ಇತ್ತೀಚಿನ ದಿನಗಳಲ್ಲಿ ಇಡೀ ರಾಜ್ಯವನ್ನೇ ಅತಿ ವೇಗವಾಗಿ ಆಕ್ರಮಿಸುತ್ತಿರೋ ವಾಣಿಜ್ಯ ಬೆಳೆ ಅಂದ್ರೆ ಅದು ಅಡಿಕೆ. ಮಲೆನಾಡಿನಿಂದ ಹಿಡಿದು ಬಯಲುಸೀಮೆವರೆಗೂ ಅಡಿಕೆ ಬೆಳೆದವರೇ ಕಿಂಗ್. ಹೀಗಾಗಿ ಇದನ್ನು ಸಹಿಸಲಾಗದ ಕಿಡಿಗೇಡಿಗಳು ಅಡಿಕೆ ಮರಗಳನ್ನು ಕತ್ತರಿಸಿ ಅಮಾನವೀಯತೆ ಮೆರೆದಿದ್ದಾರೆ. 

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜೂ.06): ಇತ್ತೀಚಿನ ದಿನಗಳಲ್ಲಿ ಇಡೀ ರಾಜ್ಯವನ್ನೇ ಅತಿ ವೇಗವಾಗಿ ಆಕ್ರಮಿಸುತ್ತಿರೋ ವಾಣಿಜ್ಯ ಬೆಳೆ ಅಂದ್ರೆ ಅದು ಅಡಿಕೆ. ಮಲೆನಾಡಿನಿಂದ ಹಿಡಿದು ಬಯಲುಸೀಮೆವರೆಗೂ ಅಡಿಕೆ ಬೆಳೆದವರೇ ಕಿಂಗ್. ಹೀಗಾಗಿ ಇದನ್ನು ಸಹಿಸಲಾಗದ ಕಿಡಿಗೇಡಿಗಳು ಅಡಿಕೆ ಮರಗಳನ್ನು ಕತ್ತರಿಸಿ ಅಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ. ರಾಜ್ಯದ ಯಾವ ಮೂಲೆಯಲ್ಲಿ ನೋಡಿದ್ರು ರೈತ ಅಡಿಕೆ ಬೆಳೆಯ ಮೇಲೆ ಅತಿ ಹೆಚ್ಚು ಅವಲಂಬಿತನಾಗಿದ್ದಾನೆ. ಒಂದ್ ಆರು ವರ್ಷ ಕಷ್ಟ ಪಟ್ಟು ಅಡಿಕೆ ಬೆಳೆದ್ರೆ ಸಾಕಪ್ಪ, ಮುಂದೆ ಹತ್ತಾರು ವರ್ಷ ನೆಮ್ಮದಿಯಾಗಿ ಬದುಕುಬಹುದಲ್ಲ ಎಂಬ ಆಲೋಚನೆ ರೈತನದ್ದು. 

ಸದ್ಯ ರಾಜ್ಯವನ್ನು ಶರವೇಗದಲ್ಲಿ ಪಸರಿಸುತ್ತಿರೋ ಶ್ರೀಮಂತ ವಾಣಿಜ್ಯ ಬೆಳೆ ಯಾವುದಾದ್ರು ಇದ್ರೆ ಅದು ಅಡಿಕೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಆದ್ರೆ ಇತ್ತೀಚಿಗೆ ದ್ವೇಷಕ್ಕೂ, ಕಳ್ಳತನಕ್ಕೂ ಟಾರ್ಗೆಟ್ ಆಗ್ತಿರೋದು ಅಡಿಕೆಯ ತೋಟ. ಹೌದು ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಕೆನ್ನೆಡಲು ಗ್ರಾಮದ ರೈತ ದಾಸರಗಿರಿಯಪ್ಪಗೆ ಸೇರಿದ ಬರೋಬ್ಬರಿ 200ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಕಡಿದು ಹಾಕಿದ್ದು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಫಸಲಿಗೆ ಬಂದಿದ್ದ ಸುಮಾರು ಒಂದುವರೆ ಎಕರೆ ವಿಸ್ತೀರ್ಣದ ತೋಟವನ್ನೆಲ್ಲಾ ನಾಶಮಾಡಿದ್ದಾರೆ. ಇದರಿಂದಾಗಿ ಮೂರು ಲಕ್ಷಕ್ಕೂ ಅಧಿಕ ಹಣ ನಷ್ಟವಾದಂತಿದೆ. 

