Asianet Suvarna News Asianet Suvarna News

ಸಿಗರೆಟ್‌ ವಿತರಕನಿಂದ 45 ಲಕ್ಷ ದೋಚಿದ್ದ ದರೋಡೆಕೋರರ ಬಂಧನ

ಜೂ.11ರಂದು ಪಾಟರಿ ರಸ್ತೆಯಲ್ಲಿ ನಡೆದಿದ್ದ ಘಟನೆ|ಪುಲಿಕೇಶಿನಗರ ಪೊಲೀಸರ ಕಾರ್ಯಾಚರಣೆ| ಕಂಪನಿಯ ಉದ್ಯೋಗಿಯೇ ಮಾಸ್ಟರ್‌ ಮೈಂಡ್‌ ಎಂಬುದು ಪತ್ತೆ| ನಾಲ್ವರು ಆರೋಪಿಗಳ ಸೆರೆ|

Four Thieves Arrest for Cigarette Case
Author
Bengaluru, First Published Jul 27, 2020, 8:51 AM IST

ಬೆಂಗಳೂರು(ಜು.27): ಲಾಕ್‌ಡೌನ್‌ ವೇಳೆ ಸಿಗರೆಟ್‌ ವಿತರಕನನ್ನು ಅಡ್ಡಗಟ್ಟಿ 45 ಲಕ್ಷ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಾರಾಯಿಪಾಳ್ಯ ನಿವಾಸಿ ಮೊಹಮ್ಮದ್‌ ಇಸಾಕ್‌ (25), ಮೊಹಮ್ಮದ್‌ ಪರ್ವೇಜ್‌ (19), ಮೊಹಮ್ಮದ್‌ ಅದ್ನಾನ್‌ (19) ಮತ್ತು ಅಫ್ನಾನ್‌ ಪಾಷಾ (19) ಬಂಧಿತರು. ಆರೋಪಿಗಳಿಂದ .31.86 ಲಕ್ಷ ನಗದು ಹಾಗೂ ಮೊಬೈಲ್‌, ಮೂರು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಎಸ್‌.ಡಿ. ಶರಣಪ್ಪ ತಿಳಿಸಿದ್ದಾರೆ.

ಮೊಹಮ್ಮದ್‌ ಇಸಾಕ್‌ ಕಳೆದ ಏಳು ವರ್ಷಗಳಿಂದ ಎಚ್‌ಬಿಆರ್‌ ಲೇಔಟ್‌ನಲ್ಲಿರುವ ಐಟಿಸಿ ಸಿಗರೆಟ್‌ ಡಿಸ್ಟ್ರಿಬ್ಯೂಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಕಂಪನಿಯಲ್ಲಿ ಲಕ್ಷಾಂತರ ವಹಿವಾಟು ನಡೆಯುತ್ತಿರುವುದು ಗೊತ್ತಾಗಿತ್ತು. ಹೀಗಾಗಿ ತನ್ನ ಸ್ನೇಹಿತರ ಜತೆಗೂಡಿ ಡಿಸ್ಟ್ರಿಬ್ಯೂಟರ್‌ನಿಂದ ಹಣ ದೋಚಲು ಸಂಚು ರೂಪಿಸಿದ್ದ.

ACPಗೆ ನಾನೇ ಲಕ್ಷ ಲಕ್ಷ ಹಣ ಸಂಗ್ರಹಿಸಿ ಕೊಟ್ಟಿದ್ದೆ: ಸಿಗರೆಟ್‌ ವಿತರಕ

ಕಂಪನಿಯ ವಿತರಕ ನಗರದ ವಿವಿಧೆಡೆ ಅಂಗಡಿಗಳಿಗೆ ಸಿಗರೆಟ್‌ ಸರಬರಾಜು ಮಾಡಿ ಸೇಲ್ಸ್‌ ಮ್ಯಾನ್‌ಗಳಿಂದ ಹಣ ಸಂಗ್ರಹಿಸಿ ಎಷ್ಟುಗಂಟೆಗೆ, ಯಾವ ಮಾರ್ಗದಲ್ಲಿ ಮನೆಗೆ ಹೋಗುತ್ತಾನೆ ಎಂಬುದನ್ನು ತಿಳಿದುಕೊಂಡಿದ್ದ. ಕಂಪನಿಯ ಡಿಸ್ಟ್ರಿಬ್ಯೂಟರ್‌ ರಾಕೇಶ್‌ ಜೂ.11ರಂದು ಸಂಜೆ ಆರು ಗಂಟೆ ಸುಮಾರಿಗೆ 45 ಲಕ್ಷ ಹಣವನ್ನು ಬಾಕ್ಸ್‌ನಲ್ಲಿಟ್ಟುಕೊಂಡು ಕಾರಿನಲ್ಲಿ ಹೋಗುತ್ತಿದ್ದರು.

