ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಸೇರಿದಂತೆ ಯಾವುದೇ ಪ್ರಕರಣ ಕಂಡುಬಂದರೆ ಪೊಲೀಸ್‌ ಸಹಾಯವಾಣಿ ನಂಬರ್‌ 112ಕ್ಕೆ ಕರೆ ಮಾಡವಂತೆ ಡಿಸಿಪಿ ದಿನೇಶ್ ಕುಮಾರ ತಿಳಿಸಿದರು

ಮಂಗಳೂರು (ಜು.26) : ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಸೇರಿದಂತೆ ಯಾವುದೇ ಪ್ರಕರಣ ಕಂಡುಬಂದರೆ ಪೊಲೀಸ್‌ ಸಹಾಯವಾಣಿ ನಂಬರ್‌ 112ಕ್ಕೆ ಕರೆ ಮಾಡಬಹುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಡಿಸಿಪಿ ದಿನೇಶ್‌ ಕುಮಾರ್‌ ಹೇಳಿದ್ದಾರೆ. ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ಕಂಕನಾಡಿ(Kankanadi) ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರಾತ್ರಿ ಗಸ್ತು ಇಲ್ಲದ ವೇಳೆ ಗಾಂಜಾ(Marijuana) ಸೇವನೆ ಮತ್ತಿತರ ಪ್ರಕರಣಗಳು ನಡೆಯುತ್ತಿವೆ. ಇದನ್ನು ಪೊಲೀಸ್‌ ಇಲಾಖೆ(Depertment of Police) ಗಂಭೀರ ಪರಿಗಣಿಸಬೇಕು ಎಂದು ದಲಿತ ಮುಖಂಡ ಅನಿಲ್‌ ಹೇಳಿದರು. ಇದಕ್ಕೆ ಉತ್ತರಿಸಿದ ಡಿಸಿಪಿ ದಿನೇಶ್‌ ಕುಮಾರ್‌(DCP Dinesh kumar), ಪೊಲೀಸ್‌ ಕಾಯ್ದೆ ಕಲಂ 279ಬಿ) ಪ್ರಕಾರ ಗಾಂಜಾ ಸೇವನೆ ಪತ್ತೆಯಾದರೆ 10 ಸಾವಿರ ರು. ದಂಡ ಶುಲ್ಕ ಕೂಡ ಪಾವತಿಸಬೇಕಾಗಿದೆ. ನಗರ ಪ್ರದೇಶದಲ್ಲಿ ಗಾಂಜಾ ಸೇರಿದಂತೆ ಯಾವುದೇ ಚಟುವಟಿಕೆ ಕಂಡುಬಂದರೆ ಸಹಾಯವಾಣಿಗೆ ಕರೆ ಮಾಡಬಹುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿರಿಸಲಾಗುವುದು ಎಂದರು.

ಮಂಗಳೂರು ಉಗ್ರ ಗೋಡೆ ಬರಹ ಪ್ರಕರಣದ ಆರೋಪಿಗೆ ವಿದೇಶಿ ಹಣ?

ದೂರುದಾರರನ್ನು ಸತಾಯಿಸಬೇಡಿ:

ಠಾಣೆಗೆ ದೂರು ನೀಡಲು ಆಗಮಿಸುವವರನ್ನು ವಿನಾ ಕಾರಣ ಸತಾಯಿಸಬಾರದು. ಅವರನ್ನು ಕುಳ್ಳಿರಿಸಿ, ಅವಲ ಅಹವಾಲು ಕೇಳಿ ದೂರು ಸ್ವೀಕರಿಸಿ ತನಿಖೆ ಕೈಗೊಳ್ಳಬೇಕು. ದೂರು ನೀಡಲು ಬಂದವರಿಗೆ ಸ್ಪಂದಿಸದೇ ಇದ್ದರೆ ಅಂತಹ ಠಾಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ದಿನೇಶ್‌ ಕುಮಾರ್‌ ಎಚ್ಚರಿಕೆ ನೀಡಿದರು. ಈ ಕುರಿತು ದಲಿತ ಮುಖಂಡ ಚಂದ್ರು ಪ್ರಸ್ತಾಪಿಸಿದ್ದರು.

