ಎಸಿಪಿ ಪ್ರಭುಶಂಕರ್‌ ಆಪ್ತರಿಬ್ಬರ ಮನೆಗಳ ಮೇಲೂ ದಾಳಿ ನಡೆಸಿದ ಎಸಿಬಿ ಎಸ್ಪಿ| ಹಲವು ದಾಖಲೆಗಳು ವಶ| ದಾಳಿ ವೇಳೆ ಹಣ ಸಿಕ್ಕಿಲ್ಲ| ಕುಟುಂಬಸ್ಥರ ವಿಚಾರಣೆ| ದೂರುದಾರ ಸಿಗರೆಟ್‌ ಸಗಟು ವ್ಯಾಪಾರಿ ಅದೀಲ್‌ ಅಜೀಜ್‌ ಮನೆ ಮೇಲೂ ಎಸಿಬಿ ದಾಳಿ|

ಬೆಂಗಳೂರು(ಮೇ.23): ಸಿಗರೆಟ್‌ ವ್ಯಾಪಾರಿಗಳಿಂದ ಸಿಸಿಬಿಯ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳ ಸುಲಿಗೆ ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಾದ ಬೆನ್ನೆಲ್ಲೆ ತನಿಖೆ ಚುರುಕುಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಸಿಸಿಬಿ ಕಚೇರಿ ಸೇರಿದಂತೆ ಆರೋಪಿ ಅಧಿಕಾರಿಗಳು ಹಾಗೂ ಅವರ ಮಧ್ಯವರ್ತಿಗಳಿಗೆ ಸೇರಿದ ಸ್ಥಳಗಳ ಮೇಲೆ ಶುಕ್ರವಾರ ದಾಳಿ ನಡೆಸಿದೆ.

ಸಹಕಾರನಗರದಲ್ಲಿ ಇರುವ ಎಸಿಪಿ ಪ್ರಭುಶಂಕರ್‌ ನಿವಾಸ, ಎಚ್‌ಆರ್‌ಬಿ ಲೇಔಟ್‌ನ ಇನ್‌ಸ್ಪೆಕ್ಟರ್‌ ಅಜಯ್‌ ಮನೆ, ಬಸವೇಶ್ವರ ನಗರದಲ್ಲಿರುವ ನಿರಂಜನ್‌ ಕುಮಾರ್‌ ಮನೆ, ಯಲಹಂಕದ ಉಪನಗರದ ಎಸಿಪಿ ಆಪ್ತರಾದ ಬಾಬು ರಾಜೇಂದ್ರ ಪ್ರಸಾದ್‌ ಹಾಗೂ ಭೂಷಣ್‌ ಮನೆ ಮತ್ತು ಕಚೇರಿ ಹಾಗೂ ಮೈಸೂರು ರಸ್ತೆಯಲ್ಲಿರುವ ಸಿಸಿಬಿ ಕಾರ್ಯಾಲಯದಲ್ಲಿ ಎಸಿಪಿ ಕಚೇರಿಗಳಲ್ಲಿ ಎಸಿಬಿ ಶೋಧನೆ ನಡೆದಿದೆ. ಈ ವೇಳೆ ಕೆಲವು ಮಹತ್ವದ ದಾಖಲೆಗಳು ಮಾತ್ರ ಜಪ್ತಿ ಆಗಿದ್ದು, ಹಣ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮದುವೆಗೆ ಒಪ್ಪದ ಪ್ರಿಯತಮ: ವಿಷ ಸೇವಿಸಿ ಠಾಣೆಗೆ ಹೋದ ವಿಚ್ಛೇದಿತ ಮಹಿಳೆ!

ಬೆಳಗ್ಗೆ 8ಕ್ಕೆ ಎಸ್‌ಪಿ ಕಲಾ ಕೃಷ್ಣಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ ತಂಡವು ಏಕಕಾಲಕ್ಕೆ ಆರೋಪಿಗಳ ಮನೆ ಹಾಗೂ ಕಚೇರಿಗಳ ದಾಳಿ ನಡೆಸಿತು. ಆದರೆ ಈ ವೇಳೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಕುಟುಂಬ ಸದಸ್ಯರನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಲಾಕ್‌ಡೌನ್‌ ವೇಳೆ ಸಿಗರೆಟ್‌ ಮಾರಾಟಕ್ಕೆ ಅವಕಾಶ ಕೊಡಿಸುವುದಾಗಿ ವ್ಯಾಪಾರಿಗಳಿಂದ ಹಾಗೂ ನಕಲಿ ಮಾಸ್ಕ್‌ ದಂಧೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕರಿಸುವುದಾಗಿ ಹೇಳಿ ಸಿಸಿಬಿ ಆರ್ಥಿಕ ಅಪರಾಧ ದಳದ ಎಸಿಪಿ ಪ್ರಭುಶಂಕರ್‌, ಇನ್‌ಸ್ಪೆಕ್ಟರ್‌ಗಳಾದ ಆರ್‌.ಎಂ.ಅಜಯ್‌ ಹಾಗೂ ನಿರಂಜನ್‌ ಕುಮಾರ್‌ ಮೇಲೆ ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಾಗಿದೆ. ಗುರುವಾರ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಎಸ್ಪಿ ಕಲಾ ಕೃಷ್ಣಸ್ವಾಮಿ ಅವರು, ಆರೋಪಿಗಳ ಪತ್ತೆಗೆ ಬೇಟೆ ಶುರು ಮಾಡಿದ್ದಾರೆ.

