ಬೆಂಗಳೂರಿನ ಚನ್ನಸಂದ್ರ ಮತ್ತು ಕಸ್ತೂರಿ ನಗರದಲ್ಲಿ ಸರಣಿ ಬೈಕ್ ಕಳ್ಳತನಗಳು ನಡೆಯುತ್ತಿದ್ದು, ವಾಹನ ಸವಾರರ ನಿದ್ದೆಗೆಡಿಸಿದೆ. ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ ಸೆರೆಯಾಗಿದ್ದು, ಸಂತ್ರಸ್ತರೊಬ್ಬರು ಟ್ವೀಟ್ ಮಾಡಿದ ನಂತರ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು (ಜ.11): ಸಿಲಿಕಾನ್ ಸಿಟಿ ನಿವಾಸಿಗಳೇ ಎಚ್ಚರ! ನೀವು ಮನೆ ಹೊರಗಡೆ ಬೈಕ್ ನಿಲ್ಲಿಸಿ ನೆಮ್ಮದಿಯಿಂದ ನಿದ್ರೆಗೆ ಜಾರುವುದನ್ನೇ ಖದೀಮರು ಕಾದು ಕುಳಿತಿರುತ್ತಾರೆ. ನಗರದ ಚನ್ನಸಂದ್ರ ಮತ್ತು ಕಸ್ತೂರಿ ನಗರ ವ್ಯಾಪ್ತಿಯಲ್ಲಿ ಇಂತಹ ಕಳ್ಳತನ ಪ್ರಕರಣಗಳು ಸರಣಿಯಾಗಿ ನಡೆಯುತ್ತಿದ್ದು, ವಾಹನ ಸವಾರರ ನಿದ್ದೆಗೆಡಿಸಿದೆ.
ಪಕ್ಕ ಪ್ಲಾನ್ ಮಾಡಿ ಕಳ್ಳತನ
ಜೂನ್ 9ರಂದು ಚನ್ನಸಂದ್ರ ಮತ್ತು ಕಸ್ತೂರಿ ನಗರದಲ್ಲಿ ಈ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಬೈಕ್‌ನಲ್ಲಿ ಬರುವ ಕಳ್ಳರು ಮೊದಲು ಮನೆ ಮುಂದೆ ಒಂದು ರೌಂಡ್ ಹಾಕಿ, ಯಾರಾದರೂ ಎಚ್ಚರವಾಗಿದ್ದಾರಾ ಅಥವಾ ಸಿಸಿಟಿವಿ ಇದೆಯೇ ಎಂದು ಗಮನಿದ್ದಾರೆ. ಯಾರೂ ಇಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆಯೇ, ಕ್ಷಣಾರ್ಧದಲ್ಲಿ ಮನೆ ಮುಂದೆ ಪಾರ್ಕ್ ಮಾಡಿದ್ದ ಹೋಂಡಾ ಡಿಯೋ ಬೈಕ್ ಅನ್ನು ಕದ್ದೊಯ್ದಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರ ಕೈಚಳಕ
ಬೈಕ್ ಕಳ್ಳತನ ಮಾಡುವ ಕಳ್ಳರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಕಳ್ಳರು ಅತ್ಯಂತ ಚಾಣಾಕ್ಷತನದಿಂದ ಬೈಕ್ ಲಾಕ್ ಮುರಿದು ಪರಾರಿಯಾಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಆದರೆ, ಈ ವಿಡಿಯೋ ಸಾಕ್ಷಿ ಸಮೇತ ದೂರು ನೀಡಿದರೂ ಸಹ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ, ಕದ್ದಿರೋ ಬೈಕ್ ಹುಡುಕಿ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ
ಕಳ್ಳತನದ ಬಗ್ಗೆ ದೂರು ನೀಡಿದರೂ ಪೊಲೀಸರು ವಾಹನ ಹುಡುಕಿಕೊಡುತ್ತಿಲ್ಲ ಎಂದು ನೊಂದ ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಮೋದ್ ಎಂಬುವವರು ಸಿಸಿಟಿವಿ ದೃಶ್ಯದೊಂದಿಗೆ ಟ್ವೀಟ್ ಮಾಡಿದ ನಂತರ ಬೆಂಗಳೂರು ನಗರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಸದ್ಯ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ.
ಖದೀಮರ ಪತ್ತೆಗೆ ಶೋಧ ಕಾರ್ಯ ಆರಂಭ
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಖದೀಮರನ್ನು ಬಂಧಿಸುವುದಾಗಿ, ಕಳುವಾದ ಬೈಕ್ ಅನ್ನು ಪತ್ತೆಹಚ್ಚುವುದಾಗಿ ರಾಮಮೂರ್ತಿ ನಗರ ಪೊಲೀಸರು ಭರವಸೆ ನೀಡಿದ್ದಾರೆ.


