ಧಾರವಾಡದ ಕಮಲಾಪುರ ಶಾಲೆಯ ಇಬ್ಬರು ಮಕ್ಕಳನ್ನು ಅಪಹರಿಸಿದ್ದ ಪ್ರಕರಣವು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಸುಖಾಂತ್ಯ ಕಂಡಿದೆ. ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ಆರೋಪಿ ಅಪಘಾತಕ್ಕೀಡಾದಾಗ, ಜೋಯಿಡಾ ಪೊಲೀಸರ ಸಮಯಪ್ರಜ್ಞೆಯಿಂದ ಮಕ್ಕಳು ಸುರಕ್ಷಿತವಾಗಿ ಪೋಷಕರನ್ನು ಸೇರಿದ್ದಾರೆ.
ಕಾರವಾರ(ಜ.12): ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಧಾರವಾಡದ ಕಮಲಾಪುರ ಶಾಲಾ ಮಕ್ಕಳ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಅಪಹರಣಕ್ಕೊಳಗಾಗಿದ್ದ ಇಬ್ಬರು ಪುಟಾಣಿಗಳು ಸುರಕ್ಷಿತವಾಗಿ ಪೋಷಕರ ಕೈ ಸೇರಿದ್ದಾರೆ.
ಅಪಘಾತದಿಂದ ಸಿಕ್ಕಿಬಿದ್ದ ಮಕ್ಕಳ ಕಳ್ಳ
ಮಕ್ಕಳನ್ನು ಅಪಹರಿಸಿದ್ದ ಆರೋಪಿಯನ್ನು ಹುಬ್ಬಳ್ಳಿ ಮೂಲದ ಮಹ್ಮದ್ ಕರೀಂ ಮೇಸ್ತ್ರಿ (49) ಎಂದು ಗುರುತಿಸಲಾಗಿದೆ. ಈತ ಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಅತೀ ವೇಗವಾಗಿ ಪರಾರಿಯಾಗುತ್ತಿದ್ದಾಗ ಜೋಯಿಡಾ ಬಳಿ ಬೈಕ್ ಅಪಘಾತಕ್ಕೀಡಾಗಿದೆ. ಈ ವೇಳೆ 8 ಮತ್ತು 9 ವರ್ಷದ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅಪಘಾತದಲ್ಲಿ ಆರೋಪಿಯ ತಲೆಗೆ ಬಲವಾದ ಪೆಟ್ಟಾಗಿದ್ದು, ಸದ್ಯ ಪೊಲೀಸರ ಸುಪರ್ದಿಯಲ್ಲಿ ಜೋಯಿಡಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
'ಬರುತ್ತೇವೆ ಅಂದರು, ಕರೆದುಕೊಂಡು ಹೋದೆ': ಆರೋಪಿಯ ವಿಚಿತ್ರ ಸಬೂಬು
ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿ ಕರೀಂ ವಿಚಿತ್ರ ಹೇಳಿಕೆ ನೀಡಿದ್ದಾನೆ. 'ಮಕ್ಕಳು ನನ್ನ ಜೊತೆ ಬರುತ್ತೇವೆ ಎಂದರು, ಅದಕ್ಕೆ ಕರೆದುಕೊಂಡು ಹೋದೆ' ಎಂದು ಸಬೂಬು ನೀಡುವ ಮೂಲಕ ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆ. ಮಧ್ಯಾಹ್ನ ಶಾಲೆಯ ಊಟದ ಸಮಯದಲ್ಲಿ ಪುಟಾಣಿಗಳನ್ನು ಪುಸಲಾಯಿಸಿ, ಅವರಿಗೆ ಆಮಿಷ ಒಡ್ಡಿ ಅಪಹರಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಹಿಂದೂ-ಮುಸ್ಲಿಂ ಮಕ್ಕಳನ್ನೇ ಟಾರ್ಗೆಟ್ ಮಾಡಿದ್ದೇಗೆ?
ಬಂಧಿತ ಆರೋಪಿ ಕರೀಂ, ಹಿಂದೂ ಸಮುದಾಯದ ಒಬ್ಬ ಬಾಲಕಿ ಮತ್ತು ಮುಸ್ಲಿಂ ಸಮುದಾಯದ ಒಬ್ಬ ಬಾಲಕನನ್ನು ಕರೆದೊಯ್ದಿದ್ದನು. ಈ ಇಬ್ಬರು ಮಕ್ಕಳನ್ನು ಅಪಹರಿಸಲು ಆತನ ಉದ್ದೇಶವೇನಿತ್ತು? ಮಕ್ಕಳನ್ನು ಎಲ್ಲಿಗೆ ಸಾಗಿಸುತ್ತಿದ್ದ? ಇದರ ಹಿಂದೆ ಯಾವುದಾದರೂ ಮಾನವ ಸಾಗಣೆ ಜಾಲವಿದೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿ ಇನ್ನೂ ಕೃತ್ಯದ ಅಸಲಿ ಕಾರಣವನ್ನು ಬಾಯಿಬಿಟ್ಟಿಲ್ಲ.
ಮಕ್ಕಳನ್ನು ತಬ್ಬಿ ಕಣ್ಣೀರಿಟ್ಟ ಪೋಷಕರು
ವಿಷಯ ತಿಳಿಯುತ್ತಿದ್ದಂತೆಯೇ ಜೋಯಿಡಾಕ್ಕೆ ದೌಡಾಯಿಸಿದ ಪೋಷಕರು, ತಮ್ಮ ಮಕ್ಕಳನ್ನು ಕಂಡು ಕಣ್ಣೀರಿಟ್ಟರು. ಉತ್ತರ ಕನ್ನಡ ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ ಪೋಷಕರು ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ. ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಚೇತರಿಸಿಕೊಂಡ ನಂತರ ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.