ಕರ್ತವ್ಯ ವೇಳೆ ಟ್ರಾಫಿಕ್‌ ಪೊಲೀಸರು ಅತಿಯಾಗಿ ಮೊಬೈಲ್‌ ಬಳಕೆ ಮಾಡುವ ಬಗ್ಗೆ ಸದಾಶಿವ ಎಂಬವರು ಪ್ರಸ್ತಾಪಿಸಿದರು. ಈ ರೀತಿ ಕರ್ತವ್ಯ ವೇಳೆ ಮೊಬೈಲ್‌ ಬಳಕೆ ಮಾಡುವ ಪೊಲೀಸ್‌ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಂತಹವರ ಮೊಬೈಲ್‌ನ್ನು ಸ್ವಾಧೀನ ಪಡೆದು ಠಾಣೆಯಲ್ಲಿ ಠೇವಣಿ ಇರಿಸುವಂತೆ ಡಿಸಿಪಿ ದಿನೇಶ್‌ ಕುಮಾರ್‌ ಸೂಚನೆ ನೀಡಿದರು.

ಕಾವೂರಿನಲ್ಲಿ ಬಿಲ್ಲವ ಮಹಿಳೆಯೊಬ್ಬರು ಎಸ್‌ಸಿ ಎಸ್‌ಟಿ ಮೀಸಲಾತಿಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಕೇಂದ್ರ ಸ್ವಾಮ್ಯದ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿದ್ದಾರೆ. ಈ ವಿಚಾರ ದಲಿತ ಸಂಘಟನೆಗಳಿಗೆ ಗೊತ್ತಾದ ಬಳಿಕ 20 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಈಗ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಮಹಿಳೆ ವಿರುದ್ಧ ಕೆಲಸ ವಂಚನೆ ದೂರು ದಾಖಲಿಸಿ ಆಕೆಯ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳುವಂತೆ ಮುಖಂಡ ಸದಾಶಿವ ಆಗ್ರಹಿಸಿದರು.

'ಪ್ರವಾದಿ ನಿಂದಕರಿಗೆ ಶಿರಚ್ಛೇದನವೇ ಶಿಕ್ಷೆ': ಮಗನ ಸಾವಿನ ಗಂಟೆಗಳ ಮುಂಚೆ ತಂದೆ..

ಅಂಬೇಡ್ಕರ್‌ ವೃತ್ತ ಯಾವಾಗ?:

ಜ್ಯೋತಿ ಟಾಕೀಸು ಬಳಿಯ ವೃತ್ತಕ್ಕೆ ಅಂಬೇಡ್ಕರ್‌ ಸರ್ಕಲ್‌ ಹೆಸರು ಇರಿಸುವ ಬೇಡಿಕೆ ಇನ್ನೂ ಈಡೇರಿಲ್ಲ. ಪ್ರತಿ ಬಾರಿ ಸಭೆಯಲ್ಲೂ ಈ ಬಗ್ಗೆ ಆಗ್ರಹಿಸಲಾಗುತ್ತಿದೆ. ಈ ವೃತ್ತ ನಿರ್ಮಾಣಕ್ಕೆ 98 ಲಕ್ಷ ರು. ಅನುದಾನ ಮಂಜೂರಾಗಿದೆ. 2020ರಲ್ಲಿ ಎಲ್ಲ ಬಸ್‌ಗಳಿಗೆ ಅಂಬೇಡ್ಕರ್‌ ವೃತ್ತ ಎಂಬ ಸ್ಟಿಕ್ಕರ್‌ ಹಾಕಿ ಅಭಿಯಾನ ಕೈಗೊಳ್ಳಲಾಗಿತ್ತು. ಆದರೆ ಈಗ ಅಂಬೇಡ್ಕರ್‌ ವೃತ್ತ ಹೊರತು ಪಡಿಸಿ ಬೇರೆಲ್ಲ ವೃತ್ತಗಳ ರಚನೆ ಮಾಡಲಾಗಿದೆ. ಈ ಮೂಲಕ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಅವಮಾನ ಎಸಗಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ಡಿಸಿಪಿ ದಿನೇಶ್‌ ಕುಮಾರ್‌ ಉತ್ತರಿಸಿ, ಮಹಾನಗರ ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದು, ಶೀಘ್ರವೇ ಅಂಬೇಡ್ಕರ್‌ ವೃತ್ತ ಕಾಮಗಾರಿ ಕೈಗೊಳ್ಳಲಿದೆ ಎಂದರು.

ಡಿಸಿಪಿ ಕಾನೂನು ಸುವ್ಯವಸ್ಥೆ ವಿಭಾಗ ಡಿಸಿಪಿ ಅನ್ಶು ಕುಮಾರ್‌ ಇದ್ದರು.