ಹೊಸ ಬ್ಯುಸಿನೆಸ್ ಆರಂಭಿಸಲು ಹಣವಿಲ್ಲದೆ, ವ್ಯಕ್ತಿಯೊಬ್ಬ ತನ್ನ ಅಣ್ಣನ ಮನೆಗೆ ನುಗ್ಗಿ ಅತ್ತಿಗೆಯ ಚಿನ್ನಾಭರಣಗಳನ್ನು ಕದ್ದಿದ್ದಾನೆ. ಬೆಂಗಳೂರಿನ ಬೇಗೂರಿನಲ್ಲಿ ನಡೆದ ಈ ಘಟನೆಯಲ್ಲಿ, ಅಣ್ಣ ಊರಿಗೆ ಹೋದಾಗ ಹೊಂಚು ಹಾಕಿ ಕೃತ್ಯ ಎಸಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬೇಗೂರು (ಆ.25): ಹೊಸ ಬ್ಯುಸಿನೆಸ್ ಶುರು ಮಾಡಲು ಹಣ ಇಲ್ಲದೆ ವ್ಯಕ್ತಿಯೊಬ್ಬ ಅಣ್ಣನ ಮನೆಗೆ ನುಗ್ಗಿ ಅತ್ತಿಗೆಯ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಬೇಗೂರಿನಲ್ಲಿ ನಡೆದಿದ್ದು, ಬೇಗೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
ಮನೆಯಲ್ಲಿ ಅತ್ತಿಗೆ ಒಬ್ಬಳೆ ಇದ್ದಾಗ ಮೈದುನ ಪ್ಲಾನ್!
ವಿನಯ್ ಕುಮಾರ್ ಬಂಧಿತ ಆರೋಪಿ. ಸಂಬಂಧದಲ್ಲಿ ತಮ್ಮನಾಗಿರುವ ವಿನಯ್, ಹೋಟೆಲ್ ಮ್ಯಾನೇಜ್ಮೆಂಟ್ ಓದಿಕೊಂಡಿರೋ ಆರೋಪಿ ವಿನಯ್‌ಗೆ ಹೊಸ ಬ್ಯುಸಿನೆಸ್ ಶುರು ಮಾಡಬೇಕು ಅಂತಾ ನಿರ್ಧರಿಸಿದ್ದಾನೆ. ಆದರೆ ಅದಕ್ಕೆ ಹಣ ಬೇಕಲ್ಲ? ಹಣ ಇಲ್ಲದೆ ಬ್ಯುಸಿನೆಸ್ ಶುರು ಮಾಡೋದು ಹೇಗೆ? ಹೇಗಾದ್ರೂ ಹಣ ಹೊಂದಿಸೋಕೆ ಪ್ಲಾನ್ ಮಾಡಿದ್ದಾನೆ. ಆಗ ತಲೆಗೆ ಬಂದಿದ್ದೇ ಅಣ್ಣನ ಮನೆಯಲ್ಲಿ ಚಿನ್ನಾಭರಣ ಇದ್ದಿರೋ ಮಾಹಿತಿ. ಹೇಗಾದ್ರೂ ಮನೆಯಲ್ಲಿನ ಚಿನ್ನಾಭರಣ ದೋಚಿ ಬ್ಯುಸಿನೆಸ್ ಶುರು ಮಾಡೋಣ ಅಂದ್ಕೊಂಡು ನಿರ್ಧಾರಕ್ಕೆ ಬಂದಿದ್ದಾನೆ. ಅಣ್ಣ ಇರುವಾಗ ಹೋದ್ರೆ ಕೆಲಸ ಆಗಲ್ಲ ಅಂತಾ ತಿಳಿದು, ಅಣ್ಣ ಊರಿಗೆ ಹೋದ ದಿನವೇ ಪ್ಲಾನ್ ಮಾಡಿ ಮನೆಗೆ ಹೋಗಿದ್ದಾನೆ.
