*   ಕಡಿಮೆ ಬೆಲೆಗೆ ನಿವೇಶನ, ಚಿನ್ನದ ಬಿಸ್ಕೆಟ್‌ ಮಾರಾಟದ ನೆಪದಲ್ಲಿ ಜನರ ನಂಬಿಕೆ ಗಳಿಕೆ*  ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಜೀವ ಬೆದರಿಕೆ ಹಾಕಿ ಸುಲಿಗೆ*   ಅಮೃತಹಳ್ಳಿ ಪೊಲೀಸರಿಂದ ನಾಲ್ವರ ಬಂಧನ 

ಬೆಂಗಳೂರು(ಜ.30): ನಗರದಲ್ಲಿ ಕಡಿಮೆ ಬೆಲೆಗೆ ನಿವೇಶನ ಹಾಗೂ ಚಿನ್ನದ ಬಿಸ್ಕೆಟ್‌ಗಳ ಮಾರಾಟದ ಸೋಗಿನಲ್ಲಿ ಮಕ್ಕಳಾಟಿಕೆಯ ನೋಟುಗಳ ವಿಡಿಯೋವನ್ನು ತೋರಿಸಿ, ಜನರನ್ನು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಅಮೃತಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ತಮಿಳುನಾಡಿನ(Tamil Nadu) ವೆಲ್ಲೂರು ಜಿಲ್ಲೆಯ ಎಂ.ನಟರಾಜ್‌ ಅಲಿಯಾಸ್‌ ರಾಜಾ ರೆಡ್ಡಿ, ಕೃಷ್ಣಗಿರಿ ಜಿಲ್ಲೆಯ ಬಾಲಾಜಿ, ಬಾಣಸವಾಡಿಯ ರಾಕೇಶ್‌ ಹಾಗೂ ಚೆನ್ನಸಂದ್ರದ ಜಿ.ವೆಂಕಟೇಶ್‌ ಬಂಧಿತರು(Arrest). ಆರೋಪಿಗಳಿಂದ(Accused) .5.85 ಲಕ್ಷ ನಗದು, 14 ಮೊಬೈಲ್‌ಗಳು, ನಕಲಿ ಬಂಗಾರದ ನಾಲ್ಕು ಉಂಗುರಗಳು, ಮೂರು ಸರಗಳು, .45 ಸಾವಿರ ಮೌಲ್ಯದ 8 ಗ್ರಾಂ ತೂಕದ ಬಂಗಾರ ಹಾಗೂ ಪ್ರೆಸ್‌ ಮತ್ತು ಹ್ಯೂಮನ್‌ ರೈಟ್ಸ್‌ ಎಂದ ಹೆಸರಿರುವ ಎರಡು ನಕಲಿ ಐಡಿ ಕಾರ್ಡ್‌ಗಳು, 20 ಕೋಟಿ ಎಂದು ಜನರಿಗೆ ತಮ್ಮ ಮೊಬೈಲ್‌ಗಳಲ್ಲಿದ್ದ ಮಕ್ಕಳಾಟಿಕೆಯ ನೋಟಿನ ವಿಡಿಯೋ ಹಾಗೂ ಐದು ಬ್ಯಾಗ್‌ನಲ್ಲಿದ್ದ ನಕಲಿ ನೋಟುಗಳು(Fake Notes) ಹಾಗೂ 10 ನಕಲಿ ಬಂಗಾರದ ಬಿಸ್ಕೆಟ್‌ಗಳು ಜಪ್ತಿ ಮಾಡಲಾಗಿದೆ.

ನಕಲಿ ನೋಟು ದಂಧೆಕೋರರಿಂದ 1 ಕೋಟಿ ರು. ಮೌಲ್ಯದ ರತ್ನ ವಶ

ಆರೋಪಿಗಳು ಕೆಲ ದಿನಗಳ ಹಿಂದೆ ಜಕ್ಕೂರು ಸಮೀಪ ನಿವೇಶನ(Site) ಮಾರಾಟ ನೆಪದಲ್ಲಿ ತಿರುಪತಿ ಮೂಲದ ಬಟ್ಟೆವ್ಯಾಪಾರಿ ಜಿ.ಸಂಗೀತಾ ಎಂಬುವರ ಕಾರು ಚಾಲಕ ಕೃಷ್ಣಯ್ಯ ಅವರನ್ನು ನಗರಕ್ಕೆ ಕರೆಸಿಕೊಂಡು ಬಳಿಕ ಅವರಿಗೆ ಬೆದರಿಕೆ ಹಾಕಿ .10 ಲಕ್ಷ ಹಣವನ್ನು ಆರೋಪಿಗಳು ದೋಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಗುರುಪ್ರಸಾದ್‌ ನೇತೃತ್ವದ ತಂಡ, ಮೊಬೈಲ್‌ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ(CCTV Camera) ಮಾಹಿತಿ ಆಧರಿಸಿ ನಾಲ್ವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಣ ತೋರಿಸಿ ಮಂಕುಬೂದಿ:

ತಮಿಳುನಾಡಿನ ನಟರಾಜ್‌ ಅಲಿಯಾಸ್‌ ರಾಜಾ ರೆಡ್ಡಿ ಕ್ರಿಮಿನಲ್‌ ಹಿನ್ನಲೆಯುಳ್ಳವನಾಗಿದ್ದು, ಆತನ ಮೇಲೆ ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಸ್ಥಳೀಯ ಠಾಣೆಯಲ್ಲಿ ಆತನ ಮೇಲೆ ರೌಡಿಪಟ್ಟಿಸಹ ಇದೆ. ಇತರೆ ಆರೋಪಿಗಳು ಕೂಡಾ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿದ್ದು, ಕೆಲ ದಿನಗಳ ಹಿಂದೆ ಜೈಲಿನಲ್ಲಿ ಅವರಿಗೆ ನಟರಾಜ್‌ನ ಪರಿಚಯವಾಗಿತ್ತು. ಬಳಿಕ ಈ ಮೂವರಿಗೆ ಹಣದಾಸೆ ತೋರಿಸಿ ತನ್ನ ತಂಡಕ್ಕೆ ನಟರಾಜ್‌ ಸೆಳೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಬಳಿ ಚಿನ್ನದ ಬಿಸ್ಕೆಟ್ಸ್‌ಗಳು ಹಾಗೂ ಬೆಂಗಳೂರಿನಲ್ಲಿ ನಿವೇಶನಗಳಿವೆ ಎಂದು ಪರಿಚಿತರಿಗೆ ಆರೋಪಿಗಳು ಹೇಳುತ್ತಿದ್ದರು. ನಮಗೆ ಹಣದ ತುರ್ತು ಅವಶ್ಯಕತೆ ಇರುವ ಕಾರಣಕ್ಕೆ ಚಿನ್ನ ಹಾಗೂ ನಿವೇಶನಗಳನ್ನು ಮಾರಾಟ ಮಾಡುತ್ತೇವೆ ಎನ್ನುತ್ತಿದ್ದರು. ಈ ಮಾತು ನಂಬಿ ಜನರು ಚಿನ್ನ ಹಾಗೂ ನಿವೇಶನ ಖರೀದಿಗೆ ಬಂದರೆ ಅವರಿಗೆ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ ಸುಲಿಗೆ ಮಾಡುವುದು ನಟರಾಜ್‌ ತಂಡ ಅಪರಾಧ ಕೃತ್ಯದ ಮಾದರಿಯಾಗಿತ್ತು. ಅಂತೆಯೇ ಇತ್ತೀಚಿಗೆ ಆಂಧ್ರಪ್ರದೇಶದ ತಿರುಪತಿಯಲ್ಲಿ ಬಟ್ಟೆಮಾರಾಟ ಮಳಿಗೆ ಹೊಂದಿರುವ ಜಿ.ಸಂಗೀತಾ ಅವರು ಆರೋಪಿಗಳಿಗೆ ಸಂಪರ್ಕಕ್ಕೆ ಬಂದಿದ್ದಾರೆ. 

ಬಟ್ಟೆ ವ್ಯಾಪಾರಿಗೆ ಜಕ್ಕೂರು ಸಮೀಪ ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ಹೇಳಿ ನಂಬಿಸಿದ್ದಾರೆ. ಈ ಮಾತು ನಂಬಿದ ಸಂಗೀತಾ, ನಿವೇಶನ ಖರೀದಿ ಸಲುವಾಗಿ .10 ಲಕ್ಷದ ಸಮೇತ ತಮ್ಮ ಕಾರು ಚಾಲಕ ಕೃಷ್ಣಯ್ಯ ಅವರನ್ನು ಕಳುಹಿಸಿದ್ದರು. ಬೆಂಗಳೂರಿಗೆ ಬಂದ ಕೃಷ್ಣಯ್ಯಗೆ ನಿವೇಶನ ತೋರಿಸುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆದರಿಸಿ ಆರೋಪಿಗಳು ಹಣ ದೋಚಿದ್ದರು(Robbery). ಬಳಿಕ ಘಟನೆ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಕೃಷ್ಣಯ್ಯ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ಬಿಐಗೇ ಬಂತು 14500 ಮೌಲ್ಯದ ಖೋಟಾ ನೋಟು..!

ವಿಡಿಯೋ ತೋರಿಸಿ ಬಕ್ರಾ

ವಂಚನೆ(Fraud) ವ್ಯವಹಾರದ ಮಾತುಕತೆ ವೇಳೆ ತಮ್ಮನ್ನು ಹಣವಂತರು ಎಂದು ಬಿಂಬಿಸಿಕೊಳ್ಳಲು ನಟರಾಜ್‌ ತಂಡ, ಮೊಬೈಲ್‌ನಲ್ಲಿ ಮಕ್ಕಳಾಟಿಕೆಯ ನಕಲಿ ನೋಟುಗಳ ವಿಡಿಯೋವನ್ನು ತೋರಿಸಿ ಜನರಿಗೆ ನಂಬಿಸುತ್ತಿದ್ದರು. ನಮ್ಮ ಬಳಿ .20 ಕೋಟಿ ಹಣ ಇದೆ ಎಂದು ಹೇಳಿಕೊಂಡಿದ್ದ ಆರೋಪಿಗಳು, ವಿಡಿಯೋ ಕಾಲ್‌ನಲ್ಲಿ ನಕಲಿ ನೋಟಿನ ವಿಡಿಯೋ ತೋರಿಸಿಯೇ ಜನರಿಗೆ ಟೋಪಿ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಖೋಟಾ ನೋಟು ದಂಧೆ

ನಿವೇಶನ ಹಾಗೂ ಚಿನ್ನ ಮಾತ್ರವಲ್ಲದೆ ಖೋಟಾ ನೋಟು ಚಲಾವಣೆ ನೆಪದಲ್ಲಿ ಸಹ ಕೆಲವರಿಗೆ ಆರೋಪಿಗಳು ವಂಚಿಸಿದ್ದಾರೆ. .10 ಲಕ್ಷ ಅಸಲಿ ನೋಟು ನೀಡಿದರೆ .30 ಲಕ್ಷ ಖೋಟಾ ನೋಟು ಕೊಡುವುದಾಗಿ ಹೇಳಿ ಮೋಸ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.