ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಯಿತ್ತೆಂದರೆ ಎಲ್ಲಿ, ಯಾವಾಗ, ಯಾವ ಬೆಟ್ಟ ಕುಸಿಯುತ್ತದೆಯೋ ಎನ್ನುವ ಆತಂಕ ಶುರುವಾಗಿ ಬಿಡುತ್ತದೆ. ಇದರ ನಡುವೆ ಈ ಬೆಟ್ಟ ಹಂತ ಹಂತವಾಗಿ ಕುಸಿಯುವುದಕ್ಕೆ ಆರಂಭವಾಗಿ ನಾಲ್ಕೈದು ವರ್ಷಗಳೇ ಕಳೆದಿವೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.14): ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಯಿತ್ತೆಂದರೆ ಎಲ್ಲಿ, ಯಾವಾಗ, ಯಾವ ಬೆಟ್ಟ ಕುಸಿಯುತ್ತದೆಯೋ ಎನ್ನುವ ಆತಂಕ ಶುರುವಾಗಿ ಬಿಡುತ್ತದೆ. ಇದರ ನಡುವೆ ಈ ಬೆಟ್ಟ ಹಂತ ಹಂತವಾಗಿ ಕುಸಿಯುವುದಕ್ಕೆ ಆರಂಭವಾಗಿ ನಾಲ್ಕೈದು ವರ್ಷಗಳೇ ಕಳೆದಿವೆ. ಆದರೂ ಈ ಅಪಾಯದ ಬೆಟ್ಟದಲ್ಲಿಯೇ ಬದುಕು ಕಳೆಯುತ್ತಿರುವ ನೂರಾರು ಕುಟುಂಬಗಳಿಗೆ ಇದೀಗ ಮತ್ತೆ ಆತಂಕ ಶುರುವಾಗಿದೆ. ಹೌದು ತಾಲ್ಲೂಕು ಕೇಂದ್ರವಾಗಿರುವ ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಇರುವ ಮಲೆತಿರಿಕೆ ಅಯ್ಯಪ್ಪ ಬೆಟ್ಟದಲ್ಲಿ 2019 ರಲ್ಲಿಯೇ ಹಲವೆಡೆ ದೊಡ್ಡ ದೊಡ್ಡ ಬಿರುಕುಗಳು ಮೂಡಿದ್ದವು. ಜೊತೆಗೆ ಹಲವೆಡೆ ಚಿಕ್ಕಪುಟ್ಟ ಭೂಕುಸಿತಗಳು ಆಗಿವೆ.
ವಿಪರ್ಯಾಸವೆಂದರೆ ಈ ಬೆಟ್ಟದಲ್ಲಿ ನೂರಾರು ಕುಟುಂಬಗಳು 35 ರಿಂದ 40 ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಬದುಕು ನಡೆಸುತ್ತಿವೆ. ನಾಲ್ಕೈದು ವರ್ಷಗಳ ಹಿಂದೆಯೇ ಬೆಟ್ಟದಲ್ಲಿ ಸಾಕಷ್ಟು ಬಿರುಕುಗಳು ಮೂಡಿದ್ದರಿಂದ ಅಲ್ಲಿನ ಎಲ್ಲಾ ನಿವಾಸಿಗಳನ್ನು ಮಳೆಗಾಲದಲ್ಲಿ ಸ್ಥಳಾಂತರ ಮಾಡಿ ನಿರಾಶ್ರಿತರ ಶಿಬಿರಗಳಿಗೆ ಕಳುಹಿಸಲಾಗಿತ್ತು. ಈ ಕುಟುಂಬಗಳ ಒತ್ತಾಯದ ಮೇರೆಗೆ ವಿರಾಜಪೇಟೆ ಪಕ್ಕದಲ್ಲೇ ಇರುವ ಅಂಬಟ್ಟಿ ಎಂಬಲ್ಲಿ ನಿವೇಶನ ಹಂಚಲು ಅಂದಿನ ಬಿಜೆಪಿ ಸರ್ಕಾರದಲ್ಲಿ ನಿರ್ಧರಿಸಿಲಾಗಿತ್ತು. ಹಾಗೆ ಹೇಳಿ ನಾಲ್ಕೈದು ವರ್ಷಗಳೇ ಕಳೆದರೂ ಇಂದಿಗೂ ಆ ಕೆಲಸ ಆಗಿಲ್ಲ.
