ಜೈಲಿನಲ್ಲಿ ಇದ್ದುಕೊಂಡೇ ಲಷ್ಕರ್‌ ಇ-ತೋಯ್ಬಾ ಉಗ್ರ ಸಂಘಟನೆ ಬಲವರ್ಧನೆಗೆ ಹಣ ಸಂಗ್ರಹ, ಸದಸ್ಯರ ನೇಮಕ ಆರೋಪ

ಬೆಂಗಳೂರು(ಮಾ.04):  ಜೈಲಿನಲ್ಲಿ ಇದ್ದುಕೊಂಡೇ ಲಷ್ಕರ್‌ ಇ-ತೋಯ್ಬಾ ಉಗ್ರ ಸಂಘಟನೆ ಬಲವರ್ಧನೆಗೆ ಹಣ ಸಂಗ್ರಹ ಮತ್ತು ಸದಸ್ಯರನ್ನು ನೇಮಕಾತಿ ಮಾಡುತ್ತಿದ್ದ ಪಾಕಿಸ್ತಾನದ ಪ್ರಜೆ ಸೇರಿದಂತೆ ಮೂವರು ಉಗ್ರರಿಗೆ ನಗರದ 49ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆದರೆ ಶಿಕ್ಷೆಯನ್ನು ಪ್ರಕಟಿಸಿಲ್ಲ.

ಮೈಸೂರಿನ ಟಿಪ್ಪು ನಗರದ ಸೈಯದ್‌ ಅಬ್ದುಲ್‌ ರೆಹಮಾನ್‌ ಅಲಿಯಾಸ್‌ ಅಬ್ದುಲ್‌ ರೆಹಮಾನ್‌ (25), ಪಾಕಿಸ್ತಾನದ ಕರಾಚಿ ಮೂಲದ ಮೊಹಮದ್‌ ಫಹಾದ್‌ ಹೈ ಅಲಿಯಾಸ್‌ ಮೊಹಮದ್‌ ಖೋಯಾ (30) ಮತ್ತು ಬೆಂಗಳೂರಿನ ಲಕ್ಕಸಂದ್ರದ ಅಪ್ಸರ್‌ ಪಾಷಾ ಅಲಿಯಾಸ್‌ ಖಷೀರುದ್ದೀನ್‌ (32) ಬಂಧಿತ ಶಿಕ್ಷೆಗೆ ಒಳಗಾದವರು.

ಪ್ರತಿದಿನ 1 ಕೋಟಿ ರೂ. ಕದಿಯುವುದು ಸೈಬರ್‌ ಕಳ್ಳರ ಟಾರ್ಗೆಟ್: ನಿಮ್ಮ ಹಣ ಸೇಫ್ಟಿಗೆ ಇಲ್ಲಿದೆ ಮಾರ್ಗ..!

ಈ ಮೂವರನ್ನು ತಪ್ಪಿತಸ್ಥರು ಎಂದು ಫೆ.23ರಂದು ಘೋಷಿಸಿದ್ದ ನ್ಯಾಯಾಲಯ, ಭಾರತೀಯ ದಂಡ ಸಂಹಿತೆ, ಭಾರತೀಯ ಸಶಸ್ತ್ರ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಶಿಕ್ಷೆ ವಿಧಿಸಿ ಶುಕ್ರವಾರ (ಮಾ.3) ತೀರ್ಪು ಪ್ರಕಟಿಸಿದೆ.

ಪಾಕಿಸ್ತಾನದ ಮೊಹಮದ್‌, ಕೇರಳದ ಕೋಜಿಕೋಡ್‌ ಪ್ರಕರಣದಲ್ಲಿ 8 ವರ್ಷ ಮತ್ತು ಮೈಸೂರಿನ ವಿಜಯನಗರ ಪೊಲೀಸ್‌ ಠಾಣೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಹಾಗೆಯೇ, ಭಾರತೀಯ ವಿಜ್ಞಾನ ಸಂಸ್ಥೆ ಮೇಲಿನ ದಾಳಿ ಪ್ರಕರಣದಲ್ಲಿ ಅಪ್ಸರ್‌ ಪಾಷಾ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ.