Chitradurgaದಲ್ಲಿ ವರುಣನ ಆರ್ಭಟ, ರಾತ್ರಿ ಸುರಿದ ಮಳೆಗೆ ಜನ ಹೈರಾಣ

ಆದ್ರೆ ಈ ಕೃತ್ಯವನ್ನು ಯಾರು ಮಾಡಿರಬಹುದು ಹಾಗೂ ಯಾಕೆ ಮಾಡಿರಬಹುದೆಂಬ ಮಾಹಿತಿ, ರೈತರಿಗೆ ಇಲ್ಲದಿದ್ದರೂ ಸಹ, ಮೇಲ್ನೋಟಕ್ಕೆ ಇವರ ಏಳಿಗೆಯನ್ನು ಸಹಿಸಲಾಗದೇ, ದ್ವೇಷದಿಂದ ಈ ಅಚಾತುರ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಮಕ್ಕಳಂತೆ ಸುಮಾರು 5 ವರ್ಷ ಸಾಕಿ ಸಲುಹಿದ್ದ ಅಡಿಕೆ ಸಸಿಗಳ‌ ನಾಶ‌ ಕಂಡು ಈ ರೈತನ‌ ಕುಟುಂಬ ದುಃಖದಲ್ಲಿ ಮುಳುಗಿದೆ. ಈ ಕೃತ್ಯದಿಂದಾಗಿ ಸುತ್ತಮುತ್ತಲ ಅಡಿಕೆ ಬೆಳೆಗಾರರು ಬೆಚ್ಚಿಬಿದ್ದಿದ್ದಾರೆ. ಸತತ‌ ಐದು ವರ್ಷಗಳ ಕಾಲ‌ ಹೊಟ್ಟೆ ಬಟ್ಟೆ ಕಟ್ಟಿ, ಬಹಳ‌ ನಿರೀಕ್ಷೆಯಿಂದ ನಿಷ್ಟೆಯಿಂದ ಈ ಅಡಿಕೆ‌ ಸಸಿಗಳನ್ನು ಸಾಕಿದ್ರು. ಆದ್ರೆ‌ ಕಿಡಿಗೇಡಿಗಳು ನೀಡಿರೋ ಶಾಕ್‌ನಿಂದ ರೈತರು ಕಂಗಾಲಾಗಿದ್ದಾರೆ. 

ವಿಶ್ವ ಪರಿಸರ ದಿನದಂದೇ ಬೃಹತ್ ಗಾತ್ರದ ಮರಗಳ ಮಾರಣಹೋಮ

ಈ ಅಡಿಕೆ‌ ಬೆಳೆಯಲು ಮಾಡಿದ್ದ ಲಕ್ಷಾಂತರ ರೂಪಾಯಿ ಸಾಲದೊಂದಿಗೆ ಹೆಮ್ಮರವಾಗಿ ಬೆಳೆದಿರೊ ಬಡ್ಡಿ‌ ತೀರಿಸೋದು ಹೇಗೆಂಬ ಆತಂಕದಲ್ಲಿದ್ದು, ಈ ಕೃತ್ಯವೆಸಗಿರೋ ಕಿಡಿಗೇಡಿಗಳನ್ನು ಪತ್ತೆಹಚ್ಚಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಒಟ್ಟಾರೆ ಅಡಿಕೆ ತೋಟ ಮಾಡಿ ಸ್ವಲ್ಪ ವರ್ಷ ಕಷ್ಟ ಪಟ್ರೆ ಶ್ರೀಮಂತಿಕೆಯಿಂದ ನೆಮ್ಮದಿಯಾಗಿರಬಹುದು ಅಂತ ಖುಷಿಯಾಗಿದ್ಧ ರೈತರಿಗೆ ಕಿಡಿಗೇಡಿಗಳಿಂದಾಗಿರೋ ಕೃತ್ಯ ಬೆಚ್ಚಿ ಬೀಳಿಸಿದೆ. ಜಮೀನುಗಳಲ್ಲಿ ಅಡಿಕೆ ಬೆಳೆ ಬೆಳೆಯುವುದಕ್ಕೂ ರೈತರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂಬಂಧಪಟ್ಟ ಪೊಲೀಸ್ ಇಲಾಖೆ ಎಚ್ಚೆತ್ತು ಇಂತಹ ಕೃತ್ಯ ಎಸಗುವ ಖದೀಮರನ್ನು‌ ಬಂಧಿಸಿ, ಮತ್ತೆ ಇಂತಹ ಘಟನೆ ಮರುಕಳಿಸದಂತೆ ಬ್ರೇಕ್ ಹಾಕಬೇಕಿದೆ.