ಮನೆಯಲ್ಲಿ ದ್ವಿಚಕ್ರ ವಾಹನ ಕೊಡಿಸಲಿಲ್ಲ ಎಂದು ದ್ವಿಚಕ್ರ ವಾಹನ ಕಳ್ಳತನ ಮಾಡಿ ಬಳಿಕ ಅದನ್ನೇ ವೃತ್ತಿ ಮಾಡಿಕೊಂಡಿದ್ದ ಇಬ್ಬರು ಕಳ್ಳರನ್ನು ವಿಶ್ವೇಶ್ವರಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.6) :  ಮನೆಯಲ್ಲಿ ದ್ವಿಚಕ್ರ ವಾಹನ ಕೊಡಿಸಲಿಲ್ಲ ಎಂದು ದ್ವಿಚಕ್ರ ವಾಹನ ಕಳ್ಳತನ ಮಾಡಿ ಬಳಿಕ ಅದನ್ನೇ ವೃತ್ತಿ ಮಾಡಿಕೊಂಡಿದ್ದ ಇಬ್ಬರು ಕಳ್ಳರನ್ನು ವಿಶ್ವೇಶ್ವರಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಹೊಸೂರು ಮೂಲದ ಆಸೀಂ (19) ಮತ್ತು ಅಭಿಕುಮಾರ್‌ (20) ಬಂಧಿತರು. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ .12 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 16 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವಿಶ್ವೇಶ್ವರಪುರಂ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಇವರು ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದರು. ಈ ವೇಳೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದ್ವಿಚಕ್ರ ವಾಹನ ಕಳವು ಬಗ್ಗೆ ಬಾಯ್ಬಿಟ್ಟಿದ್ದಾರೆ.

ಬೆಂಗಳೂರಿಗೆ: ವಿಮಾನದಲ್ಲಿ ಬಂದು ಮನೆ ದೋಚುತ್ತಿದ್ದವರ ಬಂಧನ

ಇಬ್ಬರು ಆರೋಪಿಗಳು ನೆರೆಹೊರೆಯ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಮನೆಯಲ್ಲಿ ದ್ವಿಚಕ್ರ ವಾಹನ ಕೊಡಿಸುವಂತೆ ಕೇಳಿದ್ದಾಗ ಪೋಷಕರು ನಿರಾಕರಿಸಿದ್ದಾರೆ. ದ್ವಿಚಕ್ರ ವಾಹನ ಓಡಿಸುವ ಶೋಕಿಗೆ ಬಿದ್ದಿದ್ದ ಆರೋಪಿಗಳು ಕೂಲಿಗಾಗಿ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಒಂದು ದ್ವಿಚಕ್ರ ವಾಹನ ಕದ್ದು ಪರಾರಿಯಾಗಿದ್ದರು. ಬಳಿಕ ಆ ದ್ವಿಚಕ್ರ ವಾಹನವನ್ನು ಹೊಸೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ .5-10 ಸಾವಿರಗಳಿಗೆ ಮಾರಾಟ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದರು. ಹಣ ಖಾಲಿಯಾದಾಗ ಮತ್ತೆ ಬೆಂಗಳೂರಿಗೆ ಬಂದು ಮನೆ ಎದುರು ಅಥವಾ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡಿ ಪರಾರಿಯಾಗುತ್ತಿದ್ದರು. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 16 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದು, ವಿಚಾರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನ: ಆರೋಪಿ ಅರೆಸ್ಟ್

ಬೆಂಗಳೂರು:: ಪ್ರಯಾಣಿಕರ ಸೋಗಿನಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ ಲ್ಯಾಪ್‌ಟಾಪ್‌ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಿವಾಜಿನಗರ ನಿವಾಸಿ ಕೆ.ಆರ್‌.ಶಬರೀಶ್‌(32) ಮತ್ತು ಸೋಮೇಶ್ವರನಗರದ ಅರೆಕೆಂಪನಹಳ್ಳಿ ನಿವಾಸಿ ಫಾಜಿಲ್‌ ಪಾಷಾ(29) ಬಂಧಿತರು. ಆರೋಪಿಗಳಿಂದ .9 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 39 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಆಂಧ್ರಪ್ರದೇಶದ ಸಾರಿಗೆ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಕೆ.ವಿ.ಸುಬ್ಬಾರೆಡ್ಡಿ ಎಂಬುವವರ ಲ್ಯಾಪ್‌ಟಾಪ್‌ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿ ಕೆ.ಆರ್‌.ಶಬರೀಶ್‌ ರಾತ್ರಿ ವೇಳೆ ಆಂಧ್ರಪ್ರದೇಶದಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ತೆರಳುವ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಲ್ಯಾಪ್‌ಟಾಪ್‌ ಬ್ಯಾಗ್‌ ಇರುವ ಪ್ರಯಾಣಿಕರನ್ನು ಗಮನಿಸುತ್ತಿದ್ದ. ಪ್ರಯಾಣಿಕರು ಗಾಢ ನಿದ್ದೆಯಲ್ಲಿ ಇದ್ದಾಗ ಲ್ಯಾಪ್‌ಟಾಪ್‌ ಬ್ಯಾಗ್‌ ಎಗರಿಸಿ ಮಾರ್ಗ ಮಧ್ಯೆಯೇ ಇಳಿದು ಪರಾರಿಯಾಗುತ್ತಿದ್ದ. ಕದ್ದ ಲ್ಯಾಪ್‌ಟಾಪ್‌ಗಳನ್ನು ಬೆಂಗಳೂರಿನ ಫಾಜಿಲ್‌ ಮೂಲಕ ವಿಲೇವಾರಿ ಮಾಡಿಸಿ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

Crime news: ಜ್ಯುವೆಲರಿ ಅಂಗಡಿ ಬಾಗಿಲು ಮುರಿದು ಕಳ್ಳತನ: ನಾಲ್ವರು ಆರೋಪಿಗಳ ಬಂಧನ

ಆರೋಪಿಗಳ ಬಂಧನದಿಂದ ಕೊಡಿಗೆಹಳ್ಳಿ ಮತ್ತು ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಎರಡು ಲ್ಯಾಪ್‌ಟಾಪ್‌ಗಳು ಪತ್ತೆಯಾಗಿವೆ. ಆರೋಪಿಗಳ ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟುಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.