OLX ಸೇರಿದಂತೆ ಯಾವುದೇ ಆನ್ಲೈನ್ ಪ್ಲ್ಯಾಟ್ಫಾರ್ಮ್ನಲ್ಲಿ ವಸ್ತು ಸೇಲ್ ಮಾಡಲು ಇಟ್ಟರೆ ಎಚ್ಚರ ಎಚ್ಚರ... ನಿಮಗೂ ಇದೇ ಗತಿ ಆಗ್ಬೋದು. ಇವರ ಅನುಭವ ಕೇಳಿ...
ಇದೀಗ ತಂತ್ರಜ್ಞಾನ ಬೆಳೆದಂತೆಲ್ಲಾ ಮೋಸ ಮಾಡುವವರೂ ಅಷ್ಟೇ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಮೋಸ ಹೋಗುವವರು ಇರುವವರೆಗೂ ಮಾಡುವವರು ಇದ್ದೇ ಇರುತ್ತಾರೆ ಅನ್ನೋ ಗಾದೆ ಮಾತೇ ಇದೆಯಲ್ಲ, ಅದು ಇತ್ತೀಚಿನ ದಿನಗಳಲ್ಲಂತೂ ನಿಜವೇ ಆಗುತ್ತಿದೆ. ಸೈಬರ್ ಕ್ರೈಂ ಎನ್ನುವುದು ಹೆಚ್ಚುತ್ತಲೇ ಇದ್ದು, ಎಜುಕೇಟೆಡ್ ವರ್ಗ ಎನ್ನಿಸಿಕೊಂಡವರೇ ಲಕ್ಷ ಲಕ್ಷ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. 'ನಾವೇನು ಅನ್ಎಜುಕೇಟೆಡ್ಡಾ, ಇಷ್ಟೂ ಗೊತ್ತಾಗಲ್ವಾ' ಎಂದು ದಿನನಿತ್ಯ ಡೈಲಾಗ್ ಹೊಡೆಯುವವರೂ ತಂತ್ರಜ್ಞಾನದ ಮೋಸದ ಬಲೆಗೆ ಸಿಲುಕಿದವರೇ. ಅದನ್ನು ಒತ್ತಿ, ಇದನ್ನು ಒತ್ತಿ ಎನ್ನುತ್ತಲೇ ಬ್ಯಾಂಕ್ ಖಾತೆಯನ್ನು ಒತ್ತಿ ಒತ್ತಿ ಸಂಪೂರ್ಣ ಖಾಲಿ ಮಾಡುವುದು ಹೊಸ ವಿಷಯವೇನಲ್ಲ. ಇದರ ಬಗ್ಗೆ ಅದೆಷ್ಟು ಬಾರಿ ಎಚ್ಚರಿಕೆ ಕೊಟ್ಟರೂ ನಾವು ಬುದ್ಧಿವಂತರು ಬಿಡಿ, ನಮಗೇನೂ ಆಗಲ್ಲ ಎಂದುಕೊಳ್ಳುವವರೇ ಯಾಮಾರುತ್ತಿದ್ದಾರೆ.
ಅತ್ತ ಕಡೆಯಿಂದ ಫೋನ್ ಮಾಡುವ ಸುಮಧುರ ಹೆಣ್ಣಿನ ದನಿ ಕೇಳಿ ಬೀಳುವವರು ಒಂದೆಡೆಯಾದರೆ, ಸುಂದರ ಪುರುಷರ ಫೋಟೋ ನೋಡಿಯೂ ಯಾಮಾರುವವರು ಅಷ್ಟೇ ಪ್ರಮಾಣದಲ್ಲಿ ಇದ್ದಾರೆ. ಯಾರ ಮುಖ, ಫೋಟೋ ನೋಡದೆಯೂ ಹೆಚ್ಚಿನ ದುಡ್ಡಿನ ಆಸೆಗೆ ಬಲಿಯಾಗಿ ಎಲ್ಲವನ್ನೂ ಕಳೆದುಕೊಂಡವರು ಅದೆಷ್ಟು ಮಂದಿ ಇಲ್ಲ. ಅಂಥದ್ದೇ ಒಂದ ಸ್ಕ್ಯಾಮ್ ಇದೀಗ ಫೇಸ್ಬುಕ್ನಲ್ಲಿ ಶೇರ್ ಮಾಡಲಾಗಿದೆ. ಮಧು ವೈ.ಎನ್ ಎನ್ನುವವರು ತಮ್ಮ ಅನುಭವವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಓದಿದ ಮೇಲಾದರೂ ಜನರು ಯಾವೆಲ್ಲಾ ರೀತಿಯಲ್ಲಿ ತಾವು ಮೋಸ ಹೋಗಬಹುದು ಎನ್ನುವುದನ್ನು ಅರಿತುಕೊಳ್ಳಬೇಕಿದೆ.
