Asianet Suvarna News Asianet Suvarna News

ಬೆಂಗಳೂರಲ್ಲಿ ಹೈಡ್ರಾಮಾ: ತಂದೆಯಿಂದಲೇ ಮಗನ ಕಿಡ್ನಾಪ್‌..!

ಅಮೃತಹಳ್ಳಿ ನಿವಾಸಿ ಸೆಲ್ವಿಯಾ ಎಂಬುವವರ ಆರು ವರ್ಷದ ಮಗು ಅಪಹರಣವಾಗಿದೆ. ಆ ಮಗುವಿನ ತಂದೆ ಹರಿಕೃಷ್ಣ ಎಂಬಾತನೇ ಮಗನನ್ನು ಅಪಹರಣ ಮಾಡಿದ್ದಾನೆ. 

Kidnapping of Son by Father in Bengaluru grg
Author
First Published Jun 17, 2023, 11:27 AM IST

ಬೆಂಗಳೂರು(ಜೂ.17):  ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗನನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹಿಂದಿನಿಂದ ಬಂದ ಆಟೋ ರಿಕ್ಷಾ ಡಿಕ್ಕಿ ಹೊಡೆದು ಅಪಘಾತದ ಹೈಡ್ರಾಮಾ ನಡೆಯುವಾಗ ಕಾರಿನಲ್ಲಿ ಬಂದ ತಂದೆ ಮಗನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಪರಾರಿಯಾಗಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಮೃತಹಳ್ಳಿ ನಿವಾಸಿ ಸೆಲ್ವಿಯಾ(36) ಎಂಬುವವರ ಆರು ವರ್ಷದ ಮಗು ಅಪಹರಣವಾಗಿದೆ. ಆ ಮಗುವಿನ ತಂದೆ ಹರಿಕೃಷ್ಣ(44) ಎಂಬಾತನೇ ಮಗನನ್ನು ಅಪಹರಣ ಮಾಡಿದ್ದಾನೆ. ಸೆಲ್ವಿಯಾ ಅವರ ದ್ವಿಚಕ್ರ ವಾಹನಕ್ಕೆ ಆಟೋ ರಿಕ್ಷಾದಿಂದ ಗುದ್ದಿ ಅಪಘಾತ ಹೈಡ್ರಾಮಾ ಸೃಷ್ಟಿಸಿ ಮಗು ಅಪಹರಣಕ್ಕೆ ಸಹಕರಿಸಿದ ಆರೋಪದಡಿ ಆಟೋ ಚಾಲಕನಾಗಿರುವ ರೌಡಿಶೀಟರ್‌ ಆದಿಲ್‌ ಖಾನ್‌ ಹಾಗೂ ಐವರು ಮಹಿಳೆಯರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಗವನ್ನು ಅಪಹರಿಸಿರುವ ತಂದೆ ಹರಿಕೃಷ್ಣನ ಪತ್ತೆಗೆ ಪೊಲೀಸರ ತಂಡವೊಂದು ಕಾರ್ಯ ಪ್ರವೃತ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿರಾಡಿ: ಟ್ಯಾಂಕರ್‌ ಚಾಲಕನಿಗೆ ಹಲ್ಲೆಗೈದು ನಗದು ದರೋಡೆ

ಅಮೃತಹಳ್ಳಿ ನಿವಾಸಿ ಸೆಲ್ವಿಯಾ ಮತ್ತು ಬಳ್ಳಾರಿ ಮೂಲದ ಹರಿಕೃಷ್ಣ ಹಲವು ವರ್ಷ ಸಹಜೀವನ ನಡೆಸಿದ್ದರು. ಇಬ್ಬರಿಗೂ ಒಂದು ಗುಂಡು ಮಗು ಜನಿಸಿತ್ತು. 2020ನೇ ಸಾಲಿನಲ್ಲಿ ಹರಿಕೃಷ್ಣ ಸ್ವಂತ ತಂದೆಯನ್ನು ಕೊಲೆ ಮಾಡಿ ಜೈಲು ಪಾಲಾಗಿದ್ದ. ಆಗಿನಿಂದ ಸೆಲ್ವಿಯಾ ತನ್ನ ಮಗುವಿನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಳು. ಹರಿಕೃಷ್ಣ ಎರಡು ವರ್ಷ ಜೈಲಿನಲ್ಲಿ ಇದ್ದು, ಜಾಮೀನಿನ ಮೇಲೆ ಹೊರಬಂದಿದ್ದ. ಆದರೆ, ಸೆಲ್ವಿಯಾ ಆತನಿಂದ ಅಂತರ ಕಾಯ್ದುಕೊಂಡಿದ್ದಳು ಎನ್ನಲಾಗಿದೆ.

ಏನಿದು ಘಟನೆ?

ಸೆಲ್ವಿಯಾ ಅವರು ತಮ್ಮ ಮಗನನ್ನು ಅರವಿಂದೋ ಶಾಲೆಗೆ ದಾಖಲಿಸಿದ್ದಾರೆ. ಶುಕ್ರವಾರ ಬೆಳಗ್ಗೆ 8.30ರ ಸಮಾರಿಗೆ ದ್ವಿಚಕ್ರ ವಾಹನದಲ್ಲಿ ಮಗುವನ್ನು ಶಾಲೆಗೆ ಬಿಡಲು ಬರುತ್ತಿದ್ದರು. ಜಿಕೆವಿಕೆ ಸಮೀಪದ ಡಬಲ್‌ ರಸ್ತೆಯಲ್ಲಿ ಬರುವಾಗ ಹಿಂದಿನಿಂದ ಐವರು ಮಹಿಳೆ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ಬಂದಿದ್ದು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಚಾಲಕ ಆದಿಲ್‌ ಮತ್ತು ಆ ಐವರು ಮಹಿಳೆಯರು, ಸೆಲ್ವಿಯಾ ಜತೆಗೆ ಜಗಳ ತೆಗೆದಿದ್ದಾರೆ. ಈ ವೇಲೆ ಹೈಡ್ರಾಮಾ ಸೃಷ್ಟಿಯಾಗಿದೆ. ಈ ನಡುವೆ ಹಿಂದಿನಿಂದ ಕಾರಿನಲ್ಲಿ ಬಂದಿರುವ ಹರಿಕೃಷ್ಣ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ.

ರಸ್ತೆಯಲ್ಲಿ ಗಲಾಟೆಯಾಗುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದು ಗಸ್ತು ಪೊಲೀಸರು, ಆಟೋ ಚಾಲಕ ಹಾಗೂ ಐವರು ಮಹಿಳೆಯರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಆ ಮಗುವಿನ ತಂದೆ ಹರಿಕೃಷ್ಣನ ಸೂಚನೆ ಮೇರೆಗೆ ಆಟೋ ರಿಕ್ಷಾದಿಂದ ಸೆಲ್ವಿಯಾ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತದ ನಾಟಕವಾಡಿ ಹೈಡ್ರಾಮಾ ಸೃಷ್ಟಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಸೇಲ್ವಿಯಾ ನೀಡಿದ ದೂರಿನ ಮೇರೆಗೆ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಮಗುವಿನೊಂದಿಗೆ ಪರಾರಿಯಾಗಿರುವ ಹರಿಕೃಷ್ಣನ ಪತ್ತೆಗಾಗಿ ಪೊಲೀಸರು ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಶೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios