ದೇಶದ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ಅಡಿಕೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದ್ದು, ಬೆಲೆಯೂ ಹೆಚ್ಚಿದೆ. ಈ ಹಿನ್ನೆಲೆ ಅಡಿಕೆಯನ್ನುಕಳ್ಳತನ ಮಾಡುವ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ಇಂತದ್ದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆ ಮಾತನ್ನು ನೀವು ಕೇಳಿರಬಹುದು. ಉತ್ತರ ಪ್ರದೇಶದ ಈ ಆರೋಪಿಗಳಿಗೂ ಇಂತದ್ದೇ ಪರಿಸ್ಥಿತಿ ಬಂದಿದೆ ನೋಡಿ. ಅಡಿಕೆ ಕಳ್ಳತನ ಮಾಡಿದ ಆರೋಪ ಹಿನ್ನೆಲೆ ದೆಹಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ರಾಷ್ಟ್ರ ರಾಜಧಾನಿಯ ಪೊಲೀಸರು ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಉತ್ತರ ದೆಹಲಿಯ ಅಲಿಪುರ ಪ್ರದೇಶದ ಗೋಡೌನ್‌ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಅಡಿಕೆಯನ್ನು ಕಳ್ಳತನ ಮಾಡಿದ ಆರೋಪ ಸಂಬಂಧ ದೆಹಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳು ಉತ್ತರ ಪ್ರದೇಶದವರು ಎಂದು ತಿಳಿದುಬಂದಿದ್ದು, ಈ ಪೈಕಿ ಜೈವೀರ್‌ ಹಾಗೂ ಸುನೀಲ್‌ ಎಂಬುವವರು ಹರ್ದೋಯಿ ಜಿಲ್ಲೆಯ ನಿವಾಸಿಗಳಾಗಿದ್ದರೆ, ಕೃಷ್ಣ ಕುಮಾರ್‌ ಎಂಬುವವರು ವಾಜಿರ್‌ಪುರ್‌ ಸತ್ಸಂಗ್‌ ಕಾಲೋನಿಯ ನಿವಾಸಿ ಎಂದು ತಿಳಿದುಬಂದಿದೆ. ಜುಲೈ 16 ರ ರಾತ್ರಿ ಗನ್‌ ತೋರಿಸಿ ಬೆದರಿಕೆ ಹಾಕಿ ದೆಹಲಿಯ ಅಲಿಪುರ ಪ್ರದೇಶದ ಗೋಡೌನ್‌ನಿಂದ ಮೂವರು ಅಡಿಕೆ ಕಳ್ಳತನ ಮಾಡಿದ್ದರು ಎನ್ನಲಾಗಿದೆ.

Chitradurga: ಫಸಲಿಗೆ ಬಂದಿದ್ದ 200 ಅಡಿಕೆ ಮರಗಳನ್ನು ಕಡಿದ ದುಷ್ಕರ್ಮಿಗಳು!

ಟ್ರಕ್‌ವೊಂದಕ್ಕೆ 130 ಚೀಲಗಳ ಅಡಿಕೆಯನ್ನು ಗೋಡೌನ್‌ನ ಸಿಬ್ಬಂದಿ ಕೈಯಲ್ಲೇ ಲೋಡ್‌ ಮಾಡಿಸಿದ ಆರೋಪಿಗಳು, ಅದರ ಜತೆಗೆ 1 ಲಕ್ಷ 40 ಸಾವಿರ ರೂ. ನಗದನ್ನು ಸಹ ದರೋಡೆ ಮಾಡಿ ಹೋಗಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನು, ಆರೋಪಿಗಳು ರೋಹಿಣಿ ಪ್ರದೇಶಕ್ಕೆ ಬಂದು ವ್ಯಕ್ತಿಯೊಬ್ಬರನ್ನು ಭೇಟಿ ಮಾಡುತ್ತಾರೆ ಎಂದು ದೆಹಲಿ ಪೊಲೀಸರಿಗೆ ಶುಕ್ರವಾರ ಮಾಹಿತಿ ತಿಳಿದುಬಂದಿತ್ತು. ನಂತರ, ಆ ಪ್ರದೇಶದಲ್ಲಿ ಆರೋಪಿಗಳನ್ನು ಪೊಲೀಸರು ಸುತ್ತುವರೆದಿದ್ದರು ಎಂದು ಡಿಸಿಪಿ ಅಪರಾಧ ವಿಭಾಗದ ವಿಚಿತ್ರ ವೀರ್‌ ತಿಳಿಸಿದ್ದಾರೆ. 

