ತೆಲಂಗಾಣದ ಉದ್ಯಮಿ ಚಿಕೋಟಿ ಪ್ರವೀಣ್‌ ಸೇರಿ ಇಬ್ಬರಿಗೆ ಸೇರಿದ ಹಲವು ಸ್ಥಳಗಳ ಮೆಲೆ ಇಡಿ ದಾಳಿ ನಡೆಸಿದೆ. ಈ ವೇಳೆ ಚಿಕೋಟಿ ಪ್ರವೀಣ್‌ ಫಾರ್ಮ್‌ಹೌಸ್‌ನಲ್ಲಿ ಹಲವು ಪ್ರಾಣಿಗಳು ಕಂಡುಬಂದಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳು ಸಹ ಪರಿಶೀಲನೆ ನಡೆಸಿದ್ದಾರೆ. 

ಹೈದರಾಬಾದ್‌ ಮೂಲದ ಇಬ್ಬರು ದೊಡ್ಡ ಉದ್ಯಮಿಗಳಿಗೆ ಇಡಿ ಶಾಕ್‌ ನೀಡಿದೆ. ನೇಪಾಳ, ಇಂಡೋನೇಷ್ಯಾ, ಶ್ರೀಲಂಕಾ ಹಾಗೂ ಇತರೆಡೆ ಕ್ಯಾಸಿನೋಗಳಲ್ಲಿ ಜೂಜು ಸೇರಿ ಹಲವು ಈವೆಂಟ್‌ಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಇಡಿ ದಾಳಿ ನಡೆಸಿದೆ. ಅಲ್ಲದೆ, ಈ ಮೂಲಕ ವಿದೇಶದಿಂದ ಹವಾಲಾ ಮೂಲಕ ಭಾರತಕ್ಕೆ ಕೋಟ್ಯಂತರ ರೂಪಾಯಿಗಳನ್ನು ವರ್ಗಾವಣೆ ಮಾಡಿದೆ ಎಂಬ ಆರೋಪವೂ ಇದೆ.

ಮಾಧವ ರೆಡ್ಡಿ ಎಂಬ ಉದ್ಯಮಿಯ ಬೋವೆನ್‌ಪಲ್ಲಿಯ ನಿವಾಸ ಹಾಗೂ ಚಿಕೋಟಿ ಪ್ರವೀಣ್‌ ಎಂಬುವರ ಸೈದಾಬಾದ್‌ ನಿವಾಸದ ಮೇಲೆ ಇಡಿ ರೇಡ್‌ ಮಾಡಿದೆ. ಅಲ್ಲದೆ, ಇತರೆ 6 ಸ್ಥಳಗಳಲ್ಲೂ ಜುಲೈ 27ರಂದು ರೇಡ್‌ ಮಾಡಲಾಗಿತ್ತು. ಈ ವೇಳೆ ಇಡಿ ಅಧಿಕಾರಿಗಳು ಲ್ಯಾಪ್‌ಟಾಪ್‌ (Laptop), ಮೊಬೈಲ್‌ ಫೋನ್‌ (Mobile Phone) ಹಾಗೂ ದಾಖಲೆಗಳನ್ನು (Documents) ವಶಪಡಿಸಿಕೊಂಡಿದ್ದು, ಹೆಚ್ಚುವರಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. 

ಶಾಸಕ ಜಮೀರ್‌ಗೆ ಸಾಲ ಕೊಟ್ಟಿದ್ದಕ್ಕೆ ಇಡಿ ವಿಚಾರಣೆ: ಕೆಜಿಎಫ್‌ ಬಾಬು

ಜೂನ್‌ 10 ಹಾಗೂ 13 ರ ನಡುವೆ ತೆಲಂಗಾಣದ ಪಂಟರ್‌ಗಳು ನೇಪಾಳದ ಅತಿ ದೊಡ್ಡ ಕ್ಯಾಸಿನೋವಿನಿಂದ (Casino) ಕೋಟ್ಯಂತರ ರೂ. ಹಣವನ್ನು ಜೂಜು ಸೇರಿ ಹಲವು ಈವೆಂಟ್‌ಗಳಿಗೆ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರು ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಚಾರ್ಟಡ್‌ ವಿಮಾನಗಳಲ್ಲಿ ತೆರಳಿದ್ದರು, ಅಲ್ಲೀಮದ ನೇಪಾಳದ ಕ್ಯಾಸಿನೋಗೆ ಹೋಗಿದ್ದರು ಎಂದೂ ಹೇಳಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಇಡಿ ಅಧಿಕಾರಿಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (Foreign Exchange Management Act) (ಫೆಮಾ) ದ ಉಲ್ಲಂಘನೆಯಾಗಿದ್ಯಾ ಎಂಬ ಬಗ್ಗೆ ತನಿಖೆ ಮಾಡಲು ಇಡಿ ರೇಡ್‌ ನಡೆದಿದೆ ಎಂದು ತೀಳಿದುಬಂದಿದೆ. 

