ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ 9ನೇ ತರಗತಿ ವಿದ್ಯಾರ್ಥಿನಿಯ ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 26 ವರ್ಷದ ಯುವಕನನ್ನು ಬಂಧಿಸಲಾಗಿದೆ. ಕೊಟ್ಟಾಯಂ ನಿವಾಸಿ ಸಚಿನ್ ವರ್ಗೀಸ್‌ನನ್ನು ಶಾಸ್ತಾಂಕೋಟ ಪೊಲೀಸರು ಹಿಡಿದಿದ್ದಾರೆ.
ಕೇರಳದ ಕೊಲ್ಲಂನಲ್ಲಿ ಇನ್‌ಸ್ಟಾಗ್ರಾಂ ಸ್ನೇಹದ ನೆಪದಲ್ಲಿ ನಡೆದ ಭಯಾನಕ ಕೃತ್ಯವೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಬಲೆ ಬೀಸಿದ ಕಾಮುಕನೊಬ್ಬ 9ನೇ ತರಗತಿಯ ಬಾಲಕಿಯ ಮೇಲೆ ಅಮಾನವೀಯವಾಗಿ ದೌರ್ಜನ್ಯ ಎಸಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇನ್‌ಸ್ಟಾಗ್ರಾಂ ಸ್ನೇಹದ ಕರಾಳ ಮುಖ
ಕೊಟ್ಟಾಯಂನ ಪೆರುಂಬೈಕಾಡ್ ನಿವಾಸಿ 26 ವರ್ಷದ ಸಚಿನ್ ವರ್ಗೀಸ್ ಎಂಬಾತ ಇನ್‌ಸ್ಟಾಗ್ರಾಂ ಮೂಲಕ 9ನೇ ತರಗತಿ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದ. ಆರಂಭದಲ್ಲಿ ಸ್ನೇಹದ ನಾಟಕವಾಡಿದ ಈತ, ಬಾಲಕಿಯ ನಂಬಿಕೆ ಗಳಿಸಿ ಆಕೆಯ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿದ್ದ.
ಪೋಷಕರಿಲ್ಲದ ವೇಳೆ ಮನೆಗೆ ನುಗ್ಗಿದ ಕಾಮುಕ
ವಿದ್ಯಾರ್ಥಿನಿಯ ಪೋಷಕರು ಮನೆಯಲ್ಲಿಲ್ಲದ ಸಮಯವನ್ನು ಮೊದಲೇ ತಿಳಿದುಕೊಂಡಿದ್ದ ಸಚಿನ್ ವರ್ಗೀಸ್, ಏಕಾಏಕಿ ಮನೆಗೆ ನುಗ್ಗಿದ್ದಾನೆ. ಯಾರೂ ಇಲ್ಲದ ವೇಳೆ ಅಸಹಾಯಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕೃತ್ಯದ ನಂತರ ಬಾಲಕಿಯ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದ್ದವು.
ನಡವಳಿಕೆಯಿಂದ ಬಯಲಾದ ಸತ್ಯ
ಬಾಲಕಿ ಅಸ್ವಾಭಾವಿಕವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಪೋಷಕರು, ಆಕೆಯನ್ನು ಪ್ರೀತಿಯಿಂದ ವಿಚಾರಿಸಿದಾಗ ಸಚಿನ್ ಎಸಗಿದ ದೌರ್ಜನ್ಯದ ಕರಾಳ ಸತ್ಯ ಹೊರಬಂದಿದೆ. ಬೆಚ್ಚಿಬಿದ್ದ ಪೋಷಕರು ತಕ್ಷಣವೇ ಶಾಸ್ತಾಂಕೋಟ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದರು.
ಪೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ
ದೂರು ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಶಾಸ್ತಾಂಕೋಟ ಪೊಲೀಸರು ಕೊಟ್ಟಾಯಂನಲ್ಲಿ ಅವಿತಿದ್ದ ಆರೋಪಿ ಸಚಿನ್ ವರ್ಗೀಸ್‌ನನ್ನು ಬಂಧಿಸಿದ್ದಾರೆ. ಆರೋಪಿಯ ಮೇಲೆ ಪೋಕ್ಸೋ ಸೇರಿದಂತೆ ಹಲವು ಗಂಭೀರ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್‌ಗೆ ಒಪ್ಪಿಸಲಾಗಿದೆ.


