ದೇವಸ್ಥಾನದ ಅನ್ನದಾನಕ್ಕೆ ಸಹಾಯ ಕೇಳುವ ನೆಪದಲ್ಲಿ ಬಂದ ಇಬ್ಬರು ನಕಲಿ ಸ್ವಾಮಿಗಳು, ಮಾಟ ಮಂತ್ರದ ಪರಿಹಾರದ ನಾಟಕವಾಡಿ ಮಲ್ಲೇಶ್ವರಂನ ಮಹಿಳೆಗೆ 48 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಗೋಧಿ ಹಿಟ್ಟಿನಲ್ಲಿ ಚಿನ್ನ ಮುಚ್ಚಿಟ್ಟು, 38 ದಿನಗಳ ಕಾಲ ಪೂಜೆ ಮಾಡುವಂತೆ ನಂಬಿಸಿ ವಂಚಿಸಿದ್ದಾರೆ.

ಬೆಂಗಳೂರು(ಡಿ.14): ದೇವಸ್ಥಾನದ ಅನ್ನದಾನಕ್ಕೆ ಸಹಾಯ ಕೇಳುವ ನೆಪದಲ್ಲಿ ಬಂದಿದ್ದ ಇಬ್ಬರು ನಕಲಿ ಸ್ವಾಮಿಗಳು, ಮಾಟ ಮಂತ್ರದ ಪರಿಹಾರದ ನಾಟಕವಾಡಿ ಮಲ್ಲೇಶ್ವರಂನ ಮಹಿಳೆಯೊಬ್ಬರಿಂದ ಬರೋಬ್ಬರಿ 48 ಗ್ರಾಂ ಚಿನ್ನಾಭರಣ ದೋಚಿರುವ ಘಟನೆ ಈಸ್ಟ್ ಪಾರ್ಕ್ ರಸ್ತೆಯಲ್ಲಿ ನಡೆದಿದೆ.

ನಿಮ್ಮ ಗಂಡನಿಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ:

ದೇವಸ್ಥಾನದ ಅನ್ನದಾನ ಕಾರ್ಯಕ್ಕೆ ಸಹಾಯ ಕೋರುತ್ತಾ ಇಬ್ಬರು ವ್ಯಕ್ತಿಗಳು ಮಲ್ಲೇಶ್ವರಂನ ಈಸ್ಟ್ ಪಾರ್ಕ್ ರಸ್ತೆಯ ನಿವಾಸಿಯೊಬ್ಬರ ಮನೆಗೆ ಬಂದಿದ್ದಾರೆ. ಮಹಿಳೆ ಅವರಿಗೆ 40 ರೂಪಾಯಿ ಸಹಾಯ ಮಾಡಿದ್ದಾರೆ.

ಇದಾದ ಬಳಿಕ, ಆಸಾಮಿಗಳು, 'ನಿಮ್ಮ ಗಂಡನಿಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ, ಇಬ್ಬರು ಮಹಿಳೆಯರಿಂದ ನಿಮ್ಮ ಕುಟುಂಬಕ್ಕೆ ತೊಂದರೆಯಿದೆ' ಎಂದು ಸುಳ್ಳು ಕಥೆ ಕಟ್ಟಿ ಮಹಿಳೆಯನ್ನು ನಂಬಿಸಿದ್ದಾರೆ. ಕುಟುಂಬದ ಸಮಸ್ಯೆಗೆ ತಾವೇ ಪರಿಹಾರ ಮಾಡುವುದಾಗಿ ನಂಬಿಸಿ, ಮನೆಯಲ್ಲಿರುವ ಎಲ್ಲ ಚಿನ್ನಾಭರಣಗಳನ್ನು ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ.

48 ಗ್ರಾಂ ಚಿನ್ನಾಭರಣ ದೋಚಿದ ಕಳ್ಳಸ್ವಾಮಿಗಳು

ಮಹಿಳೆ ತಂದ 48 ಗ್ರಾಂ ಚಿನ್ನಾಭರಣಗಳನ್ನು ಪಡೆದ ನಕಲಿ ಸ್ವಾಮಿಗಳು, ಗೋಧಿ ಹಿಟ್ಟನ್ನು ತರಿಸಿ ಅದರಿಂದ ಹುಂಡೆ ಮಾಡಿ ಚಿನ್ನವನ್ನು ಅದರೊಳಗೆ ಇಟ್ಟಿದ್ದಾರೆ. ಪರಿಹಾರ ಕ್ರಿಯೆಯ ಭಾಗವಾಗಿ, ಚಿನ್ನ ತುಂಬಿದ ಗೋಧಿ ಹಿಟ್ಟಿನ ಪಾತ್ರೆಯನ್ನು ಮಹಿಳೆಗೆ ಕೊಟ್ಟು, ಅದನ್ನು 38 ದಿನಗಳ ಕಾಲ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುವಂತೆ ಮತ್ತು ಅಲ್ಲಿಯವರೆಗೆ ಪಾತ್ರೆಯನ್ನು ತೆಗೆಯದಂತೆ ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ. ಸಲಹೆ ನೀಡಿದ ಬಳಿಕ ಇಬ್ಬರು ಆಸಾಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಇತ್ತ ಅನುಮಾನಗೊಂಡ ಮಹಿಳೆ ಸುಮಾರು ಎರಡು ಗಂಟೆಗಳ ಬಳಿಕ ಪಾತ್ರೆಯನ್ನು ತೆಗೆದು ನೋಡಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಕಂಡುಬಂದಿದೆ. ತಕ್ಷಣವೇ ಮೋಸ ಹೋಗಿರುವುದನ್ನು ಅರಿತ ಮಹಿಳೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ದೂರು ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಪೊಲೀಸರು, ಮಾಟ ಮಂತ್ರದ ನೆಪದಲ್ಲಿ ವಂಚನೆ ಮಾಡಿದ ಇಬ್ಬರು ಕಿಡಿಗೇಡಿಗಳಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.