ಪ್ರತಿದಿನ 1 ಕೋಟಿ ರೂ. ಕದಿಯುವುದು ಸೈಬರ್ ಕಳ್ಳರ ಟಾರ್ಗೆಟ್: ನಿಮ್ಮ ಹಣ ಸೇಫ್ಟಿಗೆ ಇಲ್ಲಿದೆ ಮಾರ್ಗ..!
2022ರಲ್ಲಿ ಅಮಾಯಕರ 363 ಕೋಟಿ ರೂ.ಗಳು ಸೈಬರ್ ಕಳ್ಳರ ಪಾಲಾಗಿದೆ.
ಬೆಂಗಳೂರಿನಲ್ಲಿಯೇ ಅತ್ಯಧಿಕ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ.
ಎಸ್‌ಎಂಎಸ್, ಲಿಂಕ್ ಹಾಗೂ ಮೊಬೈಲ್ ಕರೆ ಮೂಲಕ ಬ್ಯಾಂಕ್ ಖಾತೆಗೆ ಕನ್ನ
ಬೆಂಗಳೂರು (ಫೆ.27): ರಾಜ್ಯದಲ್ಲಿ ಸೈಬರ್ ಅಪರಾಧಗಳು ದಿನೇದಿನೆ ಹೆಚ್ಚಾಗುತ್ತಿದ್ದು, ದಿನಕ್ಕೆ 1 ಕೋಟಿ ರೂ. ಸೈಬರ್ ಕಳ್ಳರ ಪಾಲಾಗುತ್ತಿದೆ. ಅದರಲ್ಲಿಯೂ ಬೆಂಗಳೂರು ನಗರದಲ್ಲಿ ಬರೋಬ್ಬರಿ ಶೇ.70ರಷ್ಟು ಜನರು ಸೈಬರ್ ಕ್ರೈಂಗೆ ಒಳಗಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. 2022ರಲ್ಲಿ ಅಮಾಯಕರ 363 ಕೋಟಿ ರೂ.ಗಳು ಸೈಬರ್ ಕಳ್ಳರ ಪಾಲಾಗಿದೆ.
ನಮ್ಮದು ಐಟಿ-ಬಿಟಿ ಸಿಟಿ. ನಮ್ಮ ದೇಶ ತಂತ್ರಜ್ಞಾನದಲ್ಲಿ ಭಾರಿ ಮುಂದುವರೆಯುತ್ತಿದೆ ಎನ್ನುವುದು ನಮ್ಮ ಹೆಮ್ಮೆಯಾಗಿದೆ. ಹೀಗಾಗಿ, ಮಹಾನಗರ, ಪಟ್ಟಣ, ಹಳ್ಳಿ ಸೇರಿ ಕುಗ್ರಾಮಗಳಲ್ಲಿಯೂ ಸ್ಮಾರ್ಟ್ ಫೋನ್ ಇಟ್ಟುಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. ಆದರೆ, ಹೀಗೆ ಸ್ಮಾರ್ಟ್ ಫೋನ್‌ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸೈಬರ್ ಕಳ್ಳರ ಹಾವಳಿಯೂ ಹೆಚ್ಚಾಗುತ್ತಿದೆ. ಎಲ್ಲ ಬ್ಯಾಂಕುಗಳು ಸುಲಭ ಹಣ ವರ್ಗಾವನೆಗೆ ಅನುಕೂಲ ಆಗಲೆಂದು ಆನ್‌ಲೈನ್ ಪೇಮೆಂಟ್ ಆಪ್‌ಗಳನ್ನು ಅಬೀವೃದ್ಧಿಪಡಿಸಿವೆ. ಆದರೆ, ಅಂತಹ ಖಾತೆದಾರರನ್ನು ಗುರಿಯಾಗಿಟ್ಟುಕೊಂಡು ಸೈಬರ್ ಕಳ್ಳರು ಹಣ ದೋಚುತ್ತಿದ್ದಾರೆ.
Bengaluru: ಯುಕೆನಲ್ಲಿ ಕೆಲಸ ಕೊಡಿಸೋದಾಗಿ ಮಹಿಳೆಯರಿಗೆ ವಂಚನೆ: ನೈಜೀರಿಯಾ ಪ್ರಜೆಯ ಬಂಧನ
ಎಸ್‌ಎಂಎಸ್, ಆನ್‌ಲೈನ್ ಲಿಂಕ್ ಮೂಲಕ ಖಾತೆಗೆ ಕನ್ನ: ಇನ್ನು ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್‌ಫೋನ್ ಇರುವುದರಿಂದ ಮೊಬೈಲ್ ಬ್ಯಾಂಕಿಂಗ್ (ಗೂಗಲ್ ಪೇ, ಫೋನ್ ಪೇ, ಪೇಟಿಎಂ, ವಾಟ್ಸ್‌ಆಪ್‌ಪೇ), ವ್ಯಾಲೇಟ್, ನೆಟ್ ಬ್ಯಾಂಕಿಂಗ್‌ಗಳ ಮೂಲಕ ಹಣ ಸಂದಾಯ ಮಾಡುವುದು ಸರ್ವೇಸಾಮಾನ್ಯವಾಗಿದೆ. ದಿನ ಬೆಳಗಾದರೆ ಹಾಲು ಖರೀದಿಯಿಂದ ಶುರುವಾಗಿ ರಾತ್ರಿ ಮಲಗುವವರೆಗೂ ಆನ್‌ಲೈನ್ ಸೇವೆ ಅತ್ಯಗತ್ಯವಾಗಿದೆ. ಇದನ್ನೇ ಚೆನ್ನಾಗಿ ಕರಗತ ಮಾಡಿಕೊಂಡಿರುವ ಸೈಬರ್ ಕಳ್ಳರು, ಹಲವು ನೆಪದಲ್ಲಿ ಅಮಾಯಕ ಜನರ ಮೊಬೈಲ್‌ಗೆ ಕರೆ, ಎಸ್ಎಂಎಸ್ ಅಥವಾ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ.
