ದಾವಣಗೆರೆಯಲ್ಲಿ, ಆರೋಪಿಯನ್ನು ವಶಕ್ಕೆ ಪಡೆಯಲು ತೆರಳಿದ್ದ ಮಹಿಳಾ ಸಿಪಿಐ ಗಾಯತ್ರಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಅವರ ಪುತ್ರರು ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು, ಓರ್ವ ಆರೋಪಿ ಬಂಧನ.

ದಾವಣಗೆರೆ (ಫೆ. 1): ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ಸಾಕ್ಷಿ ಎಂಬ ಆಘಾತಕಾರಿ ಘಟನೆ ನಡೆದಿದೆ. ಆರೋಪಿಯನ್ನು ವಶಕ್ಕೆ ಪಡೆಯಲು ತೆರಳಿದ ಪೊಲೀಸ್ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಮುಖಂಡನ ರೌಡಿ ಪುತ್ರ ಮತ್ತವನ ಗ್ಯಾಂಗ್ ಅಟ್ಟಹಾಸ ಮೆರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳಾ ಸಿಪಿಐ ಮೇಲೆ ಹಲ್ಲೆ ಯತ್ನ: ವೈರಲ್ ಆಯ್ತು ವಿಡಿಯೋ!

ದಾವಣಗೆರೆ ನಗರದ ಇಮಾಮ್ ನಗರದಲ್ಲಿರುವ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಎಂಬುವವರ ಮನೆಯ ಮುಂದೆ ನಿನ್ನೆ ಈ ಅಮಾನವೀಯ ಘಟನೆ ನಡೆದಿದೆ. ಬಡಾವಣೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗಾಯತ್ರಿ ಅವರು ಕರ್ತವ್ಯದ ಮೇಲೆ ತೆರಳಿದ್ದಾಗ, ಅವರ ಮೇಲೆಯೇ ಹಲ್ಲೆಗೆ ಯತ್ನಿಸಲಾಗಿದೆ. ಇನ್ಸ್‌ಪೆಕ್ಟರ್ ಅವರು 'ಕೈ ಬಿಡಿ.. ಕೈ ಬಿಡಿ..' ಎಂದು ಕಿರುಚಾಡುತ್ತಿದ್ದರೂ ಪುಂಡರು ಕಿಂಚಿತ್ತೂ ಕೇರ್ ಮಾಡದೆ ದರ್ಪ ತೋರಿದ್ದಾರೆ. ಪೊಲೀಸ್ ಪೇದೆ ಹರೀಶ್ ಕೊರಳಪಟ್ಟಿ ಹಿಡಿದಿರುವ ಆತಂಕಕಾರಿ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಕಾಂಗ್ರೆಸ್ ಮುಖಂಡನ ಪುತ್ರನಿಂದ ಹಲ್ಲೆ ಪೇದೆಗಳಿಗೆ ಗಂಭೀರ ಗಾಯ

ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಪುತ್ರರಾದ ಹಸನ್ ಮತ್ತು ಹುಸೇನ್ ಎಂಬುವವರೇ ಈ ಕೃತ್ಯವೆಸಗಿದ ರೌಡಿಗಳು. ಸಿಪಿಐ ಗಾಯತ್ರಿ ಅವರ ಮೊಬೈಲ್ ಕಿತ್ತುಕೊಂಡು ಅಸಭ್ಯವಾಗಿ ವರ್ತಿಸಿದ ಪುಂಡರು, ಜೊತೆಗಿದ್ದ ಪೊಲೀಸ್ ಪೇದೆಗಳ ಮುಖದ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ರೌಡಿಗಳ ಅಟ್ಟಹಾಸಕ್ಕೆ ಪೊಲೀಸ್ ಪೇದೆಗಳು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರಿಂದ ಸ್ವಯಂ ಪ್ರೇರಿತ ದೂರು: ಓರ್ವನ ಬಂಧನ

ಕರ್ತವ್ಯನಿರತ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಾವಣಗೆರೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಹಲ್ಲೆ ನಡೆಸಿದ ಆರೋಪಿಗಳಲ್ಲಿ ಒಬ್ಬನಾದ ಕಾಂಗ್ರೆಸ್ ಮುಖಂಡನ ಪುತ್ರ ಹಸನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಹುಸೇನ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.