ACPಗೆ ನಾನೇ ಲಕ್ಷ ಲಕ್ಷ ಹಣ ಸಂಗ್ರಹಿಸಿ ಕೊಟ್ಟಿದ್ದೆ: ಸಿಗರೆಟ್ ವಿತರಕ
ಸಿಗರೆಟ್ ಎಸಿಪಿಗೆ ನಾನೇ ಹಣ ಸಂಗ್ರಹಿಸಿ ಕೊಟ್ಟಿದ್ದೆ|ತಪ್ಪು ಮಾಡಿಲ್ಲ, ಅಧಿಕಾರಿಗಳ ಒತ್ತಡಕ್ಕೆ ಮಣಿದೆ|ಎಸಿಬಿ ಪೊಲೀಸರ ಮುಂದೆ ಸಿಗರೆಟ್ ವಿತರಕ ಅಜೀಜ್ ಹೇಳಿಕೆ| ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿದ್ದತೆ ನಡೆಸಿದ ಎಸಿಬಿ|
ಬೆಂಗಳೂರು(ಮೇ.29): ಸಿಗರೆಟ್ ವ್ಯಾಪಾರಿಗಳಿಂದ ಹಣ ಸುಲಿಗೆ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಎಸಿಬಿ ಅಧಿಕಾರಿಗಳು, ಈ ಸಂಬಂಧ ಎಂಟು ಮಂದಿ ಸಿಗರೆಟ್ ವಿತರಕರು ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಶಾಂತಿನಗರದ ಆದಿಲ್ ಅಜೀಜ್ ಸೇರಿದಂತೆ ನಗರದ ಎಂಟು ಮಂದಿ ಪ್ರಮುಖ ಸಿಗರೆಟ್ ವಿತಕರು ಹಾಗೂ ಇಬ್ಬರು ಸಾಕ್ಷಿಗಳು ವಿಚಾರಣೆ ಎದುರಿಸಿದ್ದು, ಈ ಪೈಕಿ ಆದಿಲ್ ಅಜೀಜ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಸಹ ನಡೆಸಿದ್ದರು. ಸುಲಿಗೆ ಕೃತ್ಯ ಬೆಳಕಿಗೆ ಬಂದ ನಂತರ ಆದಿಲ್ ಅಜೀಜ್, ಕಾಟನ್‌ಪೇಟೆ ಠಾಣೆಯಲ್ಲಿ ಸಿಸಿಬಿ ಆರ್ಥಿಕ ಅಪರಾಧ ದಳದ ಎಸಿಪಿ ಪ್ರಭುಶಂಕರ್, ಇನ್‌ಸ್ಪೆಕ್ಟರ್‌ಗಳಾದ ಅಜಯ್ ಹಾಗೂ ನಿರಂಜನ್ ಕುಮಾರ್ ಮೇಲೆ ದೂರು ದಾಖಲಿಸಿದ್ದರು. ಹೀಗಾಗಿ ಆತನನ್ನು ಎಸಿಬಿ ಪ್ರಶ್ನಿಸಿದೆ ಎಂದು ಗೊತ್ತಾಗಿದೆ.
ಸಿಗರೆಟ್ ಕೇಸ್: ಇನ್ಸ್‌ಪೆಕ್ಟರ್, ACP ಮನೆ ಮೇಲೆ ACB ದಾಳಿ!