ಪಾಟರಿ ರಸ್ತೆಯಲ್ಲಿ ಹೋಗುವಾಗ, ಬೈಕ್‌ನಲ್ಲಿ ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿಯೊಬ್ಬ ಕಾರಿಗೆ ಡಿಕ್ಕಿ ಹೊಡೆದಿದ್ದ. ಬಳಿಕ ಬೈಕ್‌ನಿಂದ ಅಡ್ಡಗಟ್ಟಿಕಾರು ನಿಲ್ಲಿಸಿದ್ದ. ಆತನನ್ನು ವಿಚಾರಿಸಲು ಕಾರು ಚಾಲಕ ಹೋದಾಗ, ಬೈಕ್‌ನಲ್ಲಿ ಬಂದ ಇನ್ನಿಬ್ಬರು ಯುವಕರು ರಾಕೇಶ್‌ಗೆ ಬೆದರಿಸಿ ಹಣವಿದ್ದ ಬಾಕ್ಸ್‌ ಕಸಿದು ಪರಾರಿಯಾಗಿದ್ದರು.

ಅಕ್ರಮ ಸಿಗರೆಟ್ ಮಾರಾಟ: ಎಸಿಪಿಗೆ 62 ಲಕ್ಷ ಲಂಚ!

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿವಿಟಿ ದೃಶ್ಯಾವಳಿ ಪರಿಶೀಲಿಸಿದ್ದರು. ಈ ವೇಳೆ ಬೈಕ್‌ ಮೇಲೆ ನಂಬರ್‌ ಪ್ಲೇಟ್‌ ಇಲ್ಲದಿರುವುದು ಕಂಡು ಬಂತು. ಬೈಕ್‌ ಮೇಲೆ ಸ್ಟಿಕರ್‌ ಇರುವುದನ್ನು ಪತ್ತೆ ಹಚ್ಚಿದರು. ಇದರ ಆಧಾರದ ಮೇಲೆ ಐಟಿಸಿ ಕಂಪನಿ ಕಚೇರಿಯ ಮುಂಭಾಗದಲ್ಲಿನ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಬೈಕ್‌ ಓಡಾಡಿರುವ ದೃಶ್ಯ ಸೆರೆಯಾಗಿತ್ತು.

ಸಿಗರೆಟ್‌ ಕೇಸ್‌: ಇನ್ಸ್‌ಪೆಕ್ಟರ್‌, ACP ಮನೆ ಮೇಲೆ ACB ದಾಳಿ!

ಇಸಾಕ್‌ ಪ್ರತಿದಿನ ಕೆಲಸ ಮುಗಿಸಿ ಸಂಜೆ 4.30ಕ್ಕೆ ಮನೆಗೆ ಹೊರಡುತ್ತಿದ್ದ. ಆದರೆ, ದರೋಡೆ ನಡೆದ ದಿನ ಸಂಜೆ 5.30 ಆಗಿದ್ದರೂ ಕಚೇರಿ ಮುಂಭಾಗದಲ್ಲಿಯೇ ಇದ್ದ. ಮರುದಿನ ಆರೋಗ್ಯ ಸಮಸ್ಯೆ ಎಂದು ಹೇಳಿ ಕೆಲಸಕ್ಕೆ ರಜೆ ಹಾಕಿದ್ದ. ನಾಲ್ಕು ದಿನ ಕೆಲಸಕ್ಕೆ ಬಂದಿರಲಿಲ್ಲ. ಆತನ ಮೇಲೆ ಅನುಮಾನ ಮೂಡಿತ್ತು. ಆತನ ಫೋನ್‌ ಕರೆಗಳ ವಿವರ ಪರಿಶೀಲಿಸಿದಾಗ, ಇಸಾಕ್‌ ಕೈವಾಡ ಇರುವುದು ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದರು.

ಹಣವನ್ನು ಟಯರ್‌ನಲ್ಲಿ ಬಚ್ಚಿಟ್ಟಿದ್ದ ಇಸಾಕ್‌!

ಆರೋಪಿಗಳು ಎರಡ್ಮೂರು ಲಕ್ಷ ರು. ಸಿಗಬಹುದು ಎಂದುಕೊಂಡಿದ್ದರು. ಆದರೆ ನಿರೀಕ್ಷೆ ಮೀರಿ ದರೋಡೆ ವೇಳೆ ಹಣ ಪತ್ತೆಯಾಗಿತ್ತು. 45 ಲಕ್ಷವನ್ನು ಎಲ್ಲರೂ ಸಮವಾಗಿ ಹಂಚಿಕೊಂಡಿದ್ದರು. ಈ ಹಣವನ್ನು ಇಸಾಕ್‌ ಯಾರಿಗೂ ಅನುಮಾನ ಬಾರದಂತೆ ಸಹೋದರಿ ಮನೆಯಲ್ಲಿ ದ್ವಿಚಕ್ರ ವಾಹನದ ಟೈಯರ್‌ನಲ್ಲಿ ಬಚ್ಚಿಟ್ಟಿದ್ದ. ಇನ್ನುಳಿದ ಮೂವರು ತಮ್ಮ ಸ್ನೇಹಿತರ ಮನೆಯಲ್ಲಿಟ್ಟಿದ್ದರು ಎಂದು ಪೊಲೀಸರು ವಿವರಿಸಿದರು.
 

Follow Us:
Download App:
  • android
  • ios