ಸರ್ಕಾರದ ಹೊಸ ಯೋಜನೆಗಳೇ ಟಾರ್ಗೆಟ್: ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸದಾಗಿ ಆನ್‌ಲೈನ್ ಸೇವೆಗೆ ಯಾವ ಯೋಜನೆ ಅಥವಾ ಸೌಲಭ್ಯಗಳು ಬರುತ್ತವೆ ಎಂಬುದನ್ನೇ ಟಾರ್ಗೆಟ್ ಮಾಡಿ ಸೈಬರ್ ಕಳ್ಳರು ಗಾಳ ಹಾಕುತ್ತಿದ್ದಾರೆ. ಇತ್ತೀಚೆಗೆ ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಕರೆ ಮಾಡಿ ವಿದ್ಯುತ್ ಬಿಲ್ ಪಾವತಿಸಿಲ್ಲ. ಕೂಡಲೇ ಪಾವತಿ ಮಾಡದಿದ್ದರೆ ಸಂಪರ್ಕ ಕಡಿತ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಿಕೊಳ್ಳುತ್ತಿದ್ದರು. ಹಣ ಪಾವತಿಯಾದ ತಕ್ಷಣ ಅಪ್‌ಡೇಟ್ ಮಾಡುವುದಾಗಿ ಹೇಳಿ ಬೆಸ್ಕಾಂ ಗ್ರಾಹಕರ ವ್ಯಾಲೇಟ್ ಅಥವಾ ಬ್ಯಾಂಕ್ ಖಾತೆ ವಿವರ ಪಡೆದು ಲಕ್ಷಾಂತರ ರೂ.ಗಳನ್ನು ಕ್ಷಣಾರ್ಧದಲ್ಲಿ ದೂಚುತ್ತಿದ್ದರು.
ಟ್ರೆಂಡಿಂಗ್ ಬಿಸಿಜೆಸ್ ನೆಪದಲ್ಲಿ ಹಣ ಹೂಡಿಕೆ: ಮತ್ತೊಂದೆಡೆ ಟ್ರೇಡಿಂಗ್ ಬಿಜಿನೆಸ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ಕೆಲ ತಿಂಗಳಿಂದ ಸೈಬರ್ ಕಳ್ಳರು ಬಲೆಬೀಸುತ್ತಿದ್ದಾರೆ. ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಂನಲ್ಲಿ ಗ್ರೂಪ್ ತೆರೆದು ಜಾಹೀರಾತು ಕೊಟ್ಟು ಮೊದಲು ಹೂಡಿಕೆ ಮಾಡಿದವರಿಗೆ ಹೆಚ್ಚಿನ ಲಾಭಾಂಶ ಕೊಡುತ್ತಿದ್ದಾರೆ. ಬಳಿಕ ಡ್ರಾ ಮಾಡಲು ಸಾಧ್ಯವಾಗದಂತೆ ಮಾಡುತ್ತಾರೆ. ಮತ್ತಷ್ಟು ಹಣ ಹೂಡಿಕೆ ಮಾಡಿದರೆ ನಿಮ್ಮ ಖಾತೆಗೆ ಜಮೆ ಆಗಲಿದೆ ಎಂದು ಹೇಳಿ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿದ್ದಾರೆ.
