ಕೋಲಾರ ಜಿಲ್ಲಾಸ್ಪತ್ರೆಯಿಂದ ಹಾಡಹಗಲೆ ಮಗು ಅಪಹರಣ ಘಟನೆ ನಡೆದಿದ್ದು ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಕಳುವಾಗಿದ್ದ ಮಗು ಮತ್ತೆ ತಾಯಿ ಮಡಿಲು ಸೇರಿ ಪ್ರಕರಣ ಸುಖಾಂತ್ಯವಾಗಿದೆ.

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಅ.27) : ಆ ಮಗು ಹುಟ್ಟಿ ಐದು ದಿನವಾದ್ರೂ ತಾಯಿಯ ಆಸರೆ ಪಡೆಯದೇ ಐಸಿಯುನಲ್ಲಿತ್ತು. ದೇವರ ದಯೆಯಿಂದ ಚೇತರಿಸಿಕೊಂಡು ತಾಯಿಯ ಮಡಿಲು ಸೇರಿ ಒಂದೇ ಗಂಟೆಯಲ್ಲಿ ಮಗು ನಾಪತ್ತೆ ಆಗಿತ್ತು. ಕಣ್ಣುಮಿಟುಕಿಸುವಷ್ಟರಲ್ಲಿ ಮಗು ನಾಪತ್ತೆಯಾಗಿತ್ತು. ನಾಪತ್ತೆಯಾದ ದೃಶ್ಯ ಸಿಸಿ ಟಿವಿಯಲ್ಲಿ ಕಂಡ ತಾಯಿಯ ಆಕ್ರಂದನ ಹೇಳತೀರದಾಗಿತ್ತು. ಆ ಕರಳು ಬಳ್ಳಿಯ ಕೇಸ್‌ ಇದೀಗ ಸಿನಿಮೀಯ ರೀತಿಯಲ್ಲಿ ಸುಖಾಂತ್ಯವಾಗಿದ್ದು, ಕೊನೆಗೂ ಮಗು ತಾಯಿಯ ಮಡಿಲು ಸೇರಿದೆ. 

ಹಾಡ ಹಗಲಲ್ಲೇ ವ್ಯಾನಿಟಿ ಬ್ಯಾಗ್‌ ನಲ್ಲಿ ಮಗುವನ್ನು ತುಂಬಿಕೊಂಡು ಹೋಗ್ತಿರುವ ಮೂವರು ಮಹಿಳೆಯರು. ತನ್ನ ಮಗು ಅಪಹರಣದ ದೃಶ್ಯಗಳನ್ನು ಕಂಡ ತಾಯಿಯ ಆಕ್ರಂದನ. ಅಪಹರಣವಾದ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸರು. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ.

ಮಗು ಅಪಹರಣ ಪ್ರಕರಣ ಭೇದಿಸಿದ ಮುನಿರಾಬಾದ್ ಪೊಲೀಸರು

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಮಗುವನ್ನು ಅಪಹರಣ ಮಾಡಿಕೊಂಡು ಅಮಾನವೀಯವಾಗಿ ತನ್ನ ವ್ಯಾನಿಟಿ ಬ್ಯಾಗ್‌ ನಲ್ಲಿ ತುಂಬಿಕೊಂಡು ಹೋಗ್ತಿರುವ ಈ ಮಹಿಳೆಯ ನಡೆವಳಿಕೆ ನೋಡ್ತಿದ್ರೆ ಒಂದೂ ಕ್ಷಣ ಆತಂಕವಾಗುತ್ತೆ. ಮಾಲೂರು ಮೂಲದ ನಂದಿನಿ ಹಾಗೂ ಪೂವರಸನ್‌ ದಂಪತಿಗೆ ೨೧ನೇ ತಾರೀಖು ಜನಿಸಿರುವ ಈ ಗಂಡು ಮಗುವಿಗೆ ಶ್ವಾಸಕೋಶದ ಸಮಸ್ಯೆ ಇದ್ದಿದ್ದರಿಂದ ಜಿಲ್ಲಾಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಮಗುವಿನ ಆರೋಗ್ಯದಲ್ಲಿ ಕೊಂಚ ಚೇತರಿಗೆ ಆದ ಕಾರಣ ನಿನ್ನೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಐಸಿಯುನಿಂದ ತಾಯಿಯ ವಾಡ್‌೯ ಗೆ ಶಿಫ್ಟ್‌ ಮಾಡಿದ್ದಾರೆ. ಸಂಜೆ 4.30 ರ ಸುಮಾರಿಗೆ ಮಗುವಿಗೆ ಎದೆ ಹಾಲು ಕುಡಿಸಿ ಮಲಗಿಸಿ ನಂದಿನಿ ಶೌಚಾಲಯಕ್ಕೆ ಹೋಗಿದ್ದಾಳೆ. ಇತ್ತ ಐದು ದಿನಗಳಿಂದ ಸರಿಯಾಗಿ ನಿದ್ದೆ ಇಲ್ಲದ ಕಾರಣ ಮಗುವಿನ ಅಜ್ಜಿ ರಾಧಾ ಮತ್ತು ನಂದಿನಿಯ ಸಂಬಂಧಿ ಬಾಲಕ ಕಾತಿ೯ಕ್‌ ಸಹ ಗಾಢವಾದ ನಿದ್ದೆಗೆ ಜಾರಿದ್ದಾರೆ. ಇದನ್ನೆ ಸರಿ ಸುಮಾರು ಒಂದೂ ತಾಸು ಗಮನಸಿದ ಈ ಚಾಲಾಕಿ ಕಳ್ಳಿ ಮಗು ನೋಡುವ ನೆಪದಲ್ಲಿ ಬಂದು ತನ್ನ ವ್ಯಾನಿಟಿ ಬ್ಯಾಗ್‌ ನಲ್ಲಿ ಮಗುವನ್ನು ಅಮಾನವೀಯವಾಗಿ ತುಂಬಿಕೊಂಡು ಎಸ್ಕೇಪ್‌ ಆಗಿದ್ದಾಳೆ.

ಇದನ್ನು ಗಮನಿಸಿದ ಬಾಲಕ ಕಾರ್ತಿಕ್ ಬ್ಯಾಗ್‌ ಬ್ಯಾಗ್‌ ಅಂತಾ ಕೂಗಿಕೊಂಡಿದ್ದಾನೆ. ಹಾಸಿಗೆ ಮೇಲೆ ಮಲಗಿದ್ದ ಮಗು ಕಾಣದೇ ಇದ್ದಾಗ ಮಗುವಿನ ಅಜ್ಜಿ ಹಾಗೂ ಬಾಲಕ ಇಬ್ಬರು ಓಡಿ ಹೋದ್ರೂ ಸಹ ಕೈಗೆ ಸಿಗದೇ ಕ್ಷಣಾರ್ಧದಲ್ಲಿ ಎಸ್ಕೇಪ್‌ ಆಗಿರುವ ಖತರ್ನಾಕ್ ಕಳ್ಳಿ.ಈ ಪ್ರಕರಣ ಸಿನೀಮಿಯ ರೀತಿಯಲ್ಲಿ ಸುಖಾಂತ್ಯವಾಗಿದ್ದು ಕೇವಲ ಆರೇ ಗಂಟೆಗಳಲ್ಲೇ ಪೊಲೀಸರು ಮಗುವನ್ನು ತಾಯಿಯ ಮಡಿಲಿಗೆ ಒಪ್ಪಿಸಿದ್ದಾರೆ.