ನಾಳೆ ಸಂಡೇ ಲಾಕ್‌ಡೌನ್‌! ಹೊರಬಂದ್ರೆ ಅರೆಸ್ಟ್

ಹಣ ವಸೂಲಿಗೆ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳೇ ಮಧ್ಯವರ್ತಿಗಳು

ಎಸಿಪಿ ಪ್ರಭುಶಂಕರ್‌ ಅವರು ತಮ್ಮ ಆಪ್ತರಾದ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳಾದ ಬಾಬು ಹಾಗೂ ಭೂಷಣ್‌ ಮೂಲಕ ಸಿಗರೆಟ್‌ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಿದ್ದರು. ಈ ಇಬ್ಬರ ಮೂಲಕ ಎಸಿಪಿ, ಹಲವು ಡೀಲ್‌ಗಳನ್ನು ನಡೆಸಿದ್ದಾರೆ. ಯಲಹಂಕ ಉಪನಗರದಲ್ಲಿ ರಿಯಲ್‌ ಎಸ್ಟೇಟ್‌ ಕಚೇರಿ ಹೊಂದಿರುವ ಬಾಬು ಹಾಗೂ ಭೂಷಣ್‌, ಪ್ರಭುಶಂಕರ್‌ ಅವರಿಗೆ ಇನ್‌ಸ್ಪೆಕ್ಟರ್‌ ಆಗಿದ್ದ ದಿನಗಳಿಂದಲೂ ಪರಿಚಿತರು. ಈ ಸ್ನೇಹದಲ್ಲೇ ಎಸಿಪಿಗೆ ಮಧ್ಯವರ್ತಿಗಳಾಗಿ ಅವರು ಕೆಲಸ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಬೆಂಗಳೂರಿನಲ್ಲಿ ಸಂಜಯನಗರ ಸೇರಿದಂತೆ ಕೆಲವು ಠಾಣೆಗಳಲ್ಲಿ ಪ್ರಭುಶಂಕರ್‌ ಇನ್‌ಸ್ಪೆಕ್ಟರ್‌ ಆಗಿದ್ದರು. ನಂತರ ಮುಂಬಡ್ತಿ ಪಡೆದ ಅವರು ಚಿಕ್ಕಬಳ್ಳಾಪುರದಲ್ಲಿ ಡಿವೈಎಸ್ಪಿ ಆಗಿದ್ದರು. ಏಳು ತಿಂಗಳ ಹಿಂದಷ್ಟೆಸಿಸಿಬಿಗೆ ವರ್ಗವಾಗಿ ಬಂದ ನಂತರ ಮತ್ತೆ ಪ್ರಭುಶಂಕರ್‌, ತಮ್ಮ ಆಪ್ತರಾದ ಭೂಷಣ್‌ ಮತ್ತು ಬಾಬು ಜತೆ ಸೇರಿ ಅಕ್ರಮ ಚಟುವಟಿಕೆ ಶುರು ಮಾಡಿದ್ದರು. ನಗರ ಹೊರವಲಯದ ಕೆಲವು ಭೂ ವ್ಯಾಜ್ಯಗಳಲ್ಲಿ ಮಧ್ಯ ಪ್ರವೇಶಿಸಿ ಬಗೆಹರಿಸಿದ್ದರು ಎಂದು ಮೂಲಗಳು ಹೇಳಿವೆ.

ದೂರುದಾರನ ಮನೆ ಮೇಲೂ ಎಸಿಬಿ ದಾಳಿ!

ಕಾಟನ್‌ಪೇಟೆ ಠಾಣೆಯಲ್ಲಿ ಸಿಸಿಬಿ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳ ಮೇಲೆ ದಾಖಲಾಗಿರುವ ಸುಲಿಗೆ ಪ್ರಕರಣದ ದೂರುದಾರ ಸಿಗರೆಟ್‌ ಸಗಟು ವ್ಯಾಪಾರಿ ಅದೀಲ್‌ ಅಜೀಜ್‌ ಮನೆ ಮೇಲೂ ಎಸಿಬಿ ದಾಳಿ ನಡೆಸಿರುವುದು ಕುತೂಹಲ ಕೆರಳಿಸಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಹಣ ವರ್ಗಾವಣೆ ಶಂಕೆ ಮೇರೆಗೆ ಅಜೀಜ್‌ ನಿವಾಸದಲ್ಲಿ ಪರಿಶೀಲಿಸಲಾಗಿದೆ. ಎಸಿಪಿಗೆ 30 ಲಕ್ಷವನ್ನು ಅಜೀಜ್‌ ನೀಡಿದ್ದ. ಇಷ್ಟು ದೊಡ್ಡ ಮೊತ್ತದ ಲಂಚ ನೀಡುವ ಹಿಂದೆ ವೈಯಕ್ತಿಕ ಲಾಭವಿರುವುದು ಖಚಿತವಾಗಿದೆ. ಹೀಗಾಗಿ ಅಜೀಜ್‌ ವಿರುದ್ಧ ಸಹ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.