ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಪೊಲೀಸ್​ ಜೋಡಿಯೊಂದು ಜನರಿಗೆ ಕೊಡಬೇಕಾಗಿದ್ದ 2 ಕೋಟಿ ರೂಪಾಯಿಗಳನ್ನು ಕದ್ದೊಯ್ದು ಪರಾರಿಯಾಗುವಾಗಲೇ ಸಿಕ್ಕಿಬಿದ್ದ ವಿಚಿತ್ರ ಘಟನೆ ನಡೆದಿದೆ. ಏನಿದು ನೋಡಿ... 

ಸೈಬರ್​ ಕ್ರೈಂ ಪ್ರಕರಣದಲ್ಲಿ ಹಣ ಕಳೆದುಕೊಂಡ ಸಂತ್ರಸ್ತರಿಗೆ ವಾಪಸ್ ಕೊಡಬೇಕಾಗಿದ್ದ 2 ಕೋಟಿ ರೂಪಾಯಿಗಳನ್ನು ನಕಲಿ ದಾಖಲೆ ಬಳಸಿ ಗುಳುಂ ಮಾಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಪೊಲೀಸ್​ ಲವರ್ಸ್​ ಇಬ್ಬರೂ ಈ ಹಣವನ್ನು ಲೂಟಿ ಮಾಡಿ ಹಲವಾರು ಪ್ರದೇಶಗಳಿಗೆ ಸುತ್ತಾಡಿ ಮಜಾ ಮಾಡಿದ್ದಾರೆ. ವೈದ್ಯಕೀಯ ರಜೆ ಪಡೆದು, ಈ ಲವರ್ಸ್​ ಗೋವಾ, ಮನಾಲಿ ಮತ್ತು ಕಾಶ್ಮೀರ ಸೇರಿದಂತೆ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಮಜಾ ಮಾಡಿದ್ದಾರೆ. ಅಂದಹಾಗೆ ಈ ಇಬ್ಬರೂ ಅಧಿಕಾರಿಗಳು ವಿವಾಹಿತರು. ಅರ್ಥಾತ್​ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳಿಗೆ ವಿವಾಹವಾಗಿದ್ದಾರೆ. ಆದರೆ ಅಕ್ರಮ ಸಂಬಂಧ ಹೊಂದಿದ್ದು, ಇಬ್ಬರೂ ಮಜಾ ಮಾಡಲು ಹಣ ಲೂಟಿ ಮಾಡಿದ್ದಾರೆ!

ಅಂದಹಾಗೆ ಈ ಘಟನೆ ನಡೆದಿರುವುದು ದೆಹಲಿಯಲ್ಲಿ. ಸಬ್-ಇನ್‌ಸ್ಪೆಕ್ಟರ್ ಅಂಕುರ್ ಮಲಿಕ್ ಮತ್ತು ಸಬ್-ಇನ್‌ಸ್ಪೆಕ್ಟರ್ ನೇಹಾ ಪುನಿಯಾ ಈ ಆರೋಪ ಮಾಡಿದ್ದು, ಇದೀಗ ಸಿಕ್ಕಿಬಿದ್ದಿದ್ದಾರೆ. ಸೈಬರ್​ ಕ್ರೈಂ ಪ್ರಕರಣದಲ್ಲಿ ಹಲವರು ದುಡ್ಡು ಕಳೆದುಕೊಳ್ಳುತ್ತಾರೆ. ಆನ್​ಲೈನ್​ ಇತ್ಯಾದಿಗಳಿಂದ ವಂಚನೆಗೆ ಒಳಗಾದ ಜನರು ದೂರು ಸಲ್ಲಿಸಿದಾಗ ಸೈಬರ್ ಕ್ರೈಂ ಪೊಲೀಸರು ತನಿಖೆ ಮಾಡಿ ಒಂದಷ್ಟು ಮಂದಿಯ ಹಣವನ್ನು ವಾಪಸ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಅವರು ನೀಡಿದ ದೂರಿನ ಆಧಾರದ ಮೇಲೆ ಹಣವನ್ನು ವಾಪಸ್​ ಮಾಡುವುದು ಈ ಪೊಲೀಸರ ಕರ್ತವ್ಯ. ಆದರೆ ವಶಪಡಿಸಿಕೊಂಡ ಹಣವನ್ನು ಸಂತ್ರಸ್ತರಿಗೆ ಹಿಂದಿರುಗಿಸುವುದರ ಬದಲು, ಈ ಇಬ್ಬರು ಮಹಾನುಭಾವರು 2 ಕೋಟಿ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ.