ಅಣ್ಣ ಊರಿಗೆ ಹೋಗಿದ್ರಿಂದ ಮನೆಯಲ್ಲಿ ಅತ್ತಿಗೆ ಒಬ್ಬಳೇ ಇರೋದು ಗೊತ್ತಾಗಿದೆ. ದೋಚಲು ಇದೇ ಸಮಯ ಅಂದ್ಕೊಂಡವನೇ ಹೊಂಚು ಹಾಕಿದ್ದಾನೆ. ಇತ್ತ, ಇಂಥ ಹಲ್ಕಟ್ ಕೆಲಸ ಮೈದುನ ಮಾಡ್ತಾನೆ ಅನ್ನೋದು ತಿಳಿಯದ ಅತ್ತಿಗೆ ಎಂದಿನಂತೆ ಮಾತಾಡುತ್ತ ಮನೆಗೆಲಸದಲ್ಲಿ ನಿರತಳಾಗಿದ್ದಾಳೆ.
ಅತ್ತಿಗೆ ಮನೆಯಿಂದ ಹೊರಹೋಗುವುದನ್ನೇ ಕಾದು ಕುಳಿತಿದ್ದ ಆರೋಪಿ. ಮನೆಯ ಕಸಗುಡಿಸಿ ಹೊರಗೆ ಹಾಕಿಬರಲು ಅತ್ತಿಗೆ ಹೋದಾಗಲೇ ಅಲರ್ಟ್ ಆಗಿದ್ದ ಮೈದುನ ಕ್ಷಣಾರ್ಧದಲ್ಲಿ ಚಿನ್ನಾಭರಣ ಕದ್ದು ಮನೆಯಿಂದ ಕಾಲ್ಕಿತ್ತಿದ್ದಾನೆ. ಕಸ ಹಾಕಿ ಮನೆಯೊಳಗೆ ಬಂದರೆ ಮೈದುನ ಇಲ್ಲ. ಅನುಮಾನಗೊಂಡ ಅತ್ತಿಗೆ ಸುತ್ತಲು ಹುಡುಕಾಡಿದಾಗ ಚಿನ್ನಾಭರಣ ಕದ್ದು ಪರಾರಿಯಾಗಿರುವುದು ಗೊತ್ತಾಗಿ ಶಾಕ್ ಆಗಿದ್ದಾಳೆ.
ಅತ್ತಿಗೆ ಕಸ ಹಾಕಿ ಬಂದಾಗ ಮೈದುನ ಇಲ್ಲ, ಚಿನ್ನಾಭರಣ ಇಲ್ಲ!
ಮೈದುನ ಚಿನ್ನಾಭರಣ ದೋಚಿರೋ ವಿಷಯ ಗಂಡನಿಗೆ ತಿಳಿಸಿದ್ದಾಳೆ. ಅತ್ತ ತಮ್ಮನ ಕೃತ್ಯದಿಂದ ಆಘಾತಗೊಂಡ ಅಣ್ಣ ತಮ್ಮನಿಗೆ ಕರೆ ಮಾಡಿ ಚಿನ್ನಾಭರಣ ಕದ್ದಿರುವ ವಿಚಾರ ಪ್ರಶ್ನಿಸಿದ್ದಾನೆ. ವಾಪಸ್ ಕೊಡುವಂತೆ ಕೇಳಿದ್ದಾನೆ. ಚಿನ್ನಾಭರಣ ವಾಪಸ್ ಕೊಡಲು ಒಪ್ಪದೆ, ಬ್ಯುಸಿನೆಸ್ ಮಾಡುತ್ತೇನೆ ಲಾಭ ಬಂದಮೇಲೆ ಕೊಡುತ್ತೇನೆ ಎಂದಿದ್ದಾನೆ ಖದೀಮ ತಮ್ಮ. ಒಂದು ಮಾತು ಹೇಳದೇ ಹೊಂಚು ಹಾಕಿ ಚಿನ್ನಾಭರಣ ಕದ್ದು ಪರಾರಿಯಾದವನು ವಾಪಸ್ ಕೊಡುತ್ತಾನಾ? ಹೀಗಾಗಿ ಅಣ್ಣ ಮುಲಾಜಿಲ್ಲದೆ ತಮ್ಮನ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ದೂರು ದಾಖಲಿಸಿಕೊಂಡ ಪೊಲೀಸರು ಖದೀಮ ತಮ್ಮನ ಪತ್ತೆಗೆ ಕಾರ್ಯಾಚರಣೆಗಿಳಿದು ಆರೋಪಿ ವಿನಯ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತ ಆರೋಪಿಯಿಂದ 10 ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣವು ಯಾರನ್ನೂ ನಂಬದೆ ಎಚ್ಚರಿಕೆ ಇರುವಂತೆ ಪಾಠ ಕಲಿಸಿದೆ.