ಕೊಡಗು ಜಿಲ್ಲೆಯ ಸಾವಿರಾರು ರೈತರಿಗೆ ಕಹಿಯಾದ ಸಿಹಿಗೆಣಸು
ಬದಲಾಗಿ ಪ್ರತೀ ವರ್ಷ ಮಳೆಗಾಲ ಆರಂಭವಾಗಿ ಮಳೆ ತೀವ್ರಗೊಳ್ಳುತ್ತಿದ್ದಂತೆ ಅಲ್ಲಿನ ನಿವಾಸಿಗಳನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಮತ್ತೆ ಅದೇ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಹೀಗೆ ಪ್ರತೀ ವರ್ಷ ಮಳೆಗಾಲದಲ್ಲಿ ಇಡೀ ಕುಟುಂಬವನ್ನು ಸ್ಥಳಾಂತರ ಮಾಡಿ ಸಾಕಾಗಿ ಹೋಗಿದೆ. ಮಕ್ಕಳು, ಮರಿಗಳು ವಯೋವೃದ್ಧರನ್ನೆಲ್ಲಾ ನಿರಾಶ್ರಿತ ಕೇಂದ್ರಗಳಲ್ಲಿ ಇರಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಈ ಬಾರಿ ಇಲ್ಲಿಂದ ನಾವು ಕದಲುವುದಿಲ್ಲ. ಸತ್ತರೂ ಇಲ್ಲಿಯೇ ಸಾಯುತ್ತೇವೆ, ಬದುಕಿದರೂ ಇಲ್ಲಿಯೇ ಬದುಕುತ್ತೇವೆ ಎನ್ನುತ್ತಿದ್ದಾರೆ ನಿವಾಸಿಗಳು.
ಮಳೆಗಾಲ ಆರಂಭಕ್ಕೂ ಮುನ್ನವೆ ಬೆಟ್ಟದಲ್ಲಿ ಈಗಾಗಲೇ ಬಿರುಕು ಮೂಡಿದೆ. ಇದು ಅಯ್ಯಪ್ಪ ಬೆಟ್ಟದ ನಿವಾಸಿಗಳನ್ನು ಆತಂಕಕ್ಕೆ ದೂಡಿದೆ. ಒಂದು ವೇಳೆ ಬೆಟ್ಟ ಕುಸಿದಲ್ಲಿ ಅದರಿಂದ ಸಂಭವಿಸುವ ಅನಾಹುತವನ್ನು ಊಹಿಸಲು ಸಾಧ್ಯವೇ ಇಲ್ಲ. ಬೆಟ್ಟದ ಮೇಲಿರುವ ನೂರಾರು ಕುಟುಂಬಗಳು ಅಷ್ಟೇ ಅಲ್ಲ, ಬೆಟ್ಟದ ತಪ್ಪಲಿನಲ್ಲಿ ಇರುವ ವಿರಾಜಪೇಟೆ ಪಟ್ಟಣದ ಬಹುತೇಕ ಭಾಗ ಕುಸಿಯುವ ಬೆಟ್ಟದಿಂದ ಬಹುತೇಕ ಮುಚ್ಚಿ ಹೋಗಿ ಬಿಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಯ್ಯಪ್ಪ ಬೆಟ್ಟ ಕುಸಿದಿದ್ದೇ ಆದಲ್ಲಿ, ಪಟ್ಟಣದ ತೆಲುಗರ ಬೀದಿವರೆಗೆ ದೊಡ್ಡ ಸಮಸ್ಯೆಯಾಗುವುದಂತು ಖಚಿತ.
ವಿರಾಜಪೇಟೆಯ ನೆಹರು ನಗರದ ಬೃಹತ್ ಬೆಟ್ಟ ಕೊರೆತ: ಭೂಕುಸಿತಕ್ಕೆ ಆಹ್ವಾನ
ಹೀಗಾಗಿಯೇ ಈ ಬೆಟ್ಟ ಪ್ರದೇಶ ವಾಸಿಸುವುದಕ್ಕೆ ಯೋಗ್ಯವಲ್ಲ ಎಂದು ವಿಜ್ಞಾನಿಗಳ ತಂಡವೇ 2020 ರಲ್ಲಿಯೇ ಹೇಳಿತ್ತು. ಇದನ್ನರಿತ ಅಂದಿನ ಬಿಜೆಪಿ ನೇತೃತ್ವದ ಸರ್ಕಾರ ಬೇರೆಡೆ ನಿವೇಶನ ಕೊಡುವುದಾಗಿ ಹೇಳಿ ಜಾಗ ಗುರುತ್ತಿಸಿದ್ದರೂ ಇಂದಿಗೂ ನಿವೇಶನ ಹಂಚಿಕೆ ಮಾಡಿಲ್ಲ. ಕೇವಲ ನಿವೇಶನ ಕೊಡುಗುವುದಾಗಿ ಹೇಳಿ ನಮ್ಮನ್ನು ಸಮಾಧಾನ ಪಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ನಾವು ಈ ಬಾರಿ ನಮ್ಮ ಮನೆಗಳನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಜನರು ಪಟ್ಟು ಹಿಡಿದಿದ್ದಾರೆ. ಏನೇ ಆಗಲಿ ಗೊತ್ತಿದ್ದೂ ಗೊತ್ತಿದ್ದೂ ಕುಸಿಯುವ ಆತಂಕದಲ್ಲಿರುವ ಬೆಟ್ಟದಲ್ಲಿಯೇ ಜನರನ್ನು ಉಳಿಸುತ್ತಿರುವುದು ಸರ್ಕಾರಗಳೇ ಜನರನ್ನು ಸಮಸ್ಯೆಗೆ ದೂಡಿದಂತೆ ಆಗಿದೆ.