ಕೊಲೆ, ದರೋಡೆ ಹಾಗೂ ಕಳ್ಳತನ ಪ್ರಕರಣದಲ್ಲಿ 2011ರಲ್ಲಿ ಜೈಲು ಸೇರಿದ್ದ ಅಬ್ದುಲ್‌ ರೆಹಮಾನ್‌ಗೂ ಪಾಕ್‌ ಪ್ರಜೆ ಮತ್ತು ಅಪ್ಸರ್‌ಗೆ ಪರಿಚಯವಾಗಿತ್ತು. ಅಲ್ಲಿಂದ ಮೂವರು ಸೇರಿ ದೇಶದಲ್ಲಿ ಲಷ್ಕರ್‌ ಇ-ತೋಯಿಬಾ ಉಗ್ರ ಸಂಘಟನೆಗೆ ಒಳಸಂಚು ರೂಪಿಸಿದ್ದರು. ಅಮಾಯಕ ಯುವಕರಿಗೆ ಉಗ್ರ ಸಂಘಟನೆಗೆ ಸೇರಲು ಪ್ರೇರೇಪಿಸಿ ಭಯೋತ್ಪಾದಕ ಚಟುವಟಿಕೆಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮತ್ತು ಹಿಂದು ಸಂಘಟನೆ ಮುಖ್ಯಸ್ಥರ ಹತ್ಯೆಗೆ ಸಂಚು ರೂಪಿಸಿದ್ದರು. ಮತೀಯ ಗಲಭೆ ಉಂಟು ಮಾಡಲು ಹಣ, ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಪಡೆಯುತ್ತಿರುವ ಖಚಿತ ಲಭ್ಯವಾಗಿತ್ತು.

Bengaluru: ಯುಕೆನಲ್ಲಿ ಕೆಲಸ ಕೊಡಿಸೋದಾಗಿ ಮಹಿಳೆಯರಿಗೆ ವಂಚನೆ: ನೈಜೀರಿಯಾ ಪ್ರಜೆಯ ಬಂಧನ

10 ವರ್ಷ ಸುದೀರ್ಘ ವಿಚಾರಣೆ

2012 ಮೇ 7ರಂದು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಂದಿನ ಇನ್‌ಸ್ಪೆಕ್ಟರ್‌ ಕೆ.ಸಿ. ಅಶೋಕನ್‌ ಅವರ ನೇತೃತ್ವದ ತಂಡ ಜೈಲಿನಿಂದ ಹೊರಬಂದಿದ್ದ ಅಬ್ದುಲ್‌ ರೆಹಮಾನ್‌ನನ್ನು ಬಂಧಿಸಿತ್ತು. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಜೈಲಿನಲ್ಲಿ ಉಗ್ರರ ಸಂಪರ್ಕದಿಂದ ಕೃತ್ಯ ಎಸಗಲು ಸಜ್ಜಾಗಿರುವ ಮಾಹಿತಿ ಲಭ್ಯವಾಗಿತ್ತು. ಬಂಧಿತನಿಂದ 1 ರಿವಾಲ್ವಾರ್‌, 4 ಜೀವಂತ ಗುಂಡು, 2 ಮೊಬೈಲ್‌, ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿದ್ದ ಸಿಸಿಬಿ ಅಧಿಕಾರಿಗಳು ಆಡುಗೋಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿ ಕೋರ್ಚ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

2013ರಿಂದ 10 ವರ್ಷ ಕಾಲ ಸುಧೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಮೂವರು ಆರೋಪಿಗಳನ್ನು ದೋಷಿಗಳಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಪರ ಸರ್ಕಾರಿ ಅಭಿಯೋಜಕ ಸಿ.ಎ. ರವೀಂದ್ರ ವಾದ ಮಂಡಿಸಿದ್ದರು.