ಶಾಸಕ ಜಮೀರ್‌ಗೆ ಸಾಲ ಕೊಟ್ಟಿದ್ದಕ್ಕೆ ಇಡಿ ವಿಚಾರಣೆ: ಕೆಜಿಎಫ್ ಬಾಬು
ನೋಟಿಸ್ ಕೊಟ್ಟರೂ ಜಮೀರ್ ಸಾಲ ತೀರಿಸಿಲ್ಲ: ಕೆಜಿಎಫ್ ಬಾಬು
ಬೆಂಗಳೂರು(ಜು.30): ನಾನು ಶಾಸಕ ಜಮೀರ್ ಅಹಮದ್ ಅವರಿಗೆ 3.5 ಕೋಟಿ ರು. ನೀಡಿದ್ದೆ. ಅವರು ನನ್ನಿಂದ ಸಾಲ ಪಡೆದಿರುವುದನ್ನು ದೃಢೀಕರಿಸಿಕೊಳ್ಳಲು ಇ.ಡಿ.ಯವರು ನನಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದರು. ಇ.ಡಿ. ಕಚೇರಿಗೆ ಹಾಜರಾಗಿ ಎಲ್ಲ ಉತ್ತರ ನೀಡಿ ಬಂದಿದ್ದೇನೆ ಎಂದು ಕಾಂಗ್ರೆಸ್‌ನ ಕೆಜಿಎಫ್ ಬಾಬು ಹೇಳಿದ್ದಾರೆ.
ಇ.ಡಿ. ವಿಚಾರಣೆಗೆ ಹಾಜರಾದ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಜಮೀರ್ ಅಹ್ಮದ್‌ಗೆ ಮನೆ ಕಟ್ಟಲು 2013ರಲ್ಲಿ ಡಿಡಿ ಮೂಲಕ 3.5 ಕೋಟಿ ರು. ಸಾಲ ಕೊಟ್ಟಿದ್ದೆ. ಅವರಿಗೆ ಏನು ಕಷ್ಟವೋ, ಗೊತ್ತಿಲ್ಲ. ಆದರೆ, ಸಾಲ ತೀರಿಸಿಲ್ಲ. ಕಾನೂನು ನೋಟಿಸ್ ಕೂಡ ಕೊಟ್ಟಿದ್ದೇನೆ. ಈಗ ಜಮೀರ್ ಮನೆ ಮೇಲೂ ಇ.ಡಿ.ಯವರು ದಾಳಿ ನಡೆಸಿದ್ದಾರೆ. ನನ್ನ ಬಳಿ ಸಾಲ ತಗೆದುಕೊಂಡಿದ್ದಕ್ಕೆ ದೃಢೀಕರಣ ಕೇಳುತ್ತಿದ್ದಾರೆ. ಅದರಿಂದಲೇ ನನಗೆ ನೋಟಿಸ್ ಬಂತು. ನಾನು ಇ.ಡಿ ಕಚೇರಿಗೆ ಹಾಜರಾಗಿದ್ದೆ. ಯಾಕೆ ದುಡ್ಡು ಕೊಟ್ರಿ, ಯಾಕೆ ವಾಪಸ್ ತಗೊಂಡಿಲ್ಲ ಅಂತ ಪ್ರಶ್ನಿಸಿದರು. ನನಗೆ ಜಗಳ ಮಾಡ್ಕೊಂಡು ಹಣ ಪಡೆಯಲು ಇಷ್ಟವಿಲ್ಲ ಅಂದು ಹೇಳಿದ್ದೇನೆ. ಹತ್ತು ಗಂಟೆ ವಿಚಾರಣೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ ಎಂದು ಹೇಳಿದರು.
ಶ್ರೀಮಂತ ರಾಜಕಾರಣಿ ಕೆಜಿಎಫ್ ಬಾಬುಗೆ ಇ.ಡಿ. ಶಾಕ್: 1743 ಕೋಟಿ ಒಡೆಯನ ಮೇಲೆ ಬೆಳ್ಳಂಬೆಳಗ್ಗೆ ದಾಳಿ
ನಾನು ಒಬ್ಬ ಸ್ಟ್ರೇಟ್ ಫಾರ್ವರ್ಡ್ ಬ್ಯುಸಿನೆಸ್‌ಮನ್. ಕಡಿಮೆ ಓದಿದ್ರೂ ನೋಡ್ಕೊಂಡು ಪ್ರಾಪರ್ಟಿ ಖರೀದಿ ಮಾಡ್ತೀನಿ. ನಾನು ಯಾವುದೇ ಮನಿ ಲಾಂಡ್ರಿಂಗ್ ಮಾಡಿಲ್ಲ. ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದಾಗ ನಾನು 1,740 ಕೋಟಿ ಆಸ್ತಿ ಡಿಕ್ಲೇರ್ ಮಾಡಿಕೊಂಡಿದ್ದೇನೆ. ನಾನು ಆದಾಯ ತೆರಿಗೆ ಎಲ್ಲವನ್ನೂ ಸಮರ್ಪಕವಾಗಿ ಪಾವತಿಸಿದ್ದೇನೆ. ಆದರೆ, ಯಾವ ಕಾರಣಕ್ಕೆ ದಾಳಿ ಮಾಡಿದರು ಗೊತ್ತಿಲ್ಲ. ನಾನು ಕಾಂಗ್ರೆಸ್ ಸೇರಿದ ಒಂದೇ ಕಾರಣಕ್ಕೆ ನನ್ನ ಮೇಲೆ ಇ.ಡಿ. ತನಿಖೆ ಇಷ್ಟೆಲ್ಲಾ ಆಗ್ತಿದೆ ಎಂದು ಆರೋಪಿಸಿದರು.
ಸರ್ಕಾರ ಅಥವಾ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ಯಾವುದೂ ಇಲ್ಲದೆ ನೇರ ಇ.ಡಿ. ದಾಳಿ ಮಾಡಿದ್ದಾರೆ. ನನ್ನ ಮನೆ ಮೇಲೆ ದಾಳಿ ಆದಾಗ ನಾಲ್ಕು ಕೋಟಿ ರು. ಮೌಲ್ಯದ ಚಿನ್ನ, ಎಂಟು ಲಕ್ಷಕ್ಕೂ ಹೆಚ್ಚು ಹಣ ಇತ್ತು. ಇದಕ್ಕೆ ನನ್ನ ಬಳಿ ಬಿಲ್ ಇದೆ. ಎಲ್ಲದಕ್ಕೂ ದಾಖಲೆಗಳನ್ನ ಇ.ಡಿ.ಗೆ ಕೊಟ್ಟಿದೀನಿ. ದಾಖಲೆ ಕೊಟ್ರೂ ಚಿನ್ನವನ್ನು ಸೀಜ್ ಮಾಡಿದ್ದಾರೆ. ದೆಹಲಿಗೆ ಬಂದ್ರೆ ಗೋಲ್ಡ್ ವಾಪಸ್ ಕೊಡ್ತೀವಿ ಅಂತಾ ನೋಟಿಸ್ ಕೊಟ್ಟಿದ್ರು. ಈಗ ಮತ್ತೆ ನನ್ನ ಪತ್ನಿ ಹೆಸರಿಗೆ ನೋಟಿಸ್ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಮಕ್ಕಳಿಗೂ ನೋಟಿಸ್ ಕೊಡಬಹುದು ಎಂದರು.