OLXನಲ್ಲಿ ಸೈಕಲ್ ಮಾರಾಟ ಮಾಡಲು ಹೋಗಿ, ಸ್ವಲ್ಪ ಯಾಮಾರಿದ್ರೂ ಬ್ಯಾಂಕ್ ಖಾತೆ ಖಾಲಿ ಮಾಡಿಕೊಳ್ತಿದ್ದ ಘಟನೆಯನ್ನು ಇವರು ಫೇಸ್ಬುಕ್ನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಅನುಭವವನ್ನು ತುಂಬಾ ಚೆನ್ನಾಗಿ ಬರೆದಿರುವ ಮಧು ವೈ.ಎನ್ ಅವರ ಅನುಭವದ ಸಾರಾಂಶ ಹೇಳುವುದಾದರೆ: OLXನಲ್ಲಿ ಸೈಕಲ್ ಮಾರಾಟಕ್ಕೆ ಹಾಕಿದ್ದರು. ಒಂದೆರಡು ಗಂಟೆಗಳ ನಂತರ ಒಂದು ಮೆಸೇಜು ಬಂದಿದೆ. ಇನ್ನೂ ಸೇಲ್ ಗೆ ಇದೆಯಾ, ನಂಬರ್ ಕಳಿಸಿ ಎಂದು ಅಲ್ಲಿನ ದನಿ ಹೇಳಿದಾಗ ಇವರು ಕಳಿಸಿದ್ದಾರೆ. ಆಮೇಲೆ ಕಾಲ್ ಮಾಡಿದ ಈ ಮಹಾನುಭಾವ ರೇಟು ಎಲ್ಲಾ ಕೇಳಿ ಖರೀದಿಗೆ ಒಪ್ಪಿದ್ದಾನೆ. ಆನ್ಲೈನ್ನಲ್ಲಿ ಹಣ ಹಾಕಿದ್ರೆ ಓಕೆನಾ ಕೇಳಿ ಹಣ ಬರುತ್ತಾ ಇಲ್ಲವಾ ಎಂದು ನೋಡಲು ಪರೀಕ್ಷೆ ಸ್ಕ್ಯಾನ್ ಕಳುಹಿಸಿ ಒಂದು ರೂಪಾಯಿ ಹಾಕುವಂತೆ ಹೇಳಿದ್ದಾನೆ. ಇವರು ಹಾಕಿದ್ದಾರೆ. ಕೊನೆಗೆ ಆತ ಅದನ್ನು ರಿಟರ್ನ್ ಮಾಡಿದ್ದಾನೆ. ಒಂದು ಸಲ ಬರಲಿಲ್ಲ ಎಂದು ಎರಡು ಸಲ ಹಾಕಿದ್ದಾನೆ. ಅಂದ್ರೆ ಎರಡು ರೂಪಾಯಿ ಇವರಿಗೆ ಸಿಕ್ಕಂತಾಯಿತು.
ಆ ಹಣ ಬಂದಿದೆ ಎಂದು ಇವರು ಕನ್ಫರ್ಮ್ ಮಾಡಿದ ಮೇಲೆ, ನಾವು ಬಂದು ಸೈಕಲ್ ತೆಗೆದುಕೊಂಡು ಹೋಗುತ್ತೇವೆ. ನಿಮ್ಮ ಆ್ಯಡ್ನಲ್ಲಿ ಸೋಲ್ಡ್ ಔಟ್ ಅಂತ ಹಾಕಿ ಎಂದೆಲ್ಲಾ ಮಹಾನುಭಾವ ಹೇಳಿದ್ದಾನೆ. ಕೊನೆಗೆ, 'ನಮ್ಮದು ಸೆಕೆಂಡ್ಸ್ ಸೇಲ್ಸ್ ಅಂಗಡಿ ಆಗಿರೋದರಿಂದ ಬಿಲ್ ಜೆನರೇಟ್ ಆಗ್ಬೇಕು. ಸೊ ನಾನೇ ನಿಮಗೆ ಕ್ಯೂ ಆರ್ ಕೋಡಿ ಕಳಿಸ್ತೇನೆ. ಅದನ್ನು ಸ್ಕಾನ್ ಮಾಡಿ. ನಮ್ಮಿಂದ ನಿಮಗೆ ಹಣ ವರ್ಗಾವಣೆ ಆಗುತ್ತೆ' ಎಂದು ವಾಟ್ಸ್ಆ್ಯಪ್ಗೆ 10000, receive money ಅಂತ ಬರೆದು ಕ್ಯೂ ಆರ್ ಕೋಡ್ ಕಳಿಸಿದಾನೆ. ಅದನ್ನು ಒತ್ತಿದರೆ ನಿಮಗೆ 10 ಸಾವಿರ ರೂಪಾಯಿ ಬರುತ್ತದೆ ಎಂದು ಹೇಳಿದ್ದಾನೆ!
ಬಹುಶಃ ಬೇರೆ ಯಾರೋ ಆಗಿದ್ದರೆ, ಗೊತ್ತಿಲ್ಲದೇ ಅದನ್ನೇನಾದರೂ ಒತ್ತಿದ್ದರೆ ಬ್ಯಾಂಕ್ನಿಂದ 10 ಸಾವಿರ ಗೋವಿಂದ ಆಗ್ತಿತ್ತು. ಆದರೆ ತಾವು ಆ ರೀತಿ ಮಾಡದೇ ಕಾಲ್ ಕಟ್ ಮಾಡಿರುವುದಾಗಿ ಹೇಳಿದ್ದಾರೆ. ಜೊತೆಗೆ, ಆತನಿಂದ ನನಗೆ ಹೆಚ್ಚುವರಿಯಾಗಿ ಬಂದ ಒಂದು ರೂಪಾಯಿ ವಾಪಸ್ ಕಳಿಸುವಂತೆ ಕೇಳಿಕೊಂಡಿದ್ದ. ಆದರೆ, ನಾನು ಅದನ್ನು ಕಳುಹಿಸಲಿಲ್ಲ ಎಂದಿದ್ದಾರೆ. ಇದು ಓದಲು ತಮಾಷೆ ಎನ್ನಿಸಬಹುದು. ಆದರೆ OLX ಸೇರಿದಂತೆ ಯಾವುದೇ paltformನಲ್ಲಿ ವಸ್ತು ಸೇಲ್ಗೆ ಇಟ್ಟರೆ ಯಾವ ರೀತಿಯಲ್ಲಿ ಹುಷಾರಾಗಿ ಇರಬೇಕು ಎನ್ನುವ ಪಾಠವನ್ನೂ ಇದು ಕಲಿಸುತ್ತದೆ.
