ಒಂದೇ ಕುಟುಂಬದ 7 ಜನರನ್ನು ಹತ್ಯೆ ಮಾಡಿದ ಆರೋಪಿ ಇಂದುಶೇಖರ್ನ ಸಹೋದರ ರಮೇಶ್ ಕೂಡ ರೌಡಿಶೀಟರ್ ಆಗಿದ್ದನು. ಆಸ್ತಿಗಾಗಿ ನಕಲಿ ದಾಖಲೆ ಸೃಷ್ಟಿಸಿ ಡಬಲ್ ಮರ್ಡರ್ ಮಾಡಿದ್ದ ರಮೇಶ್ ಜೈಲಿನಲ್ಲೇ ಮೃತಪಟ್ಟಿದ್ದನು. ಇದೀಗ ಅಣ್ಣನನ್ನೇ ಮೀರಿಸುವಂತೆ ತಮ್ಮ ಭೀಕರ ಕೃತ್ಯವೆಸಗಿದ್ದಾನೆ.
ಬೆಂಗಳೂರು: ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್ನ ಸಹೋದರ ಸಹ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಡಬಲ್ ಮರ್ಡರ್ ಪ್ರಕರಣದಲ್ಲಿ ಜೈಲು ಸೇರಿ ಅಲ್ಲಿಯೇ ಮೃತಪಟ್ಟಿರುವ ವಿಷಯ ಪೊಲೀಸರ ತನಿಖೆಯ ವೇಳೆ ಬಯಲಾಗಿದೆ.
ರುಬ್ಬುಗುಂಡಿನಿಂದ 7 ಮಂದಿ ಹತ್ಯೆ ಕೇಸ್
ಆರೋಪಿ ಇಂದುಶೇಖರ್ ಬಿಳೇಕಾಹಳ್ಳಿಯ ರೌಡಿಶೀಟರ್ ಆಗಿದ್ದ ಬಿಳೇಕಾಹೂರು ರಮೇಶನ ಸಹೋದರ ಎಂದು ತಿಳಿದುಬಂದಿದೆ. 8 ವರ್ಷಗಳ ಹಿಂದೆ ಅವರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಸ್ತಿಗಾಗಿ ರಮೇಶ್ ಡಬಲ್ ಮರ್ಡರ್ ಮಾಡಿದ್ದನು. 15 ಕೋಟಿ ರೂ. ಮೌಲ್ಯದ ಸುಮಾರು 1.8 ಎಕರೆ ಜಾಗಕ್ಕಾಗಿ ರಮೇಶ್ ಇಬ್ಬರನ್ನು ಸಿಹಿಮೀಯು ಶೈಲಿಯಲ್ಲಿ ಹತ್ಯೆ ಮಾಡಿದ್ದ.
ಜೋಡಿ ಕೊಲೆ ಮಾಡಿದ್ದ ಕಿಲ್ಲರ್ ಅಣ್ಣನ ಮಾಹಿತಿ ಬೆಳಕಿಗೆ
ಬೆಂಗಳೂರಿನ ಬಿಳೇಕಾಹೂರು ಸಮೀಪ ಜಾಗ ಹೊಂದಿದ್ದ ನಂಜಪ್ಪ ಎಂಬುವರು ವಯೋಸಹಜವಾಗಿ ಮೃತಪಟ್ಟಿದ್ದರು. ಅವರ ಮರಣದ ನಂತರ ಅನಾಥವಾಗಿದ್ದ ಕೋಟ್ಯಂತರ ರೂ. ಮೌಲ್ಯದ ಜಾಗದ ಮೇಲೆ ರಮೇಶ್ ಕಣ್ಣುಹಾಕಿದ್ದ. ಇದಕ್ಕಾಗಿ ವೆಂಕಟರಮಣ ಎಂಬುವನನ್ನು ಕರೆತಂದು ನಂಜಪ್ಪ ಎಂದು ಬಿಂಬಿಸಿದ್ದ, ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಿಲ್ ಬರೆಸಿಕೊಂಡಿದ್ದ. ನಂತರ ಕೃಷ್ಣಪ್ಪ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಕರೆತಂದಿದ್ದ, ಆತನನ್ನು ಕೂಡ ನಂಜಪ್ಪನಾಗಿ ಬಿಂಬಿಸಿದ್ದ ಆತನಿಗೆ ಭೇದಿ ಮಾತ್ರೆ ನೀಡಿ ಬಳಿಕ ಕೊಲೆ ಮಾಡಿದ್ದ. ಕೃಷ್ಣಪ್ಪ ಸತ್ತ ನಂತರ ನಂಜಪ್ಪ ಹೆಸರಿನಲ್ಲಿ ನಕಲಿ ಮರಣಪ್ರಮಾಣ ಪತ್ರ ಮಾಡಿಸಿದ್ದ ಎನ್ನಲಾಗಿದೆ.
