ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತೆ ವಿಚಾರವಾಗಿ ಇಬ್ಬರು ಗೆಳೆಯರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಗೆಳತಿಯ ಮನೆಗೆ ಬಂದು ಹೋಗುತ್ತಿದ್ದ ಸ್ನೇಹಿತ ರಾಮಚಂದ್ರನ ಮೇಲೆ ಸಿಟ್ಟಿಗೆದ್ದ ಹರೀಶ್, ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.
ಬೆಂಗಳೂರು: ತಮ್ಮ ಸ್ನೇಹಿತೆ ವಿಚಾರವಾಗಿ ಇಬ್ಬರು ಗೆಳೆಯರ ನಡುವಿನ ಕಿತ್ತಾಟವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟಾಲಮ್ಮ ಲೇಔಟ್ ನಿವಾಸಿ ರಾಮಚಂದ್ರ (46) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಕೂಲಿ ಕಾರ್ಮಿಕ ಹರೀಶ್‌ನನ್ನು ಬಂಧಿಸಲಾಗಿದೆ. ತಮ್ಮ ಮನೆ ಹತ್ತಿರದಲ್ಲಿರುವ ಸ್ನೇಹಿತೆ ಮನೆಗೆ ಶುಕ್ರವಾರ ರಾತ್ರಿ ರಾಮಚಂದ್ರ ತೆರಳಿದ್ದಾಗ ಈ ಹತ್ಯೆ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿಯಿಂದ ದೂರವಾಗಿದ್ದ ಮಹಿಳೆ
ಮೃತ ರಾಮಚಂದ್ರ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ಹಲವು ವರ್ಷಗಳಿಂದ ಕಾಡುಗೋಡಿ ಹತ್ತಿರದ ಪಟಾಲಮ್ಮ ಲೇಔಟ್‌ನಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ವಾಸವಾಗಿದ್ದ. ಈರುಳ್ಳಿ ಮಾರಾಟ ಮಳಿಗೆಯಲ್ಲಿ ಲಾರಿ ಚಾಲಕನಾಗಿದ್ದ ಆತನಿಗೆ ಅದೇ ಮಳಿಗೆಯ ಕೆಲಸ ಮಾಡುತ್ತಿದ್ದ ಮಹಿಳೆ ಪರಿಚಯವಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ತೊರೆದು ಆಕೆ ಏಕಾಂಗಿಯಾಗಿ ವಾಸವಾಗಿದ್ದಳು.
ಕಲ್ಲು ಎತ್ತಿ ಹಾಕಿ ಹರೀಶ್ ಹತ್ಯೆ
ಈ ಸ್ನೇಹವು ಅಕ್ರಮ ಸಂಬಂಧಕ್ಕೆ ತಿರುಗಿದೆ. ಇನ್ನು ಹೊಸಕೋಟೆ ತಾಲೂಕಿನ ಹರೀಶ್ ಕೂಡ ಅದೇ ಏರಿಯಾದಲ್ಲಿ ವಾಸವಾಗಿದ್ದ. ಆತ ಸಹ ಪತ್ನಿಯಿಂದ ಪ್ರತ್ಯೇಕವಾಗಿದ್ದ. ಹಲವು ದಿನಗಳಿಂದ ಹರೀಶ್ ಜತೆ ಸಹ ಕೂಲಿ ಕಾರ್ಮಿಕ ಮಹಿಳೆಗೆ ಸ್ನೇಹವಾಗಿತ್ತು. ಈ ಗೆಳತಿ ವಿಚಾರವಾಗಿ ರಾಮಚಂದ್ರ ಹಾಗೂ ಹರೀಶ್ ಮಧ್ಯೆ ಮನಸ್ತಾಪವಾಗಿತ್ತು. ತನ್ನ ಗೆಳತಿ ಮನೆಗೆ ರಾಮಚಂದ್ರ ಬಂದು ಹೋಗುತ್ತಿದ್ದದ್ದು ಆತನಿಗೆ ಸಿಟ್ಟು ತರಿಸಿತ್ತು. ಇದೇ ವಿಷಯವಾಗಿ ಪರಸ್ಪರ ಜಗಳವಾಡಿದ್ದರು. ಅಂತೆಯೇ ಸ್ನೇಹಿತೆ ಮನೆಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಮರಳಿ ಬಂದು ದೇವಾಲಯದ ಬಳಿ ರಾಮಚಂದ್ರ ಮರಳಿದ್ದ. ಆಗ ಆತನ ಮೇಲೆ ಕಲ್ಲು ಎತ್ತಿ ಹಾಕಿ ಹರೀಶ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