ಅಲಿಪುರದ ಇಂಡಸ್ಟ್ರಿಯಲ್‌ ಪ್ರದೇಶದಲ್ಲಿ ಹಾಗೂ ದೆಹಲಿಯ ಸ್ಲಂ ಪ್ರದೇಶದಲ್ಲಿ ಕಾರ್ಮಿಕರು ಅಥವಾ ಇ - ಆಟೋರಿಕ್ಷಾ ಚಾಲಕರಾಗಿ ಈ ಮೂವರು ಆರೋಪಿಗಳು ಕೆಲಸ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇನ್ನು, ಶಸ್ತ್ರಾಸ್ತ್ರವನ್ನು ದರೋಡೆ ಮಾಡಲು ಯತ್ನಿಸಿದ ಆರೋಪದ ಮೇಲೆ ಓರ್ವ ಆರೋಪಿ ಜೈವೀರ್‌ನನ್ನು ಈ ಹಿಂದೆಯೂ ಬಂಧಿಸಲಾಗಿತ್ತು ಹಾಗೂ ಆತನಿಗೆ 7 ವರ್ಷ ಶಿಕ್ಷೆಯೂ ಆಗಿದೆ. ಕೆಲವು ತಿಂಗಳ ಹಿಂದಷ್ಟೇ ಆತ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 

ಜೈಲಿನಿಂದ ಹೊರಬಂದ ಬಳಿಕ ಆತ ಅಡಿಕೆಯ ಗೋಡೌನ್‌ವೊಂದನ್ನು ದರೋಡೆ ಮಾಡಲು ಪ್ರಯತ್ನಿಸಿದ್ದ ಹಾಗೂ ಈ ಕೃತ್ಯಕ್ಕೆ ಇತರೆ ಸಹಾಯಕರನ್ನು ನೇಮಿಸಿಕೊಂಡಿದ್ದ ಎಂದೂ ಹೇಳಲಾಗಿದೆ. ಹಾಗೂ, ಗೋಡೌನ್‌ಗಳ ಬಗ್ಗೆ ಇತರೆ ಕ್ರಿಮಿನಲ್‌ಗಳು ಆರೋಪಿಗೆ ಮಾಹಿತಿ ನೀಡಿದ್ದರು. ಬಳಿಕ, ಯಾವ ಗೋಡೌನ್‌ ಅನ್ನು ಕಳ್ಳತನ ಮಾಡುವುದು ಎಂಬುದನ್ನು ಅಂತಿಮಗೊಳಿಸಿದ ಬಳಿಕ ಶಸ್ತ್ರಾಸ್ತ್ರಗಳು ಹಾಗೂ ಟ್ರಕ್‌ವೊಂದನ್ನು ವ್ಯವಸ್ಥೆ ಮಾಡಿಕೊಂಡಿದ್ದರು ಎಂದೂ ದೆಹಲಿ ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಭಾರತದ ಸಂಸದರ ನೇತೃತ್ವದಲ್ಲಿ ಅಡಿಕೆಗೆ ಉತ್ತಮ ಬೆಲೆ ಉಳಿಸುವ ಕಾರ್ಯ: ಬಿ.ವೈ. ರಾಘವೇಂದ್ರ

ಅಲ್ಲದೆ, ಗನ್‌ಗಳ ಮೂಲಕ ಗೋಡೌನ್‌ನಲ್ಲಿದ್ದ ಕಾರ್ಮಿಕರನ್ನು ಬೆದರಿಸಿದ ಆರೋಪಿಗಳು ಅವರ ಬಳಿಯಿದ್ದ ಮೊಬೈಲ್‌ ಫೋನ್‌ಗಳು ಹಾಗೂ ನಗದು ಹಣವನ್ನು ವಶಕ್ಕೆ ಪಡೆದಿದ್ದರು. ನಂತರ ಅವರು ಅಡಿಕೆ ಕದ್ದು ಓಡಿ ಹೋಗುವ ಮುನ್ನ ಆ ಕಾರ್ಮಿಕರನ್ನು ರೂಂವೊಂದರಲ್ಲಿ ಕೂಡಿ ಹಾಕಿದ್ದರು. ಈ ಸಂಬಂಧ ತನಿಖೆ ಮುಂದುವರಿದಿದ್ದು, ಇತರೆ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದೂ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಅಡಿಕೆಯ ಬೆಲೆ ಇತ್ತೀಚಿನ ಕೆಲ ವರ್ಷಗಳಿಂದ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಅಡಿಕೆ ಕಳ್ಳತನದ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತದೆ.