ಮಂಗಳೂರಿನ ಎಡಪದವಿನಲ್ಲಿ, ಅಯ್ಯಪ್ಪ ಪೂಜಾ ಸ್ಥಳದ ಬಳಿ ಚುರುಮುರಿ ಅಂಗಡಿ ಹಾಕಿದ್ದ ಉಮರಬ್ಬ ಎಂಬಾತ, ಆಹಾರಕ್ಕಾಗಿ ಬಂದ ಹಸುವಿನ ಮೂತಿಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದಾನೆ. ಈ ಅಮಾನುಷ ಕೃತ್ಯಕ್ಕೆ ಸ್ಥಳೀಯರು ಹಾಗೂ ಅಯ್ಯಪ್ಪ ಭಕ್ತರಿಂದ ತೀವ್ರ ಆಕ್ರೋಶ .
ಮಂಗಳೂರು(ಜ.11): ನಗರದ ಹೊರವಲಯದ ಎಡಪದವಿನಲ್ಲಿ ಅಂಗಡಿ ಬಳಿ ಬಂತೆಂದು ಹಸುವಿನ ಮೇಲೆ ನಡೆದ ಅಮಾನುಷ ಕೃತ್ಯವೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು ಹೊರವಲಯದ ಎಡಪದವಿನ ಪೂಪಾಡಿಕಲ್ಲು ಎಂಬಲ್ಲಿ ಅಯ್ಯಪ್ಪ ಮಾಲಾಧಾರಿಗಳು ಟೆಂಟ್ ಹಾಕಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಲ್ಲಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಕಾರಣ, ವ್ಯಾಪಾರಕ್ಕಾಗಿ ಉಮರಬ್ಬ ಎಂಬಾತ ಚುರುಮುರಿ ಸ್ಟಾಲ್ ಹಾಕಿದ್ದ.
ತಿನ್ನಲು ಬಂದ ಹಸುವಿನ ಮೇಲೆ ಹಲ್ಲೆ!
ಪೂಜಾ ಸ್ಥಳದ ಬಳಿಯೇ ಇದ್ದ ಚುರುಮುರಿ ಸ್ಟಾಲ್ ಬಳಿಗೆ ಆಹಾರ ಹುಡುಕುತ್ತಾ ಹಸುವೊಂದು ಬಂದಿದೆ. ಸ್ಟಾಲ್ ಬಳಿ ಏನಾದರೂ ತಿನ್ನಲು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಬಂದ ಹಸುವನ್ನು ಕಂಡು ವ್ಯಾಪಾರಿ ಉಮರಬ್ಬ ಹಸುವನ್ನು ಅಲ್ಲಿಂದ ಓಡಿಸಲು ಕ್ರೂರವಾಗಿ ವರ್ತಿಸಿದ್ದಾನೆ.
ಚೂರಿಯಿಂದ ಮೂತಿಗೆ ತಿವಿದ ಆಸಾಮಿ!
ಹಸುವನ್ನು ಓಡಿಸುವ ಭರದಲ್ಲಿ ಚೂರಿ ಹಿಡಿದು, ಹಸುವಿನ ಮೂತಿಗೆ ಚೂರಿಯಿಂದ ಬಲವಾಗಿ ತಿವಿದಿದ್ದಾನೆ. ಚೂರಿ ಏಟಿನಿಂದಾಗಿ ಹಸುವಿನ ಮೂತಿಗೆ ಗಂಭೀರ ಗಾಯವಾಗಿದ್ದು, ರಕ್ತ ಸುರಿದು ಹಸು ನರಳಾಡಿದೆ. ಈ ಘಟನೆಯನ್ನು ಕಂಡ ಸ್ಥಳೀಯರು, ಅಯ್ಯಪ್ಪ ಭಕ್ತರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಮಾಲಾಧಾರಿಗಳಿಂದ ಹಸುವಿನ ಆರೈಕೆ
ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದ ಅಯ್ಯಪ್ಪ ಮಾಲಾಧಾರಿಗಳು ಮತ್ತು ಸ್ಥಳೀಯರು ಹಸುವಿನ ರಕ್ಷಣೆಗೆ ಧಾವಿಸಿದ್ದಾರೆ. ಈ ಸಂಬಂಧ ಉಮರಬ್ಬನ ವಿರುದ್ಧ ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಜರಂಗದಳ ಮುಖಂಡರು ಕ್ರಮಕ್ಕೆ ಆಗ್ರಹಿಸಿದ್ದಾರೆ.


