ವಿಧಾನ ಪರಿಷತ್‌ ಮಾಜಿ ಸದಸ್ಯ ದಯಾನಂದರೆಡ್ಡಿ ಅವರನ್ನು ಬೆಂಗಳೂರಿನ ಆನೇಕಲ್ ಬಳಿ ಕೇರಳ ಮೂಲದ ಗ್ಯಾಂಗ್ ಅಪಹರಿಸಿದೆ. ₹10 ಕೋಟಿ ಸುಪಾರಿ ನೀಡಲಾಗಿದೆ ಎಂದು ಬೆದರಿಸಿ, ನಂತರ ₹2 ಕೋಟಿಗೆ ಬೇಡಿಕೆಯಿಟ್ಟು, ಹಣ ನೀಡುವುದಾಗಿ ಒಪ್ಪಿದ ನಂತರ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್‌: ವಿಧಾನ ಪರಿಷತ್‌ ಮಾಜಿ ಸದಸ್ಯ ದಯಾನಂದರೆಡ್ಡಿ ಅವರನ್ನು ಕೇರಳ ಮೂಲದ ಕಿಡ್ನಾಪ್‌ ಗ್ಯಾಂಗ್‌ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟು, ಬಿಟ್ಟುಕಳಿಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ಸೋಮವಾರ ತಡರಾತ್ರಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾತ್ರಿ 12.15ರ ಸುಮಾರಿಗೆ ಘಟನೆ ನಡೆದಿದ್ದು, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ತಡರಾತ್ರಿ ಗೋಲ್ಡ್ ಕಾಯಿನ್ ಕ್ಲಬ್​ನಿಂದ ದಯಾನಂದರೆಡ್ಡಿ ಹೊರಟಿದ್ದರು. ಬೈಕಲ್ಲಿ ಬಂದ ಕೇರಳ ಮೂಲದವರು ದಯಾನಂದರೆಡ್ಡಿ ಕಾರನ್ನು ಅಡ್ಡಗಟ್ಟಿ ಗಿಫ್ಟ್ ಬಂದಿದೆ ಎಂದು ಎಂದಿದ್ದಾರೆ. 

10 ಕೋಟಿ ಸುಪಾರಿ

ಕಾರಿನ ಬಾಗಿಲು ತೆರೆಯುತ್ತಿದ್ದಂತೆ ಕಾರಿಗೆ ನುಗ್ಗಿರುವ ಓರ್ವ, ಗನ್ ತೋರಿಸಿ ಹೇಳಿದ ಕಡೆ ಕಾರು ಚಲಾಯಿಸಲು ಸೂಚಿಸಿದ್ದಾನೆ. ಬಳಿಕ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಇವರನ್ನು ಹಿಂಬಾಲಿಸಿದ್ದಾರೆ. ಅತ್ತಿಬೆಲೆ ಕೆಎಚ್​ಬಿ ಬಡಾವಣೆ ಬಳಿ ಕರೆದೊಯ್ದು ‘ನಿನ್ನ ಹತ್ಯೆಗೆ ₹10 ಕೋಟಿ ಸುಪಾರಿ ಕೊಟ್ಟಿದ್ದಾರೆ’ ಎಂದು ದಯಾನಂದರೆಡ್ಡಿ ಕುತ್ತಿಗೆಗೆ ಗನ್ ಇಟ್ಟಿದ್ದಾರೆ.

‘ಆ ಹಣವನ್ನು ತಾನೇ ಕೊಡುತ್ತೇನೆ, ಕೊಲ್ಲಬೇಡಿ’ ಎಂದು ದಯಾನಂದರೆಡ್ಡಿ ಮನವಿ ಮಾಡಿದ್ದಾರೆ. ₹3 ಕೋಟಿ ಕೇಳಿದ್ದ ಗ್ಯಾಂಗ್‌ ಕೊನೆಗೆ ₹2 ಕೋಟಿಗೆ ಒಪ್ಪಿದ್ದಾರೆ. ಬೆಳಗ್ಗೆ ಬ್ಯಾಂಕ್ ತೆರೆದ ಬಳಿಕ ನೀಡೋದಾಗಿ ದಯಾನಂದರೆಡ್ಡಿ ಕೇಳಿಕೊಂಡಿದ್ದು, ಹಣ ಡ್ರಾ ಮಾಡಿದ ಬಳಿಕ ಕರೆ ಮಾಡುವಂತೆ ತಿಳಿಸಿ ಅವರನ್ನು ಬಿಟ್ಟುಕಳುಹಿಸಿದ್ದಾರೆ.