ಅಯ್ಯಯ್ಯೋ... OYO ರೂಮ್‌ಲ್ಲಿ ಕಳ್ಳ ಕ್ಯಾಮರಾ: ಜೋಡಿಯ ಸಲ್ಲಾಸ ಸೆರೆ ಹಿಡಿದ ನಾಲ್ವರ ಬಂಧನ
ಓಯೋ ಆಪ್ ಮೂಲಕ ಹೊಟೇಲ್‌ನಲ್ಲಿ ಕೋಣೆ ಬುಕ್ ಮಾಡಿ ಅಲ್ಲಿ ನೆಲೆಸಿದ್ದ ಜೋಡಿಯ ಸರಸ ಸಲ್ಲಾಪ ಸೆರೆ ಹಿಡಿದು ನಂತರ ಅವರಿಗೆ ಬ್ಲಾಕ್‌ಮೇಲ್ ಮಾಡಿದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ನವದೆಹಲಿ: ಓಯೋ ಆಪ್ ಮೂಲಕ ಹೊಟೇಲ್‌ನಲ್ಲಿ ಕೋಣೆ ಬುಕ್ ಮಾಡಿ ಅಲ್ಲಿ ನೆಲೆಸಿದ್ದ ಜೋಡಿಯ ಸರಸ ಸಲ್ಲಾಪ ಸೆರೆ ಹಿಡಿದು ನಂತರ ಅವರಿಗೆ ಬ್ಲಾಕ್‌ಮೇಲ್ ಮಾಡಿದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಉತ್ತರಪ್ರದೇಶದ ನೋಯ್ಡಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆರೋಪಿಗಳು ಹೊಟೇಲ್ ರೂಮ್‌ನಲ್ಲಿ ಹಿಡನ್ ಕ್ಯಾಮರಾ ಇರಿಸಿ ನಂತರ ಈ ಜೋಡಿಗೆ ಹಣ ನೀಡುವಂತೆ ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದ್ದಾರೆ. ಹಣ ನೀಡದಿದ್ದಲ್ಲಿ, ನಿಮ್ಮ ಖಾಸಗಿ ಕ್ಷಣಗಳನ್ನು ಇಂಟರ್‌ನೆಟ್‌ನಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಜೋಡಿ ಪೊಲೀಸರ ಮೊರೆ ಹೋಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಆದರೆ ಹೊಟೇಲ್ ಸಿಬ್ಬಂದಿ ಈ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ಓಯೋದಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ. ನಂತರ ರೂಮ್ ಬಿಟ್ಟು ಹೊರ ಹೋಗುವ ಮುನ್ನ ಕೊಠಡಿಗಳಲ್ಲಿ ಗುಪ್ತ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಕೆಲವು ದಿನಗಳ ನಂತರ ಮತ್ತೆ ಹೊಟೇಲ್‌ಗೆ ಬಂದು ತಾವು ಹಿಡನ್ ಕ್ಯಾಮರಾ ಅಳವಡಿಸಿದ ರೂಮ್‌ನ್ನು ಪರಿಶೀಲಿಸಿ ಕ್ಯಾಮರಾ ತೆಗೆದುಕೊಂಡು ಹೋಗಿದ್ದಾರೆ. ಈ ನಡುವೆ ಆ ರೂಮ್‌ನಲ್ಲಿ ತಂಗಿದ್ದ ಜೋಡಿಯನ್ನು ಅವರು ಸಂಪರ್ಕಿಸಿದ್ದು, ಅವರಿಗೆ ಬ್ಲಾಕ್‌ಮೇಲ್ ಶುರು ಮಾಡಿದ್ದಾರೆ.
ಮೇಕ್ ಮೈ ಟ್ರಿಪ್‌ಗೆ ಸಂಕಷ್ಟ ತಂದಿಟ್ಟ ಓಯೋ ಮೇಲಿನ ಪ್ರೀತಿ!
