ಐ-ಫೋನ್ ಕೊಡಿಸದ್ದಕ್ಕೆ ಗೋವಾಕ್ಕೆ ಮಕ್ಕಳು ಪರಾರಿ!
ಪೋಷಕರು ಐ-ಫೋನ್ ಕೊಡಿಸಲಿಲ್ಲ ಎಂದು ಬೇಸರಗೊಂಡು ಇತ್ತೀಚೆಗೆ ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರನ್ನು ಸಂಜಯನಗರ ಠಾಣೆ ಪೊಲೀಸರು ಗೋವಾದಲ್ಲಿ ಪತ್ತೆಹಚ್ಚಿ ವಾಪಸ್ ಕರೆತಂದಿದ್ದಾರೆ.

ಬೆಂಗಳೂರು (ಸೆ.11) : ಪೋಷಕರು ಐ-ಫೋನ್ ಕೊಡಿಸಲಿಲ್ಲ ಎಂದು ಬೇಸರಗೊಂಡು ಇತ್ತೀಚೆಗೆ ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರನ್ನು ಸಂಜಯನಗರ ಠಾಣೆ ಪೊಲೀಸರು ಗೋವಾದಲ್ಲಿ ಪತ್ತೆಹಚ್ಚಿ ವಾಪಸ್ ಕರೆತಂದಿದ್ದಾರೆ.
ನಾಗಶೆಟ್ಟಿಹಳ್ಳಿ ಮತ್ತು ಹೆಬ್ಬಾಳದ ಕೆಂಪಾಪುರ ಮೂಲದ 15 ವರ್ಷದ ಇಬ್ಬರು ಬಾಲಕರು ಭೂಪಸಂದ್ರದ ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಸೆ.1ರಂದು ಮದರಸಾದಿಂದ ಇಬ್ಬರೂ ಏಕಾಏಕಿ ನಾಪತ್ತೆಯಾಗಿದ್ದರು. ಈ ಸಂಬಂಧ ಪೋಷಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ನಗರಕ್ಕೆ ಕರೆತಂದು ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೇಲಿ ಬೈಕ್ ಕೊಡಿಸದ್ದಕ್ಕೆ 16 ಬೈಕ್ ಎಗರಿಸಿದ ಖದೀಮರು ಅರೆಸ್ಟ್
ನಾಗಶೆಟ್ಟಿಹಳ್ಳಿ ನಿವಾಸಿಯಾದ ಒಬ್ಬ ಬಾಲಕ ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಮದರಾಸಗೆ ತೆರಳಿ ರಾತ್ರಿ 10 ಗಂಟೆಗೆ ವಾಪಾಸ್ ಮನೆಗೆ ಬರುತ್ತಿದ್ದ. ಕೆಂಪಾಪುರದ ಬಾಲಕ ಮದರಸಾದಲ್ಲಿ ಉಳಿದು ಶಿಕ್ಷಣ ಪಡೆಯುತ್ತಿದ್ದ. ಸೆ.1ರಂದು ಮದರಸಾಗೆ ರಜೆ ಇತ್ತು. ಆದರೂ ಸಂಜೆ 4.30ರ ಸುಮಾರಿಗೆ ನಾಗಶೇಟ್ಟಿಹಳ್ಳಿಯಿಂದ ಬಾಲಕ ಮದರಸಾಗೆ ಬಂದಿದ್ದ. ಈ ವೇಳೆ ಇಬ್ಬರು ಬಾಲಕರು ಮದರಸಾದಿಂದ ನಾಪತ್ತೆಯಾಗಿದ್ದರು. ರಾತ್ರಿಯಾದರೂ ಬಾಲಕ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನ ಮೊಬೈಲ್‌ಗೆ ಪೋಷಕರು ಕರೆ ಮಾಡಿದ್ದಾರೆ. ಈ ವೇಳೆ ಮೊಬೈಲ್ ಸ್ವಿಚ್‌್ಡ ಆಫ್ ಬಂದಿದೆ.