ಅದು ಹೇಗೆ ಎಂದರೆ, ದೂರು ನೀಡಿದವರ ಹೆಸರನ್ನೇ ಇವರು ತಿರುಚಿದ್ದಾರೆ. ತಮಗೆ ಬೇಕಾದ ಆಪ್ತರ ಹೆಸರಿನಲ್ಲಿ ಬ್ಯಾಂಕ್​ ಖಾತೆ ತೆಗೆದು, ಕೋರ್ಟ್​ಗೂ ಇವರದ್ದೇ ಹೆಸರು ಕೊಟ್ಟು, ಇವರೇ ಸಂತ್ರಸ್ತರು ಎಂದು ಬಿಂಬಿಸಿ, ವಶಪಡಿಸಿಕೊಂಡ ಹಣವನ್ನು ವರ್ಗಾಯಿಸಿದ್ದಾರೆ. ಅಲ್ಲಿಗೆ ಕೋರ್ಟ್​ ದಾಖಲೆಗಳ ಪ್ರಕಾರ ಸಂತ್ರಸ್ತರಿಗೆ ಹಣ ವರ್ಗಾವಣೆ ಆಗಿದೆ ಎಂದೇ ಅರ್ಥ. ಆದರೆ ಅಸಲಿಗೆ ದುಡ್ಡು ವರ್ಗ ಆಗಿದ್ದು, ಅಸಲಿ ಸಂತ್ರಸ್ತರಿಗೆ ಅಲ್ಲ, ಬದಲಿಗೆ ಈ ಸಬ್​ ಇನ್ಸ್​ಪೆಕ್ಟರ್​ ಗೆ ಬೇಕಾದವರ ಖಾತೆಗೆ!

ಇಷ್ಟು ಬೃಹತ್​ ಮೊತ್ತವನ್ನು ಲಪಟಾಯಿಸಿದ ಮೇಲೆ ಸಬ್-ಇನ್‌ಸ್ಪೆಕ್ಟರ್ ಅಂಕುರ್ ಮಲಿಕ್ ಏಳು ದಿನಗಳ ವೈದ್ಯಕೀಯ ರಜೆಗೆ ಹೋಗಿ, ಮತ್ತೆ ಕರ್ತವ್ಯಕ್ಕೆ ಹಾಜರಾಗಿಲ್ಲ. ನೇಹಾ ಪುನಿಯಾ ಕೂಡ ಈ ಪ್ರಕರಣದ ನಂತರ ಕಾಣೆಯಾಗಿದ್ದರು. 2021 ರ ಬ್ಯಾಚ್ ಅಧಿಕಾರಿ ಮಲಿಕ್, ಹಾಗೂ 2021 ರ ಬ್ಯಾಚ್‌ನ ಮತ್ತು ಜಿಟಿಬಿ ಎನ್‌ಕ್ಲೇವ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾದ ನೇಹಾ ಪುನಿಯಾ ಒಂದೇ ಬಾರಿ ನಾಪತ್ತೆಯಾಗಿರುವುದು ತನಿಖೆಯಿಂದ ತಿಳಿದಿದೆ. ಬಳಿಕ ಸಂದೇಹ ಬಂದು ತನಿಖೆ ನಡೆದಾಗ ಅಸಲಿ ಸಂತ್ರಸ್ತರಿಗೆ ಹಣ ಸಿಗಲಿಲ್ಲ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಅದಾಗಲೇ ಈ ಇಬ್ಬರೂ 2 ಕೋಟಿ ರೂಪಾಯಿಗಳಿಂದ ಜೀವನಪೂರ್ತಿ ಮಜಾ ಮಾಡುವುದು ಎಂದುಕೊಂಡು ವಿವಿಧ ಸ್ಥಳಗಳಿಗೆ ರಜೆಯ ಮಜಾ ಅನುಭವಿಸಲು ಹೋಗಿರುವುದು ತಿಳಿದಿದೆ.

ಇಬ್ಬರೂ ತಮ್ಮ ಸಂಗಾತಿಗಳಿಂದ ದೂರವಾಗಿ ಒಟ್ಟಿಗೇ ಇರಲು ಬಯಸಿದ್ದರು. ಒಟ್ಟಿಗೆ ಹೊಸ ಜೀವನವನ್ನು ನಿರ್ಮಿಸಲು ಯೋಜಿಸಿದರು. ಇಂದೋರ್ ತಲುಪಿದ ನಂತರ, ಅವರು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ನಗದು ಬಳಸಿ ಖರೀದಿಸಿದ್ದರು. ಸಿಕ್ಕಿಬೀಳಬಾರದು ಎನ್ನುವ ಕಾರಣಕ್ಕೆ ಕ್ಯಾಷ್​ ಕೊಟ್ಟಿದ್ದರು! ಮಧ್ಯಪ್ರದೇಶದ ದೂರದ ಗುಡ್ಡಗಾಡು ಪ್ರದೇಶದಲ್ಲಿ ಯಾರ ಕಣ್ಣಿಗೂ ಬೀಳದಂತೆ ಹೋಗಿ ವಾಸಿಸುವ ಪ್ಲ್ಯಾನ್​ ಕೂಡ ಮಾಡಿದ್ದರು. ಆದರೆ, ಅವರ ಈ ಯೋಜನೆ ಠುಸ್​ ಆಗಿ ಈಗ ಸಿಕ್ಕಾಕಿಕೊಂಡಿದ್ದಾರೆ.