ಚಿಕ್ಕಮಗಳೂರು ತಾಲೂಕಿನ ಅರೆನೂರು ಗ್ರಾಮದಲ್ಲಿ, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸಂಧ್ಯಾ ಎಂಬ ಮಹಿಳೆಯನ್ನು ಆಕೆಯ ಅತ್ತೆ ಮಗ ಜನಾರ್ಧನನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯದ ನಂತರ ಪರಾರಿಯಾಗಿದ್ದ ಆರೋಪಿಯನ್ನು ಆಲ್ದೂರು ಪೊಲೀಸರು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ಚಿಕ್ಕಮಗಳೂರು(ಡಿ.4): ಅನೈತಿಕ ಸಂಬಂಧ ವಿಚಾರಕ್ಕೆ ಅತ್ತೆ ಮಗನಿಂದಲೇ ಮಹಿಳೆಯೋರ್ವಳು ಭೀಕರ ಹತ್ಯೆಗೀಡಾದ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಗ್ರಾಮದಲ್ಲಿ ನಡೆದಿದ್ದು, ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ಜನಾರ್ಧನನನ್ನು ಆಲ್ದೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಕಳೆದೆರೆಡು ದಿನದ ಹಿಂದೆ ಅರೆನೂರು ಗ್ರಾಮದ ಸಂಧ್ಯಾ ಎಂಬ ಯುವತಿ ಹತ್ಯೆಯಾಗಿದ್ದು, ಆಕೆಯ ಕೊಲೆಗೆ ಆಕೆಯ ಅತ್ತೆ ಮಗನಾದ ಜನಾರ್ಧನನೇ ಕಾರಣ ಎಂದು ತಿಳಿದುಬಂದಿದೆ.

ಅನೈತಿಕ ಸಂಬಂಧವೇ ಕೊಲೆಗೆ ಕಾರಣ

ಸಂಧ್ಯಾ ಸುಮಾರು ನಾಲ್ಕು ವರ್ಷಗಳ ಹಿಂದೆ ತನ್ನ ಗಂಡನನ್ನು ಬಿಟ್ಟು ಅರೆನೂರು ಗ್ರಾಮದಲ್ಲಿರುವ ತವರು ಮನೆಗೆ ಬಂದು ಪೋಷಕರೊಂದಿಗೆ ವಾಸವಾಗಿದ್ದರು. ಇದೇ ಸಮಯದಲ್ಲಿ, ಸಂಧ್ಯಾ ಮತ್ತು ಆಕೆಯ ಅತ್ತೆ ಮಗನಾದ ಜನಾರ್ಧನನ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಇತ್ತೀಚೆಗೆ ಈ ಸಂಬಂಧದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ನಿರಂತರವಾಗಿ ಕಿರಿಕ್ ನಡೆಯುತ್ತಿತ್ತು ಎನ್ನಲಾಗಿದೆ.

ನಾಪತ್ತೆಯಾಗಿ ಮರಳಿದ ಮಾರನೇ ದಿನವೇ ಹತ್ಯೆ!

ಹತ್ಯೆಗೂ ಮುನ್ನ ಸಂಧ್ಯಾ ಅರೆನೂರಿನ ಮನೆಯಿಂದ ಕಾಣೆಯಾಗಿದ್ದರು. ಆಕೆಯ ನಾಪತ್ತೆ ಬಗ್ಗೆ ಪೋಷಕರು ದೂರು ಕೂಡ ದಾಖಲಿಸಿದ್ದರು. ನಾಪತ್ತೆಯಾಗಿದ್ದ ಸಂಧ್ಯಾ ಮನೆಗೆ ಹಿಂದಿರುಗಿದ್ದರು. ಆದರೆ, ಆಕೆ ಮನೆಗೆ ಬಂದ ಮಾರನೇ ದಿನವೇ ಏಕಾಏಕಿ ಎಂಟ್ರಿ ಕೊಟ್ಟ ಆರೋಪಿ ಜನಾರ್ಧನ ಹಳೆಯ ಮನಸ್ತಾಪದ ಹಿನ್ನೆಲೆಯಲ್ಲಿ ಆಕೆಯ ಮೇಲೆ ದಾಳಿ ಮಾಡಿ ಚಾಕುವಿನಿಂದ ಮನಬಂದಂತೆ ಇರಿದು ಕತ್ತು ಕುಯ್ದು ಪರಾರಿಯಾಗಿದ್ದ ಹಂತಕ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಧ್ಯಾ ಕೆಲಕಾಲ ಜೀವನ್ಮರಣ ಹೋರಾಟ ನಡೆಸಿದರೂ, ಚಾಕು ಇರಿತದಿಂದಾದ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಆರೋಪಿ ಬಂಧನ

ಈ ಕೊಲೆ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದ ಆರೋಪಿ ಜನಾರ್ಧನನನ್ನು ಆಲ್ದೂರು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.