ಇದರಿಂದ ಪೋಷಕರು ಗಾಬರಿಗೊಂಡು ಮದರಸಾ ಬಳಿ ಬಂದು ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಬಳಿಕ ಮದರಸಾದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಇಬ್ಬರು ಬಾಲಕರು ಲಗೇಜ್ ತೆಗೆದುಕೊಂಡು ಮದರಸಾದಿಂದ ಹೊರಗೆ ಹೋಗಿರುವುದು ಸೆರೆಯಾಗಿತ್ತು. ಈ ಸಂಬಂಧ ಪೋಷಕರು ನೀಡಿದ್ದ ನಾಪತ್ತೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ಬಾಲಕರನ್ನು ಪತ್ತೆಹಚ್ಚಿ ನಗರಕ್ಕೆ ತಂದು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಷಕರಿಗೆ ಮಕ್ಕಳ ‘ಮುಂಬೈ’ ಬೆದರಿಕೆ
ಈ ಇಬ್ಬರು ಬಾಲಕರು ಇತ್ತೀಚೆಗೆ ಇ-ಫೋನ್ ಕೊಡಿಸುವಂತೆ ಪೋಷಕರ ಬಳಿ ಬೇಡಿಕೆ ಇರಿಸಿದ್ದಾರೆ. ಇಬ್ಬರ ಬಳಿಯೂ ಈಗಾಗಲೇ ಆಂಡ್‌ರಾಯ್ಡ್ ಮೊಬೈಲ್ ಇತ್ತು. ಐ-ಫೋನ್ ಕೊಡಿಸುವಷ್ಟುಅನುಕೂಲ ಇಲ್ಲದ ಹಿನ್ನೆಲೆಯಲ್ಲಿ ಪೋಷಕರು ಬಾಲಕರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಬೇಸರಗೊಂಡ ಬಾಲಕರು, ಮುಂಬೈಗೆ ತೆರಳಿ ಕೆಲಸಕ್ಕೆ ಸೇರಿ ತಾವೇ ದುಡಿದು ಐ-ಫೋನ್ ತೆಗೆದುಕೊಳ್ಳುವುದಾಗಿ ಪೋಷಕರ ಬಳಿ ಹೇಳಿದ್ದಾರೆ. ಪೋಷಕರು ಈ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ಬೆನ್ನಲ್ಲೇ ಇಬ್ಬರು ಬಾಲಕರು ಮದರಸಾದಿಂದ ನಾಪತ್ತೆಯಾಗಿದ್ದರು.
ಮೊಬೈಲ್ ಕೊಡಿಸದ್ದಕ್ಕೆ ವಿಚ್ಛೇದನಕ್ಕೆ ಮುಂದಾದ ಪತ್ನಿ: ವಾಟ್ಸಪ್‌ನಲ್ಲಿ ಮೆಸೇಜ್ ನೋಡಿ ಕಂಗಾಲಾದ ಪತಿ!
ಮುಂಬೈ ಬದಲು ಗೋವಾಗೆ ಪಯಣ
ಮದರಸಾದಿಂದ ಹೊರಗೆ ಬಂದ ಬಾಲಕರು ಬಳಿಕ ರೈಲು ಹಿಡಿದು ಗೋವಾಗೆ ತೆರಳಿದ್ದರು. ಮತ್ತೊಂದೆಡೆ ಸಂಜಯನಗರ ಠಾಣೆ ಪೊಲೀಸರು ಎಲ್ಲ ಪೊಲೀಸ್ ಠಾಣೆಗಳಿಗೆ ಬಾಲಕರ ನಾಪತ್ತೆ ಮಾಹಿತಿ ನೀಡಿದ್ದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಈ ಇಬ್ಬರು ಬಾಲಕರು ಗೋವಾ ಟ್ರೈನ್ ಹತ್ತಿರುವುದು ಗೊತ್ತಾಗಿದೆ. ಬಾಲಕರ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದಾಗ ಇಬ್ಬರು ಗೋವಾದಲ್ಲಿ ಇರುವುದು ಖಚಿತವಾಗಿದೆ. ಅಷ್ಟರಲ್ಲಿ ಪೊಲೀಸರ ತಂಡವೊಂದು ಗೋವಾಗೆ ತೆರಳಿ ಇಬ್ಬರು ಬಾಲಕರನ್ನು ಸುರಕ್ಷಿತವಾಗಿ ನಗರಕ್ಕೆ ಕರೆತಂದು ಪೋಷಕರ ಮಡಿಲು ಸೇರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.