ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಹೊನಗುಂಟಾ ಚಂದ್ರಲಾಂಬ ದೇವಾಲಯದಲ್ಲಿ ದುಷ್ಕರ್ಮಿಗಳು ದೇವಿಯ ಚಿನ್ನದ ತಾಳಿ ಮತ್ತು ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ.  ಕಳ್ಳರ ಈ ಕೃತ್ಯವು ದೇವಾಲಯದ ಸಿಸಿಟಿವಿ ಕ್ಯಾಮರಾದಲ್ಲಿ  ಸೆರೆಯಾಗಿದೆ. ಶಹಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕಲಬುರಗಿ (ಅ.25): ದೇವಸ್ಥಾನದ ಬೀಗ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ದೇವಿಯ ಮೇಲಿದ್ದ ಚಿನ್ನಾಭರಣ ದೋಚಿದ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಹೊನಗುಂಟಾ ಚಂದ್ರಲಾಂಬ ದೇವಾಲಯದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ರಾತ್ರಿ ವೇಳೆ ನಾಲ್ಕೈದು ಜನರ ಗುಂಪು ಬೀಗ ಮುರಿದು ಒಳನುಗ್ಗಿದೆ. ಚಂದ್ರಲಾಂಬಾ ದೇವಿಯ ಮೈಮೇಲಿದ್ದ 20 ಗ್ರಾಂ ಚಿನ್ನದ ತಾಳಿ ಮತ್ತು ಹುಂಡಿಯಲ್ಲಿದ್ದ 20 ಸಾವಿರ ರೂ. ನಗದು ಕಳವು ಮಾಡಿದ್ದಾರೆ ಪರಾರಿಯಾಗಿದ್ದಾರೆ.

ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ:

ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳು ಕಳ್ಳರ ಕೈಚಳಕದ ಸಂಪೂರ್ಣ ಚಿತ್ರಣವನ್ನು ಸೆರೆಹಿಡಿದಿವೆ. ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದರು. ಅವರು ಬೀಗ ಮುರಿದು ಒಳನುಗ್ಗುವುದು, ದೇವಿಯ ಆಭರಣ ಕಿತ್ತುಕೊಳ್ಳುವುದು ಮತ್ತು ಹುಂಡಿ ಒಡೆದು ಹಣ ತೆಗೆದುಕೊಳ್ಳುವುದು ಎಲ್ಲವೂ ಸೆರೆಯಾಗಿದೆ. ಈ ದೃಶ್ಯಗಳು ಪೊಲೀಸರಿಗೆ ಮಹತ್ವದ ಸಾಕ್ಷ್ಯವಾಗಲಿವೆ.

ಪ್ರಕರಣ ದಾಖಲು

ದೇವಾಲಯದ ಅರ್ಚಕರು ಬೆಳಗ್ಗೆ ದೇವಾಲಯಕ್ಕೆ ಬಂದು ಈ ದುರ್ಘಟನೆಯನ್ನು ಗಮನಿಸಿ, ತಕ್ಷಣ ಶಹಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ಕಳ್ಳರನ್ನು ಹುಡುಕುವ ಕಾರ್ಯವನ್ನು ಆರಂಭಿಸಿದ್ದಾರೆ. ಈ ಘಟನೆಯಿಂದ ಚಂದ್ರಲಾಂಬಾ ದೇವಿಯ ಭಕ್ತರು ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯರು ದೇವಾಲಯದ ಭದ್ರತೆಯನ್ನು ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ತನಿಖೆ ಮುಂದುವರಿದಿದೆ.