Bengaluru temple demolition attempt: ಬೆಂಗಳೂರಿನ ಹಲಸೂರು ಮೆಟ್ರೋ ನಿಲ್ದಾಣದ ಬಳಿಯ ಮೌನಾನಂದ ಗುರುಸ್ವಾಮಿಗಳ ಮಠವನ್ನು, ಆಸ್ತಿ ತಮ್ಮದೆಂದು ಹೇಳಿಕೊಂಡು ಅಪರಿಚಿತರ ಗುಂಪೊಂದು ಒಡೆಯಲು ಯತ್ನಿಸಿದೆ. ಭಕ್ತರ ವಿರೋಧ ಮತ್ತು ಪೊಲೀಸರ ಮಧ್ಯಪ್ರವೇಶದಿಂದ ಕಾಲ್ಕಿತ್ತ ಅಪರಿಚಿತರು.
ಬೆಂಗಳೂರು (ಅ.25): ಪ್ರಾಪರ್ಟಿ ನಮ್ಮದು ಅಂತಾ ಬೆಳ್ಳಬೆಳಗ್ಗೆ ಅಪರಿಚಿತ ವ್ಯಕ್ತಿಗಳ ಗುಂಪು ದೇವಸ್ಥಾನ ಒಡೆಯಲು ಯತ್ನಿಸಿದ ಘಟನೆ ಬೆಂಗಳೂರಿನ ಹಲಸೂರು ಮೆಟ್ರೋ ನಿಲ್ದಾಣದ ಬಳಿ ಇರುವ ಮೌನಾನಂದ ಗುರುಸ್ವಾಮಿಗಳ ಮಠದಲ್ಲಿ ನಡೆದಿದೆ.
ಈ ಘಟನೆಯಿಂದಾಗಿ ಸ್ಥಳದಲ್ಲಿ ಭಕ್ತರು ಮತ್ತು ಅಪರಿಚಿತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಇದು ನಮ್ಮ ಆಸ್ತಿ ಎಂದ ಅಪರಿಚಿತರು:
ಮಠದ ಆವರಣದಲ್ಲಿ ಪೂಜೆ ಸಿದ್ಧತೆ ನಡೆಯುತ್ತಿರುವಾಗಲೇ ಡೆಮಾಲಿಷನ್ ಮಾಡಲು ಬಂದ ಅಪರಿಚಿತರು, 'ಇದು ನಮ್ಮ ಆಸ್ತಿ, ನಾವಿದನ್ನು ಒಡೆಯುತ್ತೇವೆ ಎಂದು ಮುಂದಾಗಿದ್ದಾರೆ. ಈ ವೇಳೆ ಮಠದ ಭಕ್ತರು ವಿರೋಧಿಸಿ 'ಕೋರ್ಟ್ ಆದೇಶ ಇಲ್ಲದೆ ಒಡೆಯಲು ಸಾಧ್ಯವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲಸೂರು ಪೊಲೀಸರುಸ್ಥಳಕ್ಕೆ ಭೇಟಿ:
ಸುದ್ದಿ ಪಡೆದ ಹಲಸೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಮಧ್ಯಪ್ರವೇಶಿಸಿದರು. ಪರಿಶೀಲನೆಯಲ್ಲಿ ಮಠದ ಪ್ರಾಪರ್ಟಿ ವಿಚಾರದಲ್ಲಿ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರುವುದು ತಿಳಿದುಬಂದಿದೆ. ಕೋರ್ಟ್ ಆದೇಶ ತೋರಿಸಿ, ನಾವೇ ಪ್ರೊಟೆಕ್ಷನ್ ನೀಡುತ್ತೇವೆ ಎಂದು ಪೊಲೀಸರು ಅಪರಿಚಿತರಿಗೆ ಎಚ್ಚರಿಕೆ ನೀಡಿದರು. ಆದೇಶವಿಲ್ಲದಿದ್ದರಿಂದ ಅಪರಿಚಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಸದ್ಯ ಮಠದ ಭಕ್ತರು ಅಪರಿಚಿತರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕ ಮೂಡಿಸಿತು.


