ಬೆಂಗಳೂರಿನಲ್ಲಿ ಮಹಿಳಾ ವೈದ್ಯೆಯೊಬ್ಬರು ಕಳೆದ ಮೂರು ತಿಂಗಳಿಂದ ಸೈಕೋ ವ್ಯಕ್ತಿಯೊಬ್ಬನಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ರಾತ್ರಿ ವೇಳೆ ಮನೆ ಬಳಿ, ವಿಶೇಷವಾಗಿ ಬೆಡ್‌ರೂಂ ಬಳಿ ಬಂದು ದಿಟ್ಟಿಸಿ ನೋಡುವ ಈತನ ಕಾಟದಿಂದ ಬೇಸತ್ತು ವೈದ್ಯೆ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ
ಬೆಂಗಳೂರು(ಡಿ.14): ದೇಶದ ಟೆಕ್ ಕ್ಯಾಪಿಟಲ್ ಎನಿಸಿಕೊಂಡಿರುವ ಬೆಂಗಳೂರು ನಗರದಲ್ಲಿ ಮಹಿಳೆರಿಗೆ ಸುರಕ್ಷತೆ ಇಲ್ಲದಂತಾಗಿದೆ. ಬೆಳಗಾದರೆ ಪುಂಡರ ಕಾಟ, ಕತ್ತಲಾದರೆ ಸೈಕೋಗಳ ಕಾಟ. ರಾತ್ರಿ ವೇಳೆ ಮಹಿಳಾ ವೈದ್ಯೆಯೊಬ್ಬರ ಮನೆ ಬಳಿ ಸೈಕೋ ವ್ಯಕ್ತಿಯೊಬ್ಬ ಪದೇ ಪದೇ ಪ್ರತ್ಯಕ್ಷನಾಗಿ ಕಳೆದ ಮೂರು ತಿಂಗಳಿಂದ ಭಯಾನಕ ಮಾನಸಿಕ ಕಿರುಕುಳ ನೀಡುತ್ತಿರುವ ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯೆಯು ಆತನ ವಿಚಿತ್ರ ಕಾಟದಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದಾರೆ.
ರಾತ್ರಿಯಾದರೆ ಸಾಕು... ಬೆಡ್‌ರೂಂ ಬಳಿ ಪ್ರತ್ಯಕ್ಷ!
ನಗರದ ನಿವಾಸಿಯಾಗಿರುವ ವೈದ್ಯೆಯೊಬ್ಬರು ಕಳೆದ ಮೂರು ತಿಂಗಳಿಂದ ಅಪರಿಚಿತ ವ್ಯಕ್ತಿಯೊಬ್ಬನಿಂದ ವಿಚಿತ್ರ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಈ ಸೈಕೋ ರಾತ್ರಿಯಾದ ತಕ್ಷಣ ಮನೆ ಗೇಟ್ ಮುಂದೆ ಬಂದು ಪಾಗಲ್ ಪ್ರೇಮಿಯಂತೆ ನಿಲ್ಲುತ್ತಿದ್ದಾನಂತೆ. ಇನ್ನು ಗಾಬರಿ ಹುಟ್ಟಿಸುವಂತದ್ದೇನೆಂದರೆ ಸೈಕೋ ರಾತ್ರಿ ಸಮಯದಲ್ಲಿ ನೇರವಾಗಿ ವೈದ್ಯೆಯ ಬೆಡ್‌ರೂಂ ಬಳಿ ಪ್ರತ್ಯಕ್ಷನಾಗುತ್ತಾನಂತೆ. ಮಲಗಿರುವಾಗ ಇಣುಕಿ ನೋಡಲು ಯತ್ನಿಸುವುದು, ದಿಟ್ಟಿಸಿ ನೋಡುತ್ತಾ ನಿಲ್ಲುವುದು ಇವನ ಕೃತ್ಯವಾಗಿದೆ ಎಂದು ವೈದ್ಯೆ ದೂರಿನಲ್ಲಿ ತಿಳಿಸಿದ್ದಾರೆ.
ಮಾತನಾಡೋಲ್ಲ, ಸುಮ್ಮನೆ ದಿಟ್ಟಿಸುತ್ತಾನೆ!
ವೈದ್ಯೆ ಅವನನ್ನು ಪ್ರಶ್ನಿಸಿದರೆ, ಯಾವುದೇ ಕಾರಣಕ್ಕೂ ಮಾತನಾಡೋಲ್ಲ, ಕೇವಲ ದಿಟ್ಟಿಸಿ ನೋಡುತ್ತಾ ನಿಲ್ಲುತ್ತಾನೆ. ಈ ವಿಚಿತ್ರ ಮತ್ತು ಭಯಾನಕ ವರ್ತನೆಯಿಂದಾಗಿ ವೈದ್ಯೆ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಮಾನಸಿಕ ಯಾತನೆ ಅನುಭವಿಸುತ್ತಿದ್ದಾರೆ.
ಸೈಕೋ ಕಾಟ ವಿಪರೀತವಾದ ಹಿನ್ನೆಲೆಯಲ್ಲಿ ವೈದ್ಯೆ ತಕ್ಷಣವೇ 112 ತುರ್ತು ಸೇವೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಆದರೆ ಪೊಲೀಸರು ಬರುತ್ತಿದ್ದಂತೆಯೇ ಆ ಅಪರಿಚಿತ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ವೈದ್ಯೆಯ ದೂರಿನ ಮೇರೆಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಸೈಕೋ ವ್ಯಕ್ತಿಯ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.


