Delhi Police stop burial: ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆಗಳೂ ನಡೆದಿದ್ದವು, ಇನ್ನೇನು ಶವವನ್ನು ದಫನ್ ಮಾಡಬೇಕು ಎನ್ನುವಷ್ಟರಲ್ಲಿ ಪೊಲೀಸರು ಎಂಟ್ರಿ ಕೊಟ್ಟರು! ಒಂದು ಫೋನ್ ಕರೆಯಿಂದ ಬಯಲಾದ ಈ ಯುವತಿಯ ಸಾವಿನ ಹಿಂದಿನ ಕರಾಳ ರಹಸ್ಯವೇನು? ಇಲ್ಲಿದೆ ಈ ಘಟನೆಯ ಸಂಪೂರ್ಣ ವಿವರ. 

ದೇಶದ ರಾಜಧಾನಿ ದೆಹಲಿಯ ಹರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ 19 ವರ್ಷದ ಯುವತಿಯೊಬ್ಬಳನ್ನು ಆಕೆಯ ಸ್ವಂತ ಕುಟುಂಬದವರೇ ಕೊಲೆ ಮಾಡಿ, ಯಾರಿಗೂ ತಿಳಿಯದಂತೆ ಗುಟ್ಟಾಗಿ ಹೂಳಲು ತಯಾರಿ ನಡೆಸುತ್ತಿದ್ದಾಗ ಪೊಲೀಸರು ಸಕಾಲದಲ್ಲಿ ತಲುಪಿ ಶವವನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯು ಇಡೀ ದೆಹಲಿಯನ್ನೇ ದಿಗ್ಭ್ರಮೆಗೊಳಿಸಿದೆ.

Add Asianetnews Kannada as a Preferred SourcegooglePreferred

ಘಟನೆಯ ಹಿನ್ನೆಲೆ

ಕಳೆದ ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಹರಿ ನಗರ ಪೊಲೀಸ್ ಠಾಣೆಗೆ ಅಪರಿಚಿತ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು. ಆ ಕರೆಯಲ್ಲಿ "ಕುಟುಂಬವೊಂದು ಯುವತಿಯನ್ನು ಕೊಲೆ ಮಾಡಿದೆ ಮತ್ತು ಅವಸರವಸರವಾಗಿ ಶವವನ್ನು ದಫನ್ ಮಾಡಲು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ" ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿತ್ತು. ವಿಷಯದ ಗಂಭೀರತೆಯನ್ನು ಅರಿತ ಪಶ್ಚಿಮ ದೆಹಲಿಯ ಡಿಸಿಪಿ ಶರದ್ ಭಾಸ್ಕರ್ ನೇತೃತ್ವದ ಪೊಲೀಸ್ ತಂಡವು ಕೂಡಲೇ ಸ್ಮಶಾನಕ್ಕೆ ಧಾವಿಸಿ, ಅಂತ್ಯಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿತು. ಪೊಲೀಸರು ಶವವನ್ನು ವಶಕ್ಕೆ ಪಡೆದು ದೀನ್ ದಯಾಳ್ ಉಪಾಧ್ಯಾಯ (DDU) ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಪೋಸ್ಟ್ ಮಾರ್ಟಮ್ ವರದಿ ನೋಡಿ ಶಾಕ್

ವೈದ್ಯಕೀಯ ವರದಿ ಬಂದಾಗ ಪೊಲೀಸರು ಕೂಡ ದಂಗಾದರು. ಆಕೆ ಯಾವುದೇ ಕಾಯಿಲೆಯಿಂದ ಅಥವಾ ನೈಸರ್ಗಿಕವಾಗಿ ಮೃತಪಟ್ಟಿರಲಿಲ್ಲ. ಬದಲಿಗೆ ಆಕೆಯ ಕುತ್ತಿಗೆ ಹಿಸುಕಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿತ್ತು ಎಂಬ ಕಹಿ ಸತ್ಯ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು. ಕುಟುಂಬದವರು ಹೇಳುತ್ತಿದ್ದ ಸುಳ್ಳು ಕಥೆಗಳು ಅಲ್ಲಿಗೆ ಅಂತ್ಯವಾದವು.

ನೆರೆಹೊರೆಯವರು ಬಿಚ್ಚಿಟ್ಟ ಕರಾಳ ಸತ್ಯ
ಸ್ಥಳೀಯರ ಹೇಳಿಕೆಯ ಪ್ರಕಾರ, ಈ ಯುವತಿಯನ್ನು ಕಳೆದ ನಾಲ್ಕು ದಿನಗಳಿಂದ ಮನೆಯೊಳಗೆ ಕೂಡಿಹಾಕಲಾಗಿತ್ತು. ಆಕೆಯನ್ನು ಅತ್ಯಂತ ಅಮಾನವೀಯವಾಗಿ ಥಳಿಸಲಾಗುತ್ತಿತ್ತು. ಮನೆಯ ಮುಂದೆ ಯಾರಾದರೂ ಹೋದಾಗಲೆಲ್ಲಾ ಆಕೆ "ಬಾಗಿಲು ತೆರೆಯಿರಿ, ನನ್ನನ್ನು ಬದುಕಿಸಿ" ಎಂದು ಅಳುತ್ತಾ ಬೇಡಿಕೊಳ್ಳುತ್ತಿದ್ದಳು. ಆದರೆ ಮನೆಯವರು ಹೊರಗಿನಿಂದ ದೊಡ್ಡ ಬೀಗ ಹಾಕಿ ಕೆಲಸಕ್ಕೆ ಹೋಗುತ್ತಿದ್ದರು. ಆಕೆ ಮೃತಪಟ್ಟ ನಂತರ ಆಕೆಯ ತಾಯಿ ನೆರೆಹೊರೆಯವರಿಗೆ, "ಮಗಳಿಗೆ ಕ್ಯಾನ್ಸರ್, ಕಾಮಾಲೆ ಮತ್ತು ಕಿಡ್ನಿ ವೈಫಲ್ಯವಿತ್ತು" ಎಂದು ಸುಳ್ಳು ಕಥೆ ಕಟ್ಟಿದ್ದರು. ಆದರೆ ಯುವತಿ ನೋಡುವುದಕ್ಕೆ ಆರೋಗ್ಯವಾಗಿಯೇ ಇದ್ದುದರಿಂದ ಸ್ಥಳೀಯರಿಗೆ ಈ ಸಾವಿನ ಬಗ್ಗೆ ಮೊದಲೇ ಅನುಮಾನ ಬಂದಿತ್ತು.

ಮರ್ಯಾದಾ ಹತ್ಯೆ ಎಂಬ ಬಲವಾದ ಶಂಕೆ
ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವಂತೆ, ಈ ಯುವತಿಯು ತನ್ನ ಸಂಬಂಧಿಕರೊಬ್ಬರ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಷಯವು ಕುಟುಂಬದ ಗೌರವಕ್ಕೆ ಧಕ್ಕೆ ತರುತ್ತದೆ ಎಂಬ ಹಳೆಯ ಕಾಲದ ಮನಸ್ಥಿತಿಯಿಂದ ಆಕೆಯನ್ನು ಮರ್ಯಾದಾ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ. ಪ್ರೀತಿಗಾಗಿ ಸ್ವಂತ ಮಗಳನ್ನೇ ಬಲಿ ಕೊಟ್ಟಿರುವ ಸಾಧ್ಯತೆ ದಟ್ಟವಾಗಿದೆ.

ಅಪರಿಚಿತ ವ್ಯಕ್ತಿಗಾಗಿ ಹುಡುಕಾಟ
ಈ ಕುಟುಂಬವು ಒಂದು ವರ್ಷದ ಹಿಂದೆಯಷ್ಟೇ ಬಿಹಾರದಿಂದ ದೆಹಲಿಗೆ ವಲಸೆ ಬಂದಿತ್ತು. ತಂದೆ ಮತ್ತು ಸಹೋದರ ತರಕಾರಿ ಮಾರುತ್ತಿದ್ದರು. ಸದ್ಯ ಪೊಲೀಸರು ತಂದೆ, ತಾಯಿ ಸೇರಿದಂತೆ ನಾಲ್ವರು ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹರಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಹಿಂದೆ ಇನ್ನೂ ಯಾರ ಕೈವಾಡವಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಪೊಲೀಸರಿಗೆ ಮೊದಲೇ ಮಾಹಿತಿ ನೀಡಿ ಕೊಲೆಯನ್ನು ಪತ್ತೆಹಚ್ಚಲು ಕಾರಣವಾದ ಆ ಅಪರಿಚಿತ ವ್ಯಕ್ತಿಗಾಗಿ ಹುಡುಕಾಟ ಮುಂದುವರಿದಿದೆ.