ಇದೇ ರೀತಿ ಗ್ಯಾಂಬ್ಲಿಂಗ್‌ ಕಾನೂನುಬದ್ಧವಾಗಿ ನಡೆಯುವ ಗೋವಾ, ಶ್ರೀಲಂಕಾ ಹಾಗೂ ಇತರೆ ದೇಶಗಳಲ್ಲಿ ಸಹ ಈ ಇಬ್ಬರು ಹಲವು ಈವೆಂಟ್‌ಗಳನ್ನು ನಡೆಸಿದ್ದಾರೆ ಎಂಬ ಆರೋಪವೂ ಇದೆ. ಅಲ್ಲದೆ, 3 ಲಕ್ಷ ರೂ. ನಿಂದ 5 ಲಕ್ಷ ರೂ. ಪ್ಯಾಕೇಜ್‌ ಟೂರ್‌ ಮೂಲಕ ಭಾರತದಿಂದ ಹಲವರನ್ನು ಕರೆದೊಯ್ಯಲಾಗಿದೆ ಎಂದೂ ತಿಳಿದುಬಂದಿತ್ತು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾದ ಚಿಕೋಟಿ ಪ್ರವೀಣ್‌
ಇಡಿ ದಾಳಿ ನಡೆಸಿದ ಇಬ್ಬರು ಉದ್ಯಮಿಗಳ ಪೈಕಿ ಚಿಕೋಟಿ ಪ್ರವೀಣ್‌ ಸಹ ಒಬ್ಬರು. ಇವರು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದಾರೆ. ತನ್ನನ್ನು ತಾನು ಪ್ರಾಣಿ ಪ್ರೇಮಿ ಹಾಗೂ ಪರಿಸರ ಪ್ರೇಮಿ ಎಂದು ಹೇಳಿಕೊಳ್ಳುವ ಪ್ರವೀಣ್‌ ಅವರ ಫಾರ್ಮ್‌ಹೌಸ್‌ನಲ್ಲಿ ವಿದೇಶದಿಂದ ತರಿಸಿರುವ ಹಲವು ಪ್ರಾಣಿಗಳೂ ಇವೆ. ಅವರ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಸೆಲೆಬ್ರಿಟಿಗಳಾದ ಮಲ್ಲಿಕಾ ಶೆರಾವತ್ ಹಾಗೂ ಗೋವಿಂದ ಜತೆಯಲ್ಲಿ ಫೋಟೋ ತೆಗೆಸಿಕೊಂಡಿರುವ ಫೋಟೋಗಳನ್ನು ಸಹ ನೋಡಬಹುದು. 

4 ಕಾರಿನಲ್ಲಿ ಹಣ ತುಂಬಿಕೊಂಡು ಎಸ್ಕೇಪ್, ಅರ್ಪಿತಾ ಚಟರ್ಜಿ ಭ್ರಷ್ಟಾಚಾರ ರಹಸ್ಯ ಬಿಚ್ಚಿಟ್ಟ ಇಡಿ!

ಅರಣ್ಯಾಧಿಕಾರಿಗಳಿಂದಲೂ ರೇಡ್‌
ಇನ್ನು, ಚಿಕೋಟಿ ಪ್ರವೀಣ್‌ ಅವರ ಫಾರ್ಮ್‌ಹೌಸ್‌ನಲ್ಲಿ ಹಲವು ಪ್ರಾಣಿಗಳನ್ನು ಸಾಕಿರುವ ಬಗ್ಗೆ ಮಾಹಿತಿ ದೊರೆತ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಸಹ ಪ್ರವೀಣ್‌ ಫಾರ್ಮ್‌ಹೌಸ್‌ ಮೇಲೆ ದಾಳಿ ನಡೆಸಿದ್ದಾರೆ. ಹಾಗೆ, ವನ್ಯಜೀವಿ ಸಂರಕ್ಷಣಾ ಕಾಯಿದೆಯ ನಿಯಮಗಳ ಉಲ್ಲಂಘನೆಯಾಗಿದ್ಯಾ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮುಂಗುಸಿ, ವಿವಿಧ ರೀತಿಯ ದೊಡ್ಡ ಗಾತ್ರದ ನಾಯಿಗಳು, ವಿದೇಶಿ ಜೇಡಗಳು, ಕುದುರೆಗಳು (ಕ್ರಾಸ್‌ ಬ್ರೀಡ್‌ ಕುದುರೆಗಳು ಸೇರಿದಂತೆ), ಹಂಸಗಳು, ಬಾತುಕೋಳಿಗಳು, ಗಿಳಿಗಳು, ಪಾರಿವಾಳಗಳು, ಪಾರಿವಾಳಗಳು, ಆಸ್ಟ್ರಿಚ್, ಹಸುಗಳು ಮತ್ತು ಎಮ್ಮೆಗಳು ಕಂಡುಬಂದಿವೆ.

Scroll to load tweet…

ಕುದುರೆಯೊಂದಕ್ಕೆ ಖ್ಯಾತ ಹಾಲಿವುಡ್‌ ನಟಿ ಏಂಜೆಲಿನಾ ಜೋಲಿ ಎಂಬ ಹೆಸರನ್ನಿಟ್ಟಿದ್ದಾರೆ ಎಂದೂ ವರದಿಯಾಗಿದೆ. ಅಲ್ಲದೆ, ಅವರು ತಾನು ಸಾಕಿರುವ ಎಲ್ಲ ಪ್ರಾಣಿಗಳನ್ನು ಚೆನ್ನಾಗಿ ಸಾಕುತ್ತಿದ್ದಾರೆ ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನೊಂದೆಡೆ, ಇಡಿ ದಾಳಿದೊಳಗಾದ ಪ್ರವೀಣ್‌ ಹಾಗೂ ಮಾಧವ ರೆಡ್ಡಿ ಇಬ್ಬರೂ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ಜತೆಗೆ ಸಂಪರ್ಕ ಹೊಂದಿದ್ದಾರೆ ಎಂದೂ ಹೇಳಲಾಗಿದೆ.