ಕೆವೈಸಿ ಅಪ್‌ಡೇಟ್ ನೆಪದಲ್ಲಿ ಸುಲಿಗೆ: ಬ್ಯಾಂಕ್ ಖಾತೆಗೆ, ವ್ಯಾಲೇಟ್, ಪ್ಯಾನ್ ಕಾರ್ಡ್ ಕೆವೈಸಿ ಮಾಡಬೇಕೆಂದು ಹೇಳಿ ಒಟಿಪಿ ಪಡೆದು ವಂಚನೆ ಮಾಡುತ್ತಿರುವುದು ಮುಂದುವರಿದಿದೆ. ವಿದೇಶದಲ್ಲಿ ನೌಕರಿ, ಉಡುಗೊರೆ, ಲಾಟರಿ, ಕಡಿಮೆ ಬೆಲೆಗೆ ವಸ್ತುಗಳ ಮಾರಾಟ, ಮ್ಯಾಟ್ರಿಮೋನಿಯಲ್ ಸೇರಿ ನಾನಾ ರೂಪದಲ್ಲಿ ಅಮಾಯಕರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಸಾಕಷ್ಟು ಜನರು ಜಾಗೃತರಾಗುತ್ತಿದ್ದರೂ ಸೈಬರ್ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ರಾಜ್ಯದಲ್ಲಿ 2021ರಲ್ಲಿ 8,132 ಸೈಬರ್ ಕ್ರೈಂ ನಡೆದಿದ್ದು, 3,501 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. 2022ರಲ್ಲಿ 12,551 ಪ್ರಕರಣಗಳಲ್ಲಿ 2,701 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಜನರಲ್ಲಿ ಜಾಗೃತಿ ಮೂಡಿದ ಪರಿಣಾಮ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರ್ಜಾತಿ ವಿವಾಹ ಆಗಿದ್ದ ಯುವತಿ ನೇಣಿಗೆ ಶರಣು: ಕುಟುಂಬಸ್ಥರಿಂದ ಭಾರೀ ಕಿರುಕುಳ
ಹಣ ಕಡಿತವಾದ ಕೂಡಲೇ 112ಕ್ಕೆ ಕರೆ ಮಾಡಿ: ಸೈಬರ್ ಅಪರಾಧ ಎಸಗುವ ಆರೋಪಿಗಳನ್ನು ಬಂಧನ ಮಾಡುವುದು ಕಷ್ಟಸಾಧ್ಯವಾಗಿದೆ. ಅಜ್ಞಾತ ಸ್ಥಳದಲ್ಲಿ ಅತ್ಯಾಧುನಿಕ ಉಪಕರಣ ಬಳಸಿ ಕೃತ್ಯ ಎಸಗಿದಾಗ ಸ್ಥಳ ಗುರುತಿಸುವುದು ಮತ್ತು ಸೆರೆ ಹಿಡಿಯುವುದಕ್ಕೆ ಸಾಕಷ್ಟು ಸಮಯ ಮತ್ತು ಹಣ ವೆಚ್ಚವಾಗಲಿದೆ. ಜನರು ಸೈಬರ್ ಕಳ್ಳರಿಂದ ವಂಚನೆಗೆ ಒಳಗಾದ ಕೂಡಲೇ ಪೊಲೀಸ್ ಕಂಟ್ರೋಲ್ 112ಕ್ಕೆ ಕರೆ ಮಾಡಿ ದೂರು ಸಲ್ಲಿಸಿದರೆ ಫಲಾನುಭವಿ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿ ಹಣ ವಾಪಸ್ ಪಡೆಯಲು ಸುಲಭ ಅವಕಾಶವಿದೆ. ಹಣ ಜಪ್ತಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ಈ ಸೇವೆ ಮತ್ತಷ್ಟು ಸರಳೀಕರಣ ಆಗುತ್ತಿದ್ದು, ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಹಣ ರಕ್ಷಣೆಗೆ ನಾವೇನು ಮಾಡಬೇಕು:
- ನಿಮ್ಮ ಮೊಬೈಲ್‌ಗೆ ಯಾವುದೇ ಕೊಡುಗೆ, ಹಣ, ಆಫರ್ ಬಂದಿದೆ ಎಂಬ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ.
- ಯಾವುದೇ ಬ್ಯಾಂಕ್‌ನವರು ನಿಮ್ಮ ಮೊಬೈಲ್‌ಗೆ ಕೊಡುಗೆಗಳ ಬಗ್ಗೆ ಮಾಹಿತಿ ಕಳುಹಿಸುವುದಿಲ್ಲ. ಕರೆ ಮಾಡುವುದಿಲ್ಲ.
- ಹೊಸ ಟ್ರೆಂಡಿಂಗ್ ಬಿಜಿನೆಸ್‌ಗೆ ಹಣ ಹೂಡಿಕೆ ಮಾಡಬೇಡಿ.
- ಸರ್ಕಾರದ ಹೊಸ ಯೋಜನೆಗಳ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಮಾತ್ರ ಓಪನ್ ಮಾಡಿ
- ವಾಟ್ಸಾಪ್, ಟೆಲಿಗ್ರಾಂ ಆಪ್‌ಗಳಲ್ಲಿ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ
- ಯಾರೊಂದಿಗೂ ಯಾವುದೇ ಒಟಿಪಿ (OTP) ಹಂಚಿಕೊಳ್ಳಬೇಡಿ
- ಯಾವುದೇ ಸಂದರ್ಭದಲ್ಲಿ ಬ್ಯಾಂಕ್ ಖಾತೆಯಿಂದ ಹಣ ಕಡಿತವಾದರೆ 112ಕ್ಕೆ ಕರೆ ಮಾಡಬೇಕು.