ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ರುದ್ರಮ್ಮ ಅಂಗ್ಲ ಮಾಧ್ಯಮ ಶಾಲೆಯಲ್ಲಿ, ಹೋಂ ವರ್ಕ್ ಮಾಡಿಲ್ಲವೆಂಬ ಕಾರಣಕ್ಕೆ 3ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಮನಬಂದಂತೆ ಥಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಯ ಮೈಮೇಲೆ ಬಾಸುಂಡೆ. ಆಕ್ರೋಶಗೊಂಡ ಪೋಷಕರು ಶಿಕ್ಷಕಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ..
ಬಳ್ಳಾರಿ (ನ.20): ಹೋಂ ವರ್ಕ್ ಮಾಡಿಲ್ಲವೆಂಬ ಕಾರಣಕ್ಕೆ 3ನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಮನಬಂದಂತೆ ಥಳಿಸಿದ ಆಘಾತಕಾರಿ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ರುದ್ರಮ್ಮ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.
ಬಾಲಕನ ಮೈಮೇಲೆ ಬಾಸುಂಡೆ:
ಅಕ್ಕಮಹಾದೇವಿ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕಿ. ಮೂರನೇ ತರಗತಿಯಲ್ಲಿ ಓದುತ್ತಿರುವ ಸೈಯದ್ ಎಂಬ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ್ದಾಳೆ. ಹೋಂವರ್ಕ್ ಮಾಡಿಕೊಂಡು ಬಾರದೇ ಇದ್ದಕ್ಕೆ ಕೋಪಗೊಂಡ ಶಿಕ್ಷಕಿ ಬಾಲಕನ ಕೈ-ಕಾಲು, ದೇಹದ ಎಲ್ಲೆಡೆ ಥಳಿಸಿದ್ದರಿಂದ ನೋವಿನಿಂದ ಬಳಲಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಶಿಕ್ಷಕಿಗೆ ಪೋಷಕರಿಂದ ತರಾಟೆ:
ಸೈಯದ್ ಮನೆಗೆ ಬಂದು ತಂದೆ-ತಾಯಿಗೆ ವಿಷಯ ತಿಳಿಸಿದ್ದಾನೆ. ಸಿಟ್ಟಿಗೆದ್ದ ಪೋಷಕರು ಶಾಲೆಗೆ ಧಾವಿಸಿ ಬಂದು ಶಿಕ್ಷಕಿ ಅಕ್ಕಮಹಾದೇವಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಕಿ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೇ ರೀತಿ ಮತ್ತೊಮ್ಮೆ ನಡೆದರೆ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದಾರೆ.ಈ ಘಟನೆಯಿಂದ ಪೋಷಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಶಾಲಾ ಆಡಳಿತ ಮಂಡಳಿ ಶಿಕ್ಷಕಿ ವಿರದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.


