ಗ್ಯಾಸ್ ಸಿಲಿಂಡರ್ ಲಾರಿಗೆ ಬೈಕ್ ಡಿಕ್ಕಿ, ಸವಾರ ಸಾವು
ರಸ್ತೆ ಬದಿ ನಿಲುಗಡೆ ಮಾಡಿದ ಗ್ಯಾಸ್ ಸಿಲಿಂಡರ್ ಲಾರಿಗೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಸವಾರ ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಜ.23): ರಸ್ತೆ ಬದಿ ನಿಲುಗಡೆ ಮಾಡಿದ ಗ್ಯಾಸ್ ಸಿಲಿಂಡರ್ ಲಾರಿಗೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಸವಾರ ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆ ಹದನೂರು ಗ್ರಾಮದ ಹೊನ್ನಪ್ಪ (26) ಮೃತ ದುರ್ದೈವಿ. ನಗರದ ಕಲ್ಕೆರೆಯಲ್ಲಿ ನೆಲೆಸಿದ್ದ ಹೊನ್ನಪ್ಪ ಗಾರೆ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದರು. ಭಾನುವಾರ ರಾತ್ರಿ 9.20ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಕೆ.ಆರ್.ಪುರಂ ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ಹೊರಮಾವು ಅಗರ ಲೇಕ್ ಮುಖ್ಯರಸ್ತೆಯ ಒಂದನೇ ಅಡ್ಡರಸ್ತೆ ಗಣಪತಿ ಚೈತನ್ಯ ಲೇಔಟ್‌ನ ಅಶ್ವತಕಟ್ಟೆಬಳಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃದ್ಧನನ್ನು 8 ಕಿ.ಮೀ. ಹೊತ್ತೊಯ್ದು ಕೊಂದ ಕಾರು: ಚಾಲಕ ಪರಾರಿ, ಕಾರು ವಶಕ್ಕೆ..!
ಗ್ಯಾಸ್ ಸಿಲಿಂಡರ್ ಲಾರಿಯ ಚಾಲಕ ಪಾರ್ಕಿಂಗ್ ಲೈಟ್ ಹಾಕದೆ ರಸ್ತೆ ಬದಿ ಲಾರಿ ನಿಲುಗಡೆ ಮಾಡಿದ್ದ. ಈ ವೇಳೆ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ಹೊನ್ನಪ್ಪ ಲಾರಿಯನ್ನು ಗಮನಿಸದೆ ಏಕಾಏಕಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಹೊನ್ನಪ್ಪನಿಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿತ್ತು. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ಪರೀಕ್ಷಿಸಿದ ವೈದ್ಯರು ಹೊನ್ನಪ್ಪ ಮೃತಪಟ್ಟಿರುವುದಾಗಿ ದೃಢಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru: ಕಾಲೇಜಿನ ಲೇಡಿಸ್ ಟಾಯ್ಲೆಟ್‌ಗೆ ನುಗ್ಗಿದ್ದ ಆರೋಪಿ ಬಂಧನ
ಲಾರಿ ಚಾಲಕ ಪಾರ್ಕಿಂಗ್ ಲೈಟ್ ಹಾಕದೆ ರಸ್ತೆ ಬದಿ ಲಾರಿ ನಿಲುಗಡೆ ಮಾಡಿದ್ದು ಹಾಗೂ ದ್ವಿಚಕ್ರ ವಾಹನ ಸವಾರ ಹೊನ್ನಪ್ಪ ಅತಿವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.