ಘಟನೆ ನಡೆದ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲಾತಣದಲ್ಲಿ ವೈರಲ್‌ ಆಗಿದೆ. ಜಿಲ್ಲೆಯ ಎಲ್ಲಾ ಠಾಣೆಯ ಪೊಲೀಸ್‌ ಇನ್ಸಪೆಕ್ಟರ್‌ ಗಳಿಗೆ ಸಿಸಿ ಟಿವಿ ದೃಶ್ಯಗಳನ್ನು ಹಾಕುವ ಮೂಲಕ ಪತ್ತೆ ಹಚ್ಚುವಂತೆ 10 ತಂಡಗಳನ್ನು ರಚಿಸಿ ಎಸ್ಪಿ ನಾರಾಯಣ್‌ ಸೂಚನೆ ನೀಡುತ್ತಾರೆ. ಮಾಲೂರು ಠಾಣೆಯ ಸಿಪಿಐ ವಸಂತ್‌ ಹಾಗೂ ಪೇದೆ ಮೋಹನ್‌ ಅವರಿಗೆ ನವೀನ್‌ ಅನ್ನೋ ಆಟೋ ಚಾಲಕ ರಾತ್ರಿ 9 ಗಂಟೆ ಸುಮಾರು ಕರೆ ಮಾಡಿ ಸಾರ್‌ ಇವರನ್ನು ನಾನು ಮಾಲೂರು ಬಸ್ ನಿಲ್ದಾಣದಿಂದ ತಮಿಳುನಾಡು ಬಾರ್ಡರ್ ನಲ್ಲಿರುವ ಆಲಂಬಾಡಿ ಗ್ರಾಮದ ಬಳಿ ಬಿಟ್ಟು ಬಂದಿದ್ದೇನೆ. ಬಾಡಿಗೆ 450 ರುಪಾಯಿ ನನಗೆ ಫೋನ್‌ ಪೇ ಮಾಡಿದ್ಧಾರೆ ಎಂದು ಆರೋಪಿಯ ನಂಬರ್‌ ಪೊಲೀಸರಿಗೆ ತಿಳಿಸುತ್ತಾನೆ. ಪೊಲೀಸರು ಎಷ್ಟೇ ಪ್ರಯತ್ನ್ ಮಾಡಿದ್ರೂ ಸಹ ಆಕೆಯ ಮೊಬೈಲ್‌ ಲೋಕೆಷನ್‌ ಸಿಗದೇ ತಮಿಳುನಾಡಿನ ಹೊಸೂರು ಹಾಗೂ ಬೇರೆ ಪೊಲೀಸರಿಗೆ ಸಿಸಿ ಟಿವಿ ದೃಶ್ಯಗಳನ್ನು ಮಾಲೂರು ಪೊಲೀಸರು ಕಳುಹಿಸಿಕೊಡುತ್ತಾರೆ. ಹೊಸೂರು ಪೊಲೀಸರಿಗೆ ಆಕೆ ಇರುವುದು ತಿಳಿಯುತ್ತೆ ಇನ್ನೇನು ಹಿಡಿಯುಷ್ಟರಲ್ಲಿ ಆಕೆ ಕೋಲಾರದ ಕಡೆ ಮತ್ತೆ ವಾಪಸ್ಸು ಬರುತ್ತಿರುವುದಾಗಿ ತಿಳಿಯುತ್ತೆ.ಅಪರಿಚಿತ ಯುವಕನ ಗಾಡಿಯಲ್ಲಿ ಇನ್ನೇನು ಕೋಲಾರದ ಎಪಿಎಂಸಿ ಬಳಿ ಬರುವಾಗ ನಗರ ಪೊಲೀಸ್‌ ಠಾಣೆಯ ಸಿಪಿಐ ಹರೀಶ್‌ ವಿಚಾರಿಸಿ ಓರ್ವ ಮಹಿಳೆಯನ್ನು ಬಂಧಿಸುತ್ತಾರೆ.

