*  ಆನ್‌ಲೈನ್‌ ಆ್ಯಪಲ್ಲಿ ಬರುತ್ತಿದ್ದ ಕರೆಗಳು*  ಸ್ಥಳೀಯ ಕರೆಗಳಾಗಿ ಪರಿವರ್ತನೆ*  ಕರೆ ಸ್ವೀಕರಿಸಿದಾಗ ಸ್ಥಳೀಯ ನಂ. ಪತ್ತೆ 

ಬೆಂಗಳೂರು(ಜೂ.23): ರಾಜ್ಯದಲ್ಲಿ ಪಾಕಿಸ್ತಾನದ ಗುಪ್ತದಳದ ಅಧಿಕಾರಿಗಳು ಹೊಂದಿದ್ದಾರೆ ಎನ್ನಲಾದ ಸಂಪರ್ಕ ಕರೆಗಳ ಮೂಲ ಪತ್ತೆ ಹಚ್ಚುವುದು ಸಿಸಿಬಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಬೆಂಗಳೂರಿನಲ್ಲಿ ಪಾಕಿಸ್ತಾನ ಸೇರಿದಂತೆ ವಿದೇಶದ ಅಂತಾರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯವಾಗಿ ಪರಿವರ್ತಿಸುವ ದಂಧೆ ನಡೆಸುತ್ತಿದ್ದ ಕೇರಳ ಮೂಲದ ಶರ್ಫುದ್ದೀನ್‌ನನ್ನು ಸೇನಾ ಗುಪ್ತದಳ ಹಾಗೂ ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆದರೀಗ ರಾಜ್ಯದಲ್ಲಿರುವ ಪಾಕಿಸ್ತಾನ ಬೇಹುಗಾರಿಕೆ ಮೂಲ ಭೇದಿಸಲು ಸಿಸಿಬಿ ಹರಸಾಹಸ ಪಡುತ್ತಿದೆ.

ಪಾಕ್‌ ಗುಪ್ತಚರರಿಂದ ಕರ್ನಾಟಕಕ್ಕೆ ಫೋನ್‌ ಸಂಪರ್ಕ!

3 ವರ್ಷಗಳಿಂದ ಐಎಸ್‌ಡಿ ದಂಧೆ

ಕೇರಳದ ವಯನಾಡು ಮೂಲದ ಶರ್ಫುದ್ದೀನ್‌ 10ನೇ ತರಗತಿ ಓದಿದ್ದು, ಐಎಸ್‌ಡಿ ಕರೆಗಳ ಪರಿವರ್ತನೆಯನ್ನೇ ವೃತ್ತಿಯಾಗಿಸಿಕೊಂಡಿದ್ದ. ಗಲ್ಫ್‌ ದೇಶಗಳಲ್ಲಿ ಕೇರಳ ಮೂಲದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಕುಟುಂಬದ ಜತೆ ದೂರವಾಣಿ ಮೂಲಕ ಮಾತುಕತೆಗೆ ಅಲ್ಲಿನ ಕೇರಳಿಗರಿಗೆ ದುಬಾರಿ ಶುಲ್ಕ ಭರಿಸಬೇಕಾಗಿದೆ. ಹೀಗಾಗಿ ಗಲ್ಫ್‌ನಲ್ಲಿರುವ ಕೆಲ ವ್ಯಕ್ತಿಗಳು ಕೇರಳದ ತಮ್ಮ ಸಹಚರರ ಮೂಲಕ ಐಎಸ್‌ಡಿ ಕರೆಗಳ ಪರಿವರ್ತನೆ ಮಾಡುವುದೇ ದಂಧೆ ಮಾಡಿಕೊಂಡಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಕೇರಳದಲ್ಲಿ ಐಎಸ್‌ಡಿ ಕರೆಗಳ ಪರಿವರ್ತನೆಯೇ ದೊಡ್ಡ ಜಾಲವಾಗಿ ಬೇರೂರಿದೆ. ಇತ್ತೀಚೆಗೆ ಈ ಜಾಲದ ವಿರುದ್ಧ ತನಿಖೆಗೆ ವಿಶೇಷ ಪೊಲೀಸ್‌ ತಂಡವನ್ನು ಅಲ್ಲಿನ ಸರ್ಕಾರ ರಚಿಸಿದೆ. ಸ್ಥಳೀಯ ಪೊಲೀಸರ ಕಾರ್ಯಾಚರಣೆ ತೀವ್ರವಾದ ಬಳಿಕ ಬಂಧನ ಭೀತಿಯಿಂದ ಕೇರಳ ತೊರೆದು ಬೆಂಗಳೂರಿಗೆ ಬಂದು ಕೆಲವರು ಇಲ್ಲಿ ಐಎಸ್‌ಡಿ ಪರಿವರ್ತನೆ ದಂಧೆ ಮುಂದುವರೆಸಿದ್ದಾರೆ. ಅಂತೆಯೇ ಶರ್ಫುದ್ದೀನ್‌ ಸಹ ನಗರಕ್ಕೆ ಬಂದಿದ್ದ. ಇದೇ ರೀತಿಯ ಪ್ರಕರಣದಲ್ಲಿ ಆತನ ಸೋದರ ಸಂಬಂಧಿಯನ್ನು ಕೇರಳ ಪೊಲೀಸರು ಹುಡುಕುತ್ತಿದ್ದಾರೆ. ಶರ್ಫುದ್ದೀನ್‌ ಕೆಲ ಸ್ನೇಹಿತರು ಹಾಗೂ ಸಂಬಂಧಿಕರು ಐಎಸ್‌ಡಿ ಕರೆಗಳ ಪರಿವರ್ತನೆ ಜಾಲದಲ್ಲಿ ಸಕ್ರಿಯವಾಗಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime News: ಪಾಕಿಸ್ತಾನಕ್ಕೆ ಸೇನಾ ಮಾಹಿತಿ ರವಾನೆ: ಕರೆ ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್‌ ಬಂಧನ

