ನಮ್ಮಲ್ಲಿ ಪಾಕಿಸ್ತಾನಿಗಳು ನೆಲೆಸಿರುವ ಬಗ್ಗೆ ಈಗಾಗಲೇ ಅಂಕಿ ಅಂಶ ಸಂಗ್ರಹಿಸಲಾಗುತ್ತಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಮಡಿಕೇರಿ (ಏ.28): ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿಯರನ್ನು ದೇಶದಿಂದ ಹೊರ ಹೋಗುವಂತೆ ಕೇಂದ್ರ ಆದೇಶಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಪಾಕಿಸ್ತಾನಿಗಳು ನೆಲೆಸಿರುವ ಬಗ್ಗೆ ಈಗಾಗಲೇ ಅಂಕಿ ಅಂಶ ಸಂಗ್ರಹಿಸಲಾಗುತ್ತಿದೆ. ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಜನ ಇದ್ದಾರೆ ಎನ್ನುವ ಮಾಹಿತಿ ಕಲೆ ಹಾಕಲಾಗುತ್ತಿದೆ. ದೀರ್ಘಾವಧಿ ವೀಸಾ ಇರುವವರಿಗೆ, ಮದುವೆ ಆಗಿರುವವರಿಗೆ ಹೀಗೆ ಕೆಲವರಿಗೆ ಕೇಂದ್ರ ಸರ್ಕಾರದಿಂದಲೇ ರಿಯಾಯಿತಿ ಇದೆ.
ಇದನ್ನು ಹೊರತುಪಡಿಸಿ ಉಳಿದವರನ್ನು ತಕ್ಷಣವೇ ವಾಪಸ್ ಕಳುಹಿಸಲಾಗುತ್ತಿದೆ. ಅಲ್ಪಾವಧಿ ವೀಸಾ, ವಿದ್ಯಾರ್ಥಿಗಳು. ಪ್ರವಾಸಿ ವೀಸಾ ಹೊಂದಿರುವವರನ್ನು ತಕ್ಷಣವೇ ಹೊರಗೆ ಕಳುಹಿಸಲು ಸೂಚನೆ ಇದೆ. ಅದರ ಪ್ರಕಾರ ಕ್ರಮ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಪಾಕಿಸ್ತಾನ ದೇಶದೊಂದಿಗೆ ಯುದ್ಧ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಶಾಂತಿ ದೃಷ್ಟಿಕೋನದಿಂದ ಸಿದ್ದರಾಮಯ್ಯ ಹಾಗೆ ಹೇಳಿದ್ದಾರೆ. ಭಾರತ ಎಂದೂ ಶಾಂತಿಯನ್ನು ನಂಬಿಕೊಂಡಿದೆ. ಭಾರತ ಯಾವಾಗಲೂ ಏಕಾಏಕಿ ಯುದ್ಧ ಮಾಡಲು ಹೋಗಿಲ್ಲ.
ಆದರೆ ನಮ್ಮನ್ನು ಕೆಣಕಿದಾಗ ಪ್ರತಿಕ್ರಿಯೆ ಕೊಡಲಾಗಿದೆ. ಈ ಅರ್ಥದಲ್ಲಿ ಮುಖ್ಯಮಂತ್ರಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನು ನಮ್ಮ ದೌರ್ಬಲ್ಯ ಎಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ ಎಂದು ಸಮರ್ಥಿಸಿದರು. ರಾಜ್ಯ ಪೊಲೀಸರಿಗೆ ವಾರದ ರಜೆ ಮತ್ತು ಅದಕ್ಕೆ ಸರಿಯಾದ ವೇತನ ನೀಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಈ ವಿಷಯ ಪರಿಶೀಲಿಸಲಾಗುವುದು. ತಕ್ಷಣವೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ಚರ್ಚೆಯಾಗಬೇಕು. ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ನೋಡಬೇಕು ಎಂದರು.
ಪಾಕಿಸ್ತಾನ ಪ್ರಜೆಗಳ ವಾಪಸ್ ಕಳುಹಿಸಿ: ಗೃಹ ಸಚಿವ ಪರಮೇಶ್ವರ್
ಬಿಜೆಪಿ ಬೆಂಬಲಿಗ, ಕೊಡಗಿನ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ಆರೋಪಿಯನ್ನು ಇನ್ನೂ ಬಂಧಿಸದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ತನಿಖೆ ನಡೆಯುತ್ತಿದೆ. ತನಿಖೆ ಸಂಪೂರ್ಣಗೊಂಡ ಬಳಿಕ ಉತ್ತರ ಸಿಗುತ್ತದೆ ಎಂದು ಹೇಳಿದರು. ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಆರೋಪಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಆದರೂ ಬಂಧಿಸಿಲ್ಲ ಎನ್ನುವ ವಿಚಾರದಲ್ಲಿ ಸೂಕ್ತ ಉತ್ತರ ನೀಡದ ಸಚಿವ ಪರಮೇಶ್ವರ್, ತನಿಖೆ ನಡೆಯುತ್ತಿದೆ ಬಳಿಕ ಉತ್ತರ ಸಿಗುತ್ತದೆ ಎಂದಷ್ಟೇ ಹೇಳಿದರು. ಕರೆದು ವಿಚಾರಣೆಯನ್ನಾದರೂ ಮಾಡಬಹುದಲ್ಲ ಎಂದಾಗ, ನೀವು ನಾವು ಹೇಳಿದಂತೆ ಮಾಡಲ್ಲ. ಒಂದು ನಿಯಮ ಇರುತ್ತದೆ, ಅದರಂತೆ ವಿಚಾರಣೆ, ತನಿಖೆ ನಡೆಯುತ್ತದೆ. ಪೊಲೀಸರು ಅದರಂತೆ ಮಾಡುತ್ತಾರೆ ಎಂದು ಹೇಳಿದರು.
