲಪಾತದಂತೆ ಕೆಳಕ್ಕೆ ಹರಿದಿದ್ದು, ಪ್ರವಾಸಿಗರು ಮತ್ತು ಭಕ್ತರು ಪರದಾಡುವಂತಾಗಿದೆ.
ವಿದ್ಯುತ್ ಸಂಪರ್ಕ ಕಡಿತ: ಕುದುರೇಮುಖ ಘಟ್ಟ ಪ್ರದೇಶದಲ್ಲೂ ಭಾನುವಾರ ಭಾರೀ ಮಳೆಯಾಗಿದ್ದು, ಗಾಳಿ-ಮಳೆಗೆ ಮರ ಬಿದ್ದು ಗ್ರಾಮೀಣ ಭಾಗದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.