ವಿಷ್ಣು ಸಿಂಗ್ (Vishnu Singh), ಅಬ್ದುಲ್ ವಹಾವ್ (Abdul Wahav), ಪಂಕಜ್ ಕುಮಾರ್ (Pankaj Kumar)ಮತ್ತು ಅನುರಾಗ್ ಕುಮಾರ್ ಸಿಂಗ್ (Anurag Kumar Singh) ಬಂಧಿತ ಆರೋಪಿಗಳು. ಈ ಆರೋಪಿಗಳು ನೋಯ್ಡಾದಲ್ಲಿ(Noida) ಕಾರ್ಯನಿರ್ವಹಿಸುತ್ತಿರುವ ಮೂರು ವಿಭಿನ್ನ ಅಪರಾಧ ಕೃತ್ಯವೆಸಗುವ ಗ್ಯಾಂಗ್‌ಗಳ ಭಾಗವೆಂದು ಪೊಲೀಸರು ತಿಳಿಸಿದ್ದಾರೆ. ಅನಧಿಕೃತ ಕಾಲ್‌ಸೆಂಟರ್‌ಗಳು, ಅಕ್ರಮ ಚಟುವಟಿಕೆಗಳಿಗೆ ನಕಲಿ ಸಿಮ್ ಕಾರ್ಡ್‌ಗಳನ್ನು (fake sim cards) ಒದಗಿಸುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಈ ಖದೀಮರು ಈ ಹಿಂದೆಯೂ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಬಂಧಿತರಿಂದ 11 ಲ್ಯಾಪ್‌ಟಾಪ್,(laptops) 21 ಮೊಬೈಲ್‌ಗಳು 22 ಎಟಿಎಂ ಕಾರ್ಡ್‌ಗಳನ್ನು (ATM cards) ವಶಕ್ಕೆ ಪಡೆಯಲಾಗಿದ್ದು, ದೇಶಾದ್ಯಂತ ಈ ಗ್ಯಾಂಗ್ ಕಾರ್ಯಾಚರಿಸುತ್ತಿದೆ. ಈ ಗುಂಪಿನ ಓರ್ವ ಸದಸ್ಯ ಪರಾರಿಯಾಗಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಓಹೋ ಓಯೋ!: 8 ಸಾವಿರಕ್ಕೆ ಮನೆ ಬಾಡಿಗೆ ಬೇರೆ ಕೊಡ್ತಿಯೋ?
ಬಂಧಿತ ಆರೋಪಿಗಳಲ್ಲಿ ವಿಷ್ಣು ಮತ್ತು ಅಬ್ದುಲ್ ವಹವ್ ಜೋಡಿಯ ಫೋನ್‌ಗೆ ಅವರ ಏಕಾಂತದ ಆತ್ಮೀಯ ಕ್ಷಣಗಳ ವೀಡಿಯೊಗಳನ್ನು ಕಳುಹಿಸುತ್ತಿದ್ದರು ಮತ್ತು ಅವರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ನೀಡದೇ ಹೋದಲ್ಲಿ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಮೂರನೇ ಆರೋಪಿ ಪಂಕಜ್ ಈ ದಂಧೆಗೆ ಸಿಮ್‌ಗಳನ್ನು ನೀಡುತ್ತಿದ್ದ. ಈ ಕಳ್ಳದಂಧೆಗೆ ಬಳಸಿದ ಸಿಮ್‌ಗಳನ್ನು ಬೇರೆಯವರ ಹೆಸರಿನಲ್ಲಿ ನೊಂದಾಯಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಸಾದ್ ಮಿಯಾನ್ ಖಾನ್ (Saad Mian Khan) ಈ ಗ್ಯಾಂಗ್‌ನ ಕಾರ್ಯವೈಖರಿಯನ್ನು ವಿವರಿಸಿದ್ದಾರೆ.
ಆದರೆ OYOದಿಂದ ಈ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಯೋ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಒಯೋ ಯಾವುದೇ ಹೊಟೇಲ್ ಅಥವಾ ಅತಿಥಿಗೃಹಗಳನ್ನು ನಿರ್ವಹಿಸುವುದಿಲ್ಲ. ಇದು ಕೇವಲ ಅಧಿಕೃತ ಹೊಟೇಲ್‌ಗಳ ಬಗ್ಗೆ ಮಾಹಿತಿ ನೀಡುತ್ತದೆ. ಮತ್ತು ತಂತ್ರಜ್ಞಾನ ಆಧರಿತ ಬೆಂಬಲ ನೀಡುತ್ತದೆ ಎಂದು ಕಂಪನಿಯ ಸಿದ್ದಾಂತವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.