ಬಂಧನವಾದ ಕೂಡಲೇ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ತಾಯಿಯ ಮಡಿಲಿಗೆ ಮಗುವನ್ನು ಒಪ್ಪಿಸಿರುತ್ತಾರೆ. ಇನ್ನು ಇದಾದ ಬಳಿಕ ವಿಚಾರಣೆ ನಡೆಸಿದಾಗಲೇ ಗೊತ್ತಾಗಿದ್ದು ಮಗು ಕಳ್ಳತನ ಮಾಡಿದ ಮಹಿಳೆ ಮಾಲೂರು ತಾಲೂಕಿನ ಚಿಕ್ಕತಿರುಪತಿ ಮೂಲದ ಶಿಲ್ಪಾ ಅಲಿಯಾಸ್‌ ಸ್ವಾತಿ ಅನ್ನೋದು. ಇನ್ನು ಸಿಸಿ ಟಿವಿಯಲ್ಲಿ ಸ್ವಾತಿಯ ಜೊತೆ ಸಹಕರಿಸಿದ ಇಬ್ಬರಿಗೂ ಮಗು ಕಳ್ಳತನದ ವಿಚಾರ ತಿಳಿದಿರಲಿಲ್ಲಾ. ಅದರಲ್ಲಿ ಸಹಕರಿಸಿದ ಒಬ್ಬಳು ಸ್ವಾತಿಯ ಮಗಳಾಗಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಸದ್ಯ ಈ ಪ್ರಕರಣಕ್ಕೆ ಆಟೋ ಚಾಲಕನಿಗೆ ಮಾಡಿದ್ದ ಫೋನ್‌ ಪೇ ಸಹಾಯಕ್ಕೆ ಬಂದಿದೆ. ಆಟೋ ಚಾಲಕನ ಸಮಯಪ್ರಜ್ನೆಗೆ ಶ್ಲಾಘನೆ ವ್ಯಕ್ತವಾಗಿದೆ. 

ಬೆಂಗಳೂರಲ್ಲಿ ಹೈಡ್ರಾಮಾ: ತಂದೆಯಿಂದಲೇ ಮಗನ ಕಿಡ್ನಾಪ್‌..!

ಕಳ್ಳತನದ ವೇಳೆ ಬಾಲಕ ಕಾರ್ತಿಕ್ ಕೂಗಿದಕ್ಕೆ ಕೂಡಲೇ ಸಿಸಿ ಟಿವಿ ಮೂಲಕ ಆರೋಪಿಗಳ ಚಲನವಚನ ಪತ್ತೆ ಮಾಡುವುದಕ್ಕೆ ಸಹಾಯ ಆಗಿದ್ದರಿಂದ ಬಾಲಾಕ ಕಾರ್ತಿಕ್ ಗೆ ಬಾಲ ಶೌರ್ಯ ಪ್ರಶಸ್ತಿಗಾಗಿ ಎಸ್ಪಿ ನಾರಾಯಣ್‌ ಸಕಾ೯ರಕ್ಕೆ ಶಿಫಾರಸ್ದು ಮಾಡಿದ್ಧಾರೆ. ಸದ್ಯ ಮಗು ಸಹ ಆರೋಗ್ಯವಾಗಿದ್ದು, ಪೊಲೀಸರ ಕಾಯ೯ಕ್ಷಮತೆಗೆ ಸಿಎಂ ಸಿದ್ದರಾಮಯ್ಯ ಸಹ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮಗುವನ್ನು ಚಿಕ್ಕಬಳ್ಳಾಪುರ ಮೂಲದ ದಂಪತಿಗೆ ಮಗುವಿನ ಅವಶ್ಯಕತೆ ಇದ್ದಿದಕ್ಕೆ ಮಗುವನ್ನು ಸ್ವಾತಿ ಅಪಹರಣ ಮಾಡಿದ್ದಾಳೆ ಅಂತ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದ್ರೇ ಇದರ ಹಿಂದೆ ಮಕ್ಕಳ ಅಪಹರಣದ ಜಾಲ ಇದೀಗ ಅನ್ನೋದನ್ನು ತನಿಖೆ ಮಾಡಲಾಗ್ತಿದೆ. ಒಟ್ಟಾರೆ ಆಟೋ ಚಾಲಕ,ಬಾಲಕನ ಸಮಯಪ್ರಜ್ನೆಯ ಜೊತೆ ಆರೋಪಿ ಫೋನ್‌ ಪೇ ಮಾಡಿದ್ದು ಮಗು ತಾಯಿಯ ಮಡಿಲು ಸೇರೋದಕ್ಕೆ ಸಹಾಯವಾಗಿದ್ದು,ಪೊಲೀಸರ ಕಾಯ೯ಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.