4 ಕಾರಿನಲ್ಲಿ ಹಣ ತುಂಬಿಕೊಂಡು ಎಸ್ಕೇಪ್, ಅರ್ಪಿತಾ ಚಟರ್ಜಿ ಭ್ರಷ್ಟಾಚಾರ ರಹಸ್ಯ ಬಿಚ್ಚಿಟ್ಟ ಇಡಿ!
ಶಾಲಾ ಶಿಕ್ಷಕರ ಅಕ್ರಮ ನೇಮಕಾತಿ ಹಗರಣ ಪಶ್ಚಿಮ ಬಂಗಳಾ ಸರ್ಕಾರಕ್ಕೆ ತೀವ್ರ ತಲೆನೋವಾಗಿದೆ. ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಚಟರ್ಜಿ ಒಂದೊಂದೆ ಮನೆಯಲ್ಲಿ ಕೋಟಿ ಕೋಟಿ ರೂಪಾಯಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೀಗ ಅರ್ಪಿತಾ ಮತ್ತೊಂದು ಮನೆಯಿಂದ ಹಣವನ್ನುು ಸಾಗಿಸಿರುವ ಘಟನೆ ನಡೆದಿದೆ.
ಕೋಲ್ಕತಾ(ಜು.29): ಶಾಲಾ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಪಶ್ಚಿಮ ಬಂಗಾಳ ಸರ್ಕಾರದ ಬುಡ ಅಲುಗಾಡಿಸುತ್ತಿದೆ. ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಚಟರ್ಜಿ ಮನೆಯಲ್ಲಿ 28 ಕೋಟಿ ರೂಪಾಯಿ ಪತ್ತೆಯಾಗಿತ್ತು. ಇದೀಗ ಮತ್ತೊಂದು ಮನೆಯಲ್ಲಿದ್ದ ಕಂತೆ ಕಂತೆ ಹಣ ಕಾರಿನಲ್ಲಿ ತುಂಬಿಕೊಂಡು ಸಾಗಿಸಿದ ಘಟನ ನಡೆದಿದೆ. ಅರ್ಪಿತಾ ಬಂಧನವಾಗುತ್ತಿದ್ದಂತೆ ಇತ್ತ ಅರ್ಪಿತಾ ಚಟರ್ಜಿ ಹಲವು ಮನೆಗಳಲ್ಲಿ ಅಡಗಿಟಿಸಿದ್ದ ಕಂತೆ ಕಂತೆ ಹಣವನ್ನು ಸಾಗಿಸಲಾಗಿದೆ. ಈ ಕುರಿತು ಇಡಿ ಅಧಿಕಾರಿಗಳು ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಅರ್ಪಿತಾ ಅವರ ಒಂದು ಮನೆಯಿಂದ 4 ಕಾರುಗಳು ಕಾಣೆಯಾಗಿದೆ. ಈ ಕಾರಿನಲ್ಲಿ ಮನೆಯಲ್ಲಿಟ್ಟಿದ್ದ ಕಂತೆ ಕಂತೆ ಹಣವನ್ನು ತುಂಬಿಕೊಂಡು ರಹಸ್ಯ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಡಿ 4, ಹೋಂಡಾ ಸಿಟಿ, ಹೋಂಡಾ CRV ಹಾಗೂ ಮರ್ಸಿಡೀಸ್ ಬೆಂಜ್ ಕಾರುಗಳ ಮೂಲಕ ಹಣ ಸಾಗಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ನಾಲ್ಕು ಕಾರುಗಳು ಅರ್ಪಿತಾ ಮನೆಯಿಂದ ಕಾಣೆಯಾಗಿದೆ. ಅರ್ಪಿತ ಬಂಧನದ ಮರುದಿನವೇ ಈ ಘಟನೆ ನಡೆದಿದೆ. ಈ ಕಾರುಗಳು ಎಲ್ಲವೆ, ಯಾವ ದಿಕ್ಕಿನಲ್ಲಿ ಚಲಿಸಿದೆ ಅನ್ನೋ ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.
ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿಯ ಮತ್ತಷ್ಟುಬ್ರಹ್ಮಾಂಡ ಭ್ರಷ್ಟಾಚಾರ ಬುಧವಾರ ಬೆಳಕಿಗೆ ಬಂದಿದೆ. ಸಚಿವ ಪಾರ್ಥ ಅವರ ಆಪ್ತೆ ಅರ್ಪಿತಾಗೆ ಸೇರಿದ ಮನೆ ಮೇಲೆ ಇ.ಡಿ. ಅಧಿಕಾರಿಗಳು ಬುಧವಾರ ಮತ್ತೆ ದಾಳಿ ನಡೆಸಿದ್ದು ಈ ವೇಳೆ 20 ಕೋಟಿ ನಗದು ಮತ್ತು 3 ಕೋಟಿ ಬೆಲೆಬಾಳುವ 3 ಕೆಜಿ ಚಿನ್ನ ಮತ್ತು ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಆಪ್ತೆ ಮನೆಯಲ್ಲಿ ಮತ್ತೆ ಸಿಕ್ತು 28 ಕೋಟಿ ಹಣ, ಕೆಜಿಗಟ್ಟಲೆ ಚಿನ್ನ
ಮೂರು ದಿನಗಳ ಹಿಂದೆ ಕೂಡಾ ಅರ್ಪಿತಾಗೆ ಸೇರಿದ ಇನ್ನೊಂದು ಮನೆ ಮೇಲೆ ದಾಳಿ ನಡೆಸಿದಾಗ 21 ಕೋಟಿ ರು. ನಗದು ಸಿಕ್ಕಿತ್ತು. ವಿಚಾರಣೆ ವೇಳೆ ಈ ಹಣ ಪಾರ್ಥ ಅವರಿಗೆ ಸೇರಿದ್ದು. ಇದೆಲ್ಲಾ ಶಿಕ್ಷಕರ ನೇಮಕ ಹಗರಣದಲ್ಲಿ ಪಡೆದ ಲಂಚದ ಹಣ ಎಂದು ಅರ್ಪಿತಾ ಹೇಳಿದ್ದರು. ಅಲ್ಲದೆ 2016ರಲ್ಲಿ ನಟರೊಬ್ಬರ ಮೂಲಕ ನನ್ನ-ಪಾರ್ಥ ಪರಿಚಯ ಆಯಿತು. ಬಳಿಕ ಸಚಿವರು ನನ್ನ ಮನೆಯನ್ನು ಮಿನಿ ಬ್ಯಾಂಕ್ ಮಾಡಿಕೊಂಡಿದ್ದರು. ಒಂದು ಕೋಣೆಯಲ್ಲಿ ಹಣ ಇರಿಸುತ್ತಿದ್ದರು. 10 ದಿನಕ್ಕೊಮ್ಮೆ ಸಚಿವರು ಮನೆಗೆ ಬರುತ್ತಿದ್ದರು. ಆ ಕೋಣೆಗೆ ಪಾರ್ಥ ಮತ್ತು ಅವರ ಆಪ್ತರಿಗೆ ಮಾತ್ರ ಪ್ರವೇಶವಿತ್ತು.
ಶಿಕ್ಷಕ ನೇಮಕಾತಿ ಹಗರಣದ ಪ್ರಮುಖ ರೂವಾರಿ ಪಾರ್ಥ ಚಟರ್ಜಿ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದಿಂದ ಕೈಬಿಟ್ಟಿದ್ದಾರೆ. ಜೊತೆಗೆ ಪಕ್ಷದ ಎಲ್ಲಾ ಹುದ್ದೆಗಳಿಂದ ಕೈಬಿಡುವುದರ ಜೊತೆಗೆ, ತನಿಖೆ ಪೂರ್ಣಗೊಳ್ಳುವವರೆಗೂ ಪಕ್ಷದಿಂದ ಅಮಾನತು ಮಾಡಲಾಗಿದೆ. ಪಾರ್ಥ ಆಪ್ತೆಯ ಮನೆಯಲ್ಲಿ 50 ಕೋಟಿ ನಗದು ಮತ್ತು 6 ಕೆಜಿ ಚಿನ್ನ ಸಿಕ್ಕ ಬಳಿಕ ಟಿಎಂಸಿ ಭಾರೀ ಮುಜುಗರಕ್ಕೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಪಾರ್ಥ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಜೊತೆಗೆ, ಪಕ್ಷದಿಂದಲೂ ವಜಾ ಮಾಡಬೇಕೆಂದು ಸ್ವತಃ ಹಲವು ಟಿಎಂಸಿ ನಾಯಕರು ಬಹಿರಂಗವಾಗಿಯೇ ದೀದಿಯನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪಾರ್ಥ ಅವರನ್ನು ಸಚಿವ ಸಂಪುಟದಿಂದ ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಯಿತು.