ಆತ ತನ್ನ ಸ್ನೇಹಿತನ ಕಾರ್ ತೆಗೆದುಕೊಂಡು ಮನೆಗೆ ಹೊರಟಿದ್ದ. ದಾರಿ ನಡುವೆ ಅದೇನು ಆಗಿತ್ತೋ ಏನೋ, ಮನೆಗೆ ಹೋಗುತ್ತೇನೆ ಎಂದು ಹೋದವನು ನಾಪತ್ತೆಯಾಗಿದ್ದ. ಸತತ ಐದು ದಿನಗಳ ಕಾಲ ಹುಡುಕಾಟ ನಡೆಸಿದ ಪೊಲೀಸರು, ಸ್ನೇಹಿತರಿಗೆ ಆತ ದೊರೆತ್ತಿದ್ದು ಕೊಳೆತ ಶವವಾಗಿ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.15): ಆತ ತನ್ನ ಸ್ನೇಹಿತನ ಕಾರ್ ತೆಗೆದುಕೊಂಡು ಮನೆಗೆ ಹೊರಟಿದ್ದ. ದಾರಿ ನಡುವೆ ಅದೇನು ಆಗಿತ್ತೋ ಏನೋ, ಮನೆಗೆ ಹೋಗುತ್ತೇನೆ ಎಂದು ಹೋದವನು ನಾಪತ್ತೆಯಾಗಿದ್ದ. ಸತತ ಐದು ದಿನಗಳ ಕಾಲ ಹುಡುಕಾಟ ನಡೆಸಿದ ಪೊಲೀಸರು, ಸ್ನೇಹಿತರಿಗೆ ಆತ ದೊರೆತ್ತಿದ್ದು ಕೊಳೆತ ಶವವಾಗಿ. ಹಾಗಾದರೆ ಮನೆಗೆ ಹೋಗುವ ದಾರಿಯಲ್ಲಿ ಆಗಿದ್ದೇನು? ಎನ್ನುವುದೇ ದೊಡ್ಡ ಪ್ರಶ್ನೆ. ಮನೆಗೆ ಹೋಗುತ್ತೇನೆಂದು ಹೊರಟವನು ಆತ ನಾಪತ್ತೆಯಾಗಿದ್ದ. ಅಲ್ಲಿಗೆ ಇದು ಅವನ ಬದುಕಿನ ಕೊನೆ ಪ್ರಯಾಣವಾಗಿತ್ತು. ಇಂತಹ ವಿಚಿತ್ರ, ಅಚ್ಚರಿಯ ಹಾಗೂ ಭೀಕರ, ಭೀಭತ್ಸ ಘಟನೆ ನಡೆದಿದ್ದು ಕೊಡಗು ಜಿಲ್ಲೆಯಲ್ಲಿ. ಹೌದು ಇವರು ಸಂಪತ್ ಅಲಿಯಾಸ್ ಶಂಭು. ಸೋಮವಾರಪೇಟೆ ತಾಲ್ಲೂಕಿನ ಕಕ್ಕೆಹೊಳೆ ಗ್ರಾಮದವರು.
ಪಿಡಬ್ಲ್ಯೂಡಿ ಕ್ಲಾಸ್ ಒನ್ ಕಂಟ್ರಾಕ್ಟರ್. ಅಂದು ಮೇ 9, ಗುಡ್ಡೆಹೊಸೂರಿನಲ್ಲಿರುವ ರೆಸಾರ್ಟ್ನಲ್ಲಿ ತನ್ನ ಕಾರನ್ನು ನಿಲ್ಲಿಸಿ ತನ್ನ ಬ್ಯುಸಿನೆಸ್ ಪಾರ್ಟನರ್ ಕಾರು ತೆಗೆದುಕೊಂಡು ತಮ್ಮ ಊರು ಕಕ್ಕೆಹೊಳೆ ಕಡೆಗೆ ಹೊರಟಿದ್ದ. ಆದರೆ ಈ ನಡುವೆ ಮಹಿಳೆಯೊಬ್ಬಳು ಸಂಪತ್ಗೆ ಕರೆ ಮಾಡಿ ತಮ್ಮ ಮನೆಗೆ ಬಾ ಎಂದು ಕರೆದಿದ್ದಳಂತೆ. ಮೊದಲಿನಿಂದಲೇ ಪರಿಚಯ ಇದ್ದಿದ್ದರಿಂದ ಸಂಪತ್ ಆಕೆಯ ಮನೆಗೆ ಹೋಗಿದ್ದರಂತೆ. ಅದೇ ಕೊನೆ ನೋಡಿ, ಅಲ್ಲಿಂದ ಸಂಪತ್ ಯಾರ ಸಂಪರ್ಕಕ್ಕೂ ದೊರೆತ್ತಿಲ್ಲ. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದವು. ಈತನ ಸ್ನೇಹಿತರು ಸಂಪತ್ ನಾಪತ್ತೆಯಾಗಿದ್ದಾರೆ ಎಂದು ಕುಶಾಲನಗರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Kodagu: ಕುಸಿಯುವ ಆತಂಕದಲ್ಲಿ ವಿರಾಜಪೇಟೆ ಅಯ್ಯಪ್ಪ ಬೆಟ್ಟದ ಜನರ ಬದುಕು
ಅಂದಿನಿಂದ ಕುಶಾಲನಗರ ನಗರ ಠಾಣೆ ಪೊಲೀಸರು, ಆತನ ಆಪ್ತ ಸ್ನೇಹಿತರು ಹುಡುಕದ ಊರಿಲ್ಲ, ತಡಕಾಡದ ಜಾಗವಿಲ್ಲ. ಹೀಗೆ ಹುಡುಕಾಡಿದ ಪೊಲೀಸರು, ಸ್ನೇಹಿತರಿಗೆ ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಪತ್ ತೆಗೆದುಕೊಂಡು ಹೋಗಿದ್ದ ಕಾರು ರಕ್ತಸಿಕ್ತವಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಕಾರಿನ ಜಾಡು ಹಿಡಿದು ಹುಡುಕಾಡಿದ್ದ ಪೊಲೀಸರಿಗೆ ಕೊನೆಗೂ ಸ್ಥಳೀಯರ ಸಹಾಯದಿಂದ ಕಾರು ದೊರೆತ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಂಪತ್ ಶವ ದೊರೆತಿತ್ತು. ಹೀಗಾಗಿಯೇ ಆತನನ್ನು ತಮ್ಮ ಮನೆಗೆ ಕರೆದಿದ್ದ ಆ ಮಹಿಳೆ ಮತ್ತು ಆಕೆ ಪತಿ ಮತ್ತವರ ಸ್ನೇಹಿತರು ಸೇರಿ ಸಂಪತ್ನನ್ನು ಬರ್ಭರವಾಗಿ ಕೊಲೆ ಮಾಡಿದ್ದಾರೆ ಎಂದು ಸಂಪತ್ನ ಆಪ್ತ ಸ್ನೇಹಿತರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಸಂಪತ್ ಗೆ ಕರೆ ಮಾಡಿ ಕರೆದವರು ಬೇರೆ ಯಾರೂ ಅಲ್ಲ, ಅವರ ತುಂಬಾ ವರ್ಷಗಳಿಂದ ಸ್ನೇಹಿತೆಯಾಗಿದ್ದವರೇ ಕರೆ ಮಾಡಿ ಕರೆದಿದ್ದರು ಎನ್ನಲಾಗಿದೆ. ತನ್ನೆಲ್ಲಾ ವ್ಯವಹಾರಗಳಿಗೂ ಸಂಪತ್ ಅವರಿಂದ ಲಕ್ಷಗಟ್ಟಲೆ ಹಣ ಪಡೆದುಕೊಳ್ಳುತ್ತಿದ್ದ ಆಕೆ ಸಂಪತ್ ಅವರಿಗೆ 20 ಲಕ್ಷಕ್ಕೂ ಹೆಚ್ಚು ಹಣ ಕೊಡಬೇಕಾಗಿತ್ತಂತೆ. ಆದರೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಇದೇ ಮಹಿಳೆ ಸಂಪತ್ ಅವರಿಗೆ ತನ್ನ ಪತಿ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದರಂತೆ. ಅದರ ವೀಡಿಯೋವನ್ನು ಸಂಪತ್ ಸ್ನೇಹಿತರು ನೀಡಿದ್ದಾರೆ. ಈ ಕುರಿತು ಮಹಿಳೆ, ಆಕೆಯ ಪತಿ ಮತ್ತು ಸ್ನೇಹಿರ ವಿರುದ್ಧ ಸಂಪತ್ 307 ಪ್ರಕರಣ ದಾಖಲಿಸಿದ್ದರಂತೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಮಹಿಳೆ, ಆಕೆಯ ಪತಿ ಹಾಗೂ ಆತನ ಸ್ನೇಹಿತನಿಗೆ ಶಿಕ್ಷೆಯಾಗುವ ಸಾಧ್ಯತೆ ಇತ್ತಂತೆ.
ಕೊಡಗು ಜಿಲ್ಲೆಯ ಸಾವಿರಾರು ರೈತರಿಗೆ ಕಹಿಯಾದ ಸಿಹಿಗೆಣಸು
ಹೀಗಾಗಿಯೇ ಆ ಮಹಿಳೆ ಹಲವು ಬಾರಿ ಸಂಪತ್ಗೆ ಈ ಪ್ರಕರಣವನ್ನು ವಾಪಸ್ ಪಡೆಯುವಂತೆ ಒತ್ತಾಯಿಸುತ್ತಿದ್ದರಂತೆ. ನೀನು ನನಗೆ ಕೊಡಬೇಕಾಗಿರುವ 20 ಲಕ್ಷ ಹಣ ವಾಪಸ್ ಕೊಡು, ನಾನು ಪ್ರಕರಣ ವಾಪಸ್ ಪಡೆಯುತ್ತೇನೆ ಎಂದಿದ್ದರಂತೆ. ಇದೇ ವಿಚಾರಕ್ಕೆ ಸಂಪತನನ್ನು ಮನೆಗೆ ಕರೆಸಿಕೊಂಡು ಕೊಚ್ಚಿ ಕೊಲೆ ಮಾಡಿ ಬಳಿಕ ಶವವನ್ನು ಯಾರಿಗೂ ಗೊತ್ತಾಗದಂತೆ ಎಸೆದಿದ್ದಾರೆ ಎಂದು ಸಂಪತ್ನ ಸ್ನೇಹಿತರು ಹೇಳುತ್ತಿದ್ದಾರೆ. ಸದ್ಯ ಕುಶಾಲನಗರ ನಗರ ಠಾಣೆ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, ಮೂವರನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಏನೇ ಹಾಗಲಿ, ಸ್ನೇಹತ್ವದಲ್ಲಿ ಸಂಪತ್ನಿಂದ ಎಲ್ಲಾ ಸಂಪತ್ತನ್ನೂ ದೋಚಿ ಕೊನೆಗೆ ಯಾವುದೋ ಕಾರಣಕ್ಕೆ ಆತನ ಉಸಿರನ್ನೇ ನಿಲ್ಲಿಸಿದ್ದು ಎಷ್ಟು ಸರಿ ಎಂದು ಹಂತಕರಿಗೆ ಎಲ್ಲರೂ ಹಿಡಿ ಶಾಪ ಹಾಕುತ್ತಿದ್ದಾರೆ.


