ಬೆಂಗಳೂರು: ಹಳೇ ದ್ವೇಷಕ್ಕೆ ಆಟೋ ಚಾಲಕನ ಬರ್ಬರ ಹತ್ಯೆ
ಹಳೇ ದ್ವೇಷದ ಹಿನ್ನೆಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ರೌಡಿ ಶೀಟರ್ ಒಬ್ಬ ಆಟೋ ಚಾಲಕನನ್ನು ಹತ್ಯೆಗೈದಿರುವ ಘಟನೆ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗಶೆಟ್ಟಿಹಳ್ಳಿ ನಿವಾಸಿ ಮೂರ್ತಿ (41) ಕೊಲೆಯಾದ ಆಟೋ ಚಾಲಕ.
ಬೆಂಗಳೂರು (ಮೇ.04): ಹಳೇ ದ್ವೇಷದ ಹಿನ್ನೆಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ರೌಡಿ ಶೀಟರ್ ಒಬ್ಬ ಆಟೋ ಚಾಲಕನನ್ನು ಹತ್ಯೆಗೈದಿರುವ ಘಟನೆ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗಶೆಟ್ಟಿಹಳ್ಳಿ ನಿವಾಸಿ ಮೂರ್ತಿ (41) ಕೊಲೆಯಾದ ಆಟೋ ಚಾಲಕ. ಗುರುವಾರ ರಾತ್ರಿ ಸುಮಾರು 11 ಗಂಟೆಗೆ ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ.
ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದ ಬಳಿ ಆಟೋ ಚಾಲಕ ಮೂರ್ತಿ ಹಾಗೂ ಸಚಿನ್ ಎಂಬಾತ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಕೆಲ ಸಮಯದ ಬಳಿಕ ಅದು ವಿಕೋಪಕ್ಕೆ ತಿರುಗಿ ಮೂರ್ತಿ, ಸಚಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕುಪಿತನಾದ ಸಚಿನ್ ತನ್ನ ಸ್ನೇಹಿತ ರೌಡಿ ಶರಣಪ್ಪನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ.
ಈ ಹಿಂದೆ ಯಾವುದೋ ವಿಚಾರಕ್ಕೆ ರೌಡಿ ಶರಣಪ್ಪ ಮತ್ತು ಆಟೋ ಚಾಲಕ ಮೂರ್ತಿ ನಡುವೆ ಗಲಾಟೆಯಾಗಿದ್ದು, ಪರಸ್ವರ ದ್ವೇಷ ಕಾರುತ್ತಿದ್ದರು. ಸಮಯಕ್ಕಾಗಿ ಎದುರು ನೋಡುತ್ತಿದ್ದ ರೌಡಿ ಶರಣಪ್ಪ, ಮೂರ್ತಿಯನ್ನು ನೋಡಿದ ತಕ್ಷಣ ಮಾರಕಾಸ್ತ್ರ ತೆಗೆದು ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ಈ ವೇಳೆ ತೀವ್ರ ಗಾಯವಾಗಿ ಮೂರ್ತಿ ಕುಸಿದು ಬಿದ್ದಿದ್ದಾನೆ. ಬಳಿಕ ರೌಡಿ ಶರಣಪ್ಪ ಮತ್ತು ಸಚಿನ್ ಸ್ಥಳದಿಂದ ಪರಾರಿಯಾಗಿದ್ದಾರೆ.
400 ರೇಪ್: ರಾಹುಲ್ ಗಾಂಧಿ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ
ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಮೂರ್ತಿಯನ್ನು ತಕ್ಷಣ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮೂರ್ತಿ ಮೃತಪಟ್ಟಿದ್ದಾರೆ. ಸದ್ಯ ಸಚಿನ್ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ರೌಡಿಶೀಟರ್ ಶರಣಪ್ಪನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.