ಜೈಲಲ್ಲೇ ಮೃತಪಟ್ಟಿದ್ದ ರಮೇಶ್
ಕೊಲೆ ಮಾಡಿದ ಸಂದರ್ಭದಲ್ಲಿ ರಮೇಶ್ ಜೊತೆಗಿದ್ದ ಆತನ ತೋಟದ ಸೆಕ್ಯುರಿಟಿ ವೆಂಕಟಸ್ವಾಮಿ ಈ ವಿಚಾರವನ್ನು ತನ್ನ ಪತ್ನಿ ಸುಧಾರಾಣಿಗೆ ಹೇಳಿದ್ದ. ಆ ಕೊಲೆಯನ್ನು ಸುಧಾರಾಣಿ ವಿರೋಧಿಸಿದ್ದ ಕಾರಣ ಆಕೆಗೆ ಬೆಂಕಿಹಚ್ಚಿ ಮನೆಯಲ್ಲೇ ಕೊಲೆ ಮಾಡಲಾಗಿತ್ತು. ಬಳಿಕ ಘಟನೆಯನ್ನು ಆಕಸ್ಮಿಕ ಎಂದು ಬಿಂಬಿಸಲಾಗಿತ್ತು. ಆದರೆ ತನಿಖೆಯಲ್ಲಿ ಸುಧಾರಾಣಿ ಅವರದ್ದು ಕೊಲೆ ಎಂದು ಪತ್ತೆಯಾಗಿತ್ತು. ನಂತರ ಬಿಳೇಕಾಹೂರು ರಮೇಶ್ ಮತ್ತು ವೆಂಕಟಸ್ವಾಮಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. 3 ವರ್ಷ ಜೈಲಿನಲ್ಲಿದ್ದ ರಮೇಶ್ 2021ರಲ್ಲಿ ಜೈಲಿನಲ್ಲೇ ಸಾವಿಗೀಡಾಗಿದ್ದ.
ವರ್ತೂರು ಭಾಗದಲ್ಲಿ ಭೂಮಾಫಿಯಾವನ್ನು ಕೂಡ ರಮೇಶ್ ನಡೆಸಿದ್ದ. ನಕಲಿ ದಾಖಲೆ ಸೃಷ್ಟಿ, ಧಮ್ಕಿ ಸೇರಿ ಹಲವು ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆ ರಮೇಶ್ ವಿರುದ್ಧ ರೌಡಿಶೀಟರ್ ಕೂಡ ಓಪನ್ ಆಗಿತ್ತು. ಈಗ ಸಹೋದರನಂತೆಯೇ ಇಂದುಶೇಖರ್ ಕೂಡ ಅಂತಹದ್ದೇ ಕೃತ್ಯ ಎಸಗಿದ್ದಾನೆ. ಕೊಲೆ ಮಾಡುವುದರಲ್ಲಿ ಅಣ್ಣನನ್ನೇ ಮೀರಿಸಿದ್ದಾನೆ.