ನೋಟಿಸ್ ಹಿನ್ನೆಲೆಯಲ್ಲಿ ಮಂಗಳವಾರ ಹಾಗೂ ಬುಧವಾರ ವಿಚಾರಣೆಗೆ ಹಾಜರಾದ ವಿತರಕರನ್ನು ಅಧಿಕಾರಿಗಳು, ಎರಡು ದಿನಗಳ ಕಾಲ ಸುದೀರ್ಘವಾಗಿ ಪ್ರಶ್ನಿಸಿ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
‘ಹಲವು ವರ್ಷಗಳಿಂದ ನಗರದಲ್ಲಿ ಐಟಿಸಿ ಕಂಪನಿಯ ಸಿಗರೆಟ್ ವಿತರಕನಾಗಿದ್ದು, ನನ್ನ ಬಳಿ ಸುಮಾರು 100ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಈ ಪೈಕಿ ಬಹುತೇಕರು ಗೂಡಂಗಡಿಗಳಿಗೆ ಸೈಕಲ್‌ಗಳ ಮೇಲೆ ಸಿಗರೆಟ್ ಸರಬರಾಜು ಮಾಡುತ್ತಾರೆ. ಆದರೆ ಲಾಕ್‌ಡೌನ್ ವೇಳೆ ಸರ್ಕಾರ ಸಿಗರೆಟ್ ನಿಷೇಧಿಸಿದ ಪರಿಣಾಮ ಕೆಲಸಗಾರರ ಜೀವನಕ್ಕೆ ತೊಂದರೆಯಾಗಿತ್ತು. ಆಗ ನಾನು ನಮ್ಮ ವ್ಯವಹಾರಗಳಿಗೆ ಸಹಕರಿಸುವಂತೆ ಪರಿಚಯಸ್ಥರಾದ ಯಲಹಂಕ ಉಪನಗರದ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಸಂಪರ್ಕಿಸಿದ್ದೆ. ಅವರಿಂದ ನನಗೆ ಸಿಸಿಬಿ ಎಸಿಪಿ ಪ್ರಭುಶಂಕರ್, ಇನ್‌ಸ್ಪೆಕ್ಟರ್‌ಗಳಾದ ಅಜಯ್ ಹಾಗೂ ನಿರಂಜನ್ ಕುಮಾರ್ ಪರಿಚಯವಾಯಿತು’ ಎಂದು ಅಜೀಜ್ ಹೇಳಿದ್ದಾರೆ ಎನ್ನಲಾಗಿದೆ.
‘ಸಿಸಿಬಿ ಕಚೇರಿಯಲ್ಲೇ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳನ್ನು ಬಾಬು ಹಾಗೂ ಭೂಷಣ್ ಜತೆಯಲ್ಲಿ ಹೋಗಿ ಭೇಟಿಯಾಗಿದ್ದೆ. ನಮ್ಮ ವ್ಯವಹಾರಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದ ಅವರು, ಇದಕ್ಕೆ ಪ್ರತಿ ವಿತರಕರಿಂದ ತಲಾ 14 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಲಾಕ್‌ಡೌನ್‌ನಿಂದ ವ್ಯವಹಾರಿಕ ನಷ್ಟದಿಂದ ಕಂಗೆಟ್ಟಿದ್ದ ನಾನು, ಇತರೆ ವಿತಕರ ಜತೆ ಮಾತುಕತೆ ನಡೆಸಿ ಹಣ ನೀಡಲು ಒಪ್ಪಿದೆ. ಅಂತೆಯೇ ಏ.30ರಂದು 32.5 ಲಕ್ಷ ಹಾಗೂ ಮೇ ಮೊದಲ ವಾರದಲ್ಲಿ 30 ಲಕ್ಷ ಸೇರಿ ಒಟ್ಟು 62.5 ಲಕ್ಷವನ್ನು ಅಧಿಕಾರಿಗಳಿಗೆ ತಲುಪಿಸಿದೆ. ನಾನು ತಪ್ಪು ಮಾಡಿಲ್ಲ. ಅಧಿಕಾರಿಗಳ ಒತ್ತಾಯಕ್ಕೆ ಮಣಿದು ಹಣ ನೀಡಿದೆ’ ಎಂದು ಅಜೀಜ್ ಹೇಳಿಕೆ ನೀಡಿರುವುದಾಗಿ ಎಸಿಬಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಎಸಿಪಿ ಜಾಮೀನಿಗೆ ಆಕ್ಷೇಪಣೆಗೆ ಸಿದ್ದತೆ
ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಜಾಮೀನು ಕೋರಿ ಎಸಿಬಿ ನ್ಯಾಯಾಲಯಕ್ಕೆ ಸಿಸಿಬಿ ಎಸಿಪಿ ಪ್ರಭುಶಂಕರ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸಿಬಿ ಸಿದ್ದತೆ ನಡೆಸಿದೆ.
ಈಗಾಗಲೇ ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಆರೋಪಿಗಳು ಗೈರಾಗಿದ್ದಾರೆ. ಹೀಗಾಗಿ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಪ್ರಾರ್ಥನೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.