ನಾಲ್ಕು ವರ್ಷಗಳ ಹಿಂದೆ ದುಬೈಗೆ ಹೋಗಿದ್ದ ಶರ್ಫುದ್ದೀನ್‌ಗೆ ಅಲ್ಲಿ ಐಎಸ್‌ಡಿ ಕರೆಗಳ ಪರಿವರ್ತಿಸುವ ಜಾಲದ ಸಂಪರ್ಕಕ್ಕೆ ಸಿಕ್ಕಿದೆ. ದುಬೈನಲ್ಲಿ ತರಬೇತಿ ಪಡೆದು ಕೇರಳಕ್ಕೆ ಮರಳಿದ ಶರ್ಫುದ್ದೀನ್‌, ತನ್ನ ಸಂಬಂಧಿ ಜತೆ ಸೇರಿ ದಂಧೆ ನಡೆಸುತ್ತಿದ್ದ. ಆದರೆ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾದ ಬಳಿಕ ಕೇರಳ ತೊರೆದು ಬೆಂಗಳೂರಿಗೆ ಬಂದು ಶರ್ಫುದ್ದೀನ್‌ ಕೃತ್ಯ ಮುಂದುವರೆಸಿದ್ದ. ಕೊಲ್ಲಿ ರಾಷ್ಟ್ರಗಳ ಕರೆಗಳನ್ನು ಪರಿವರ್ತಿಸಿದರೆ ನಿಮಿಷಕ್ಕೆ ಒಂದೂವರೆ ಪೈಸೆ ಸಿಗುತ್ತಿತ್ತು. ಅದರಲ್ಲಿ ಮೂವರಿಗೆ ಹಂಚಿಕೆಯಾಗುತ್ತಿತ್ತು. ಆನ್‌ಲೈನ್‌ ಆ್ಯಪ್‌ಗಳ ಮೂಲಕವೇ ಕರೆಗಳು ಬರುತ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಆನ್‌ಲೈನ್‌ ಕರೆಗಳ ಮೂಲ ಪತ್ತೆ ಕಷ್ಟ

ಮೂರು ವರ್ಷಗಳಲ್ಲಿ ಆನ್‌ಲೈನ್‌ ಆ್ಯಪ್‌ ಮೂಲಕ ಬಂದ ಐಎಸ್‌ಡಿ ಕರೆಗಳನ್ನು ಶರ್ಫುದ್ದೀನ್‌ ಸ್ಥಳೀಯ ಕರೆಗಳಾಗಿ ಪರಿವರ್ತಿಸಿದ್ದಾನೆ. ಹೀಗಾಗಿ ನೆಟ್‌ ಕಾಲ್‌ಗಳಾಗಿರುವ ಕಾರಣ ಕರೆ ಸ್ವೀಕರಿಸಿದ ಸ್ಥಳೀಯ ನಂಬರ್‌ ಮಾತ್ರ ಸಿಗುತ್ತದೆ. ಆದರೆ ಐಎಸ್‌ಡಿ ಕರೆಯ ಸಿಗುವುದಿಲ್ಲ. ಇದರಿಂದ ಪಾಕಿಸ್ತಾನದ ಬೇಹುಗಾರರ ಕರೆ ಮೂಲ ಸಹ ಸಿಗುತ್ತಿಲ್ಲ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.