ಮಂಗಳೂರು(ಡಿ.11):  ಮಂಗಳೂರಿನಲ್ಲಿ ಉಗ್ರ ಗೋಡೆ ಬರಹ ಪ್ರಕರಣದಲ್ಲಿ ಆರೋಪಿಗಳಿಗೆ ವಿದೇಶದಿಂದ ಹಣ ಬಂದಿರುವ ಬಗ್ಗೆ ಪೊಲೀಸರಿಗೆ ಸುಳಿವು ಲಭಿಸಿದೆ. ಈ ಹಣಕಾಸು ನೆರವಿನ ಮೂಲ ಯಾವುದು? ಪ್ರಚೋದನೆ ನೀಡಿದವರು ಯಾರು ಎನ್ನುವ ಕುರಿತು ಇದೀಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿ ತೀರ್ಥಹಳ್ಳಿಯ ಮೊಹಮ್ಮದ್‌ ಶಾರೀಕ್‌(22), ಮಾಝ್‌ ಮುನೀರ್‌(21) ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಈ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಪ್ರಮುಖ ಆರೋಪಿ ಶಾರೀಕ್‌ಗೆ ವಿದೇಶಿ ಉಗ್ರ ಸಂಘಟನೆಗಳ ಜೊತೆ ನಂಟು ಇರುವುದರಿಂದ ಹಣಕಾಸು ನೆರವನ್ನು ಯಾರು, ಯಾಕಾಗಿ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ. ಶಾರೀಕ್‌ಗೆ ವಿದೇಶಿ ಉಗ್ರ ಸಂಘಟನೆಗಳ ನಂಟು ಪ್ರಾಥಮಿಕ ವಿಚಾರಣೆಯಿಂದಲೇ ತಿಳಿದುಬಂದಿತ್ತು. ಆತನಿಗೆ ವಿದೇಶದಿಂದ ವ್ಯಕ್ತಿಯೊಬ್ಬ ಕರೆ ಮಾಡಿರುವ ವಿಚಾರವೂ ತನಿಖಾ ತಂಡದ ಅರಿವಿಗೆ ಬಂದಿತ್ತು.

ಮಂಗಳೂರಿನ ಗೋಡೆ ಬರಹ ಕೇಸ್ : ತೀರ್ಥಹಳ್ಳಿ ಯುವಕ ಅರೆಸ್ಟ್

ನಿಷೇಧಿತ ಸಂಘಟನೆ ನಂಟಿನ ತನಿಖೆ:

ಇದೇ ವೇಳೆ ಉಗ್ರ ಗೋಡೆ ಬರಹ ಪ್ರಕರಣದಲ್ಲಿ ನಿಷೇಧಿತ ಮತೀಯ ಸಂಘಟನೆಯ ನಂಟಿದೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ. ಎರಡು ವರ್ಷದ ಹಿಂದೆ ಮಂಗಳೂರಿನಲ್ಲಿ ನಿಷೇಧಿತ ಸಂಘಟನೆ ಸದಸ್ಯರು ದಿಢೀರ್‌ ಪ್ರತಿಭಟನೆ ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್‌ ನಡೆಸಿ ಚದುರಿಸಿದ್ದರು. ಬಳಿಕ ಇದಕ್ಕೆ ಪ್ರತಿಕಾರ ಎಂಬಂತೆ ಲೇಡಿಹಿಲ್‌ ಬಳಿ ಇದೇ ಸಂಘಟನೆಯಿಂದ ಎಎಸ್‌ಐ ಕೊಲೆ ಯತ್ನ ನಡೆದಿತ್ತು. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ಉಗ್ರ ಗೋಡೆ ಬರಹದ ಆರೋಪಿಗಳಿಗೂ ಈ ಸಂಘಟನೆಗೂ